ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಸುಬೋಧ ಯಾದವ

1
138

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಯ ಶಾಲೆಗಳಲ್ಲಿರುವ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಶಾಲೆಗಳ ಬಲವರ್ಧನೆಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಬರುವ ಜುಲೈ ೩ರ ಒಳಗೆ ವರದಿ ನೀಡುವಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾನ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಜೂನ್ ೨೭ ರಂದು ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭಾಗದಲ್ಲಿನ ಶಾಲೆಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಆರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೊತೆ ಚರ್ಚಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಜುಲೈ ೩ರ ಒಳಗೆ ಎಲ್ಲಾ ಡಿಡಿಪಿಐಗಳು ವರದಿ ನೀಡಬೇಕು. ಜುಲೈ ೪ ಅಥವಾ ೫ ರಂದು ಮತ್ತೊಮ್ಮೆ ಪರಾಮರ್ಶಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು, ದುರಸ್ತಿ, ವಿದ್ಯುತ್, ಕಂಪೌಂಡ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡಬೇಕು. ಜಮೀನಿನ ವಿವಾದ ಇಲ್ಲದ ಕಡೆ ಮಾತ್ರ ಕಂಪೌಂಡ್ ನಿರ್ಮಿಸುವ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ಅನುದಾನದ ಬಗ್ಗೆ ಮಾಹಿತಿ ಇಲ್ಲ:- ಶಾಲೆಗಳ ನಿರ್ವಹಣೆಗೆ ಸಾಕಷ್ಟು ಅನುದಾನ ಸರ್ಕಾರದಿಂದ ನೀಡಲಾಗುತ್ತದೆ. ಆದರೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ನೀಡುವ ಅನುದಾನದ ಬಗ್ಗೆ ಮುಖ್ಯೋಪಾಧ್ಯಾಯರಿಗೆ ಸರಿಯಾದ ಮಾಹಿತಿಯೇ ಇಲ್ಲ ಎಂದು ಅವರು ಸಿಟ್ಟಾದರು.

ಹೈದ್ರಾಬಾದ ಕರ್ನಾಟಕದ ಪ್ರದೇಶದ ಆರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ೪೩೬೧೬ ಹುದ್ದೆಗಳು ಮಂಜೂರಾಗಿ ೩೪೭೬೮ ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ೮೮೪೮ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಅದೇ ರೀತಿ ಪ್ರೌಢ ಶಾಲಾ ಶಿಕ್ಷಕ ವೃಂದದಲ್ಲಿ ೧೨೦೪೯ ಹುದ್ದೆಗಳು ಮಂಜೂರಾಗಿ ೯೮೩೩ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ೨೨೧೬ ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಹೈ.ಕ.ಭಾಗದಲ್ಲಿ ೧೧,೦೬೪ ಶಿಕ್ಷಕರ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಈಗಾಗಲೆ ಶಿಕ್ಷಕರ ನೇಮಕಾತಿಗೆ ಪೂರ್ವಭಾವಿಯಾಗಿ ಟಿ.ಇ.ಟಿ. ಪರೀಕ್ಷೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಹುದ್ದೆಗಳು ತುಂಬುವ ನಿರೀಕ್ಷೆ ಇದೆ. ಹುದ್ದೆ ಭರ್ತಿ ಆಗುವವರೆಗೂ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹೊಸ ಶಾಲೆಗಳು ಸ್ಥಾಪನೆ ಮಾಡುವುದಕ್ಕಿಂತ ಇರುವ ಶಾಲೆಗಳಿಗೆ ಉತ್ತಮವಾದ ಸೌಲಭ್ಯ ನೀಡುವುದರ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡುವುದರ ಕಡೆಗೆ ಹೆಚ್ಚಿನ ಗಮನ ನೀಡಿದಾಗ ಮಾತ್ರ ಸುತ್ತಮುತ್ತಲಿನ ಮಕ್ಕಳು ಅಲ್ಲಿನ ಶಾಲೆಗೆ ಪ್ರವೇಶ ಪಡೆಯಲು ಮುಂದಾಗುತ್ತಾರೆ. ಆ ಮೂಲಕ ಶಾಲೆಗಳ ಬಲವರ್ಧನೆಗೆ ಶ್ರಮಿಸಿ ಎಂದು ಶಿಕ್ಷಣ ಇಲಾಖೆಯ ಉಪರ್ದೇಶಕರಿಗೆ ತಿಳಿಸಿದರು.

ಗಣಿತ ಮತ್ತು ಇಂಗ್ಲೀಷ್ ಕೋಚಿಂಗ್ ಕ್ಲಾಸ್:- ಯಾದಗಿರಿಯಲ್ಲಿ ಈ ಹಿಂದೆ ೫೩೫ ಹುದ್ದೆಗಳಿಗೆ ನಾವು ಅರ್ಜಿ ಕರೆದಿದ್ದು, ಅದರಲ್ಲಿ ೩೫೦ ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ. ಬಿ.ಎಡ್ ಮತ್ತು ಡಿ.ಎಡ್ ಮುಗಿಸಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ಗಣಿತ ಮ್ತತು ಇಂಗ್ಲೀಷ್ ವಿಷಯದಲ್ಲಿ ಮೂರು ತಿಂಗಳು ಕೊಚಿಂಗ್ ಕ್ಲಾಸ್ ಪ್ರಾರಂಭ ಮಾಡುವುದಕ್ಕೆ ಹೆ-ಕ ಮಂಡಳಿ ಅನುದಾನ ನೀಡಿದಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿಗೆ ಸಹಾಯವಾಗಲಿದೆ ಎಂದು ಯಾದಗಿರಿ ಡಿಡಿಪಿಐ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಪ್ರಾದೇಶಿಕ ಆಯುಕ್ತರು ಗಣಿತ ಮತ್ತು ಇಂಗ್ಲೀಷ ವಿಷಯದ ಅಭ್ಯರ್ಥಿಗಳು ಲಭ್ಯವಾದಲ್ಲಿ ಖಂಡಿತ ತರಬೇತಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿ ಡಾ.ಬಿ.ಸುಶೀಲಾ, ಜಂಟಿ ಕಾರ್ಯದರ್ಶಿ ಬಸವರಾಜ, ಮಂಡಳಿಯ ಶಿಕ್ಷಣ ಸಲಹೆಗಾರ ಎನ್.ಬಿ.ಪಾಟೀಲ ಸೇರಿದಂತೆ ವಿಭಾಗದ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

1 ಕಾಮೆಂಟ್

  1. ಜುಲೈ ೩ ದೂರವೇನಿಲ್ಲ. ಸುಬೋಧ್ ಯಾದವ್ ಅವರು ಸರ್ಕಾರಕ್ಕೆ ಕಳಿಸಿವ ವರದಿಯ ಪ್ರತಿ ಪಡೆದುಕೊಂಡು ಇಮೀಡಿಯಾ.ಕಾಮ್ ನಲ್ಲಿ ಪ್ರಕಟಿಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here