ಕಲಬುರಗಿ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ,ಅಂತ್ಯ ಸಂಸ್ಕಾರದ ಪರಿಹಾರ, ಮರಣ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಅರ್ಜಿಗಳ ಸಂಪೂರ್ಣ ವಿಲೇವಾರಿಯನ್ನು ಸೆಪ್ಟೆಂಬರ್ 16ರೊಳಗಾಗಿ ಮಾಡಲಾಗುವುದು ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶರು ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ನ್ಯಾ. ಕೆ.ಸುಬ್ರಮಣ್ಯ ಅವರು ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಸಂಯುಕ್ತಾಶ್ರಯದಲ್ಲಿ “ಕಾರ್ಮಿಕ ಅದಾಲತ್” ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಚಾರಕೈಗೊಳ್ಳುವ ಆಟೋಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ನಿಂದ ಮೃತಪಟ್ಟ ಕಟ್ಟಡ ಕಾರ್ಮಿಕರಿಗೆ ಒಂದು ತಿಂಗಳೊಳಗಾಗಿ ಪರಿಹಾರ ಧನವನ್ನು ನೀಡುವಂತೆ ಈಗಾಗಲೇ ಕಾರ್ಮಿಕ ಸಚಿವರು ಸೂಚಿಸಿದ್ದು, ಈ ಕುರಿತು ಕಾರ್ಮಿಕ ಇಲಾಖೆ ಮುತುವರ್ಜಿವಹಿಸಿ ಪರಿಹಾರ ಒದಗಿಸಬೇಕು ಎಂದು ನ್ಯಾ.ಸುಬ್ರಮಣ್ಯ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸೆ.16ರವರೆಗೆ ಕಾರ್ಮಿಕ ಇಲಾಖೆವತಿಯಿಂದ ಕಾರ್ಮಿಕ ಅದಾಲತ್ ಮಾಸ ಎಂದು ಆಚರಿಸಲಾಗುತ್ತಿದೆ. ಕಾರ್ಮಿಕರ ವಿವಿಧ ಯೋಜನೆಗಳ ಮಾಹಿತಿ ನೀಡಲು ಆ.31ರವರೆಗೆ ಆಟೋ ಮೂಲಕ ಜಿಲ್ಲೆಯಾದ್ಯಂತ ಪ್ರಚಾರಕೈಗೊಳ್ಳಲಾಗುತ್ತಿದ್ದು, ಈ ಕಾರ್ಯ ಯಶಸ್ವಿಯಾಗಲೆಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ ಎಂ. ಚೌಗುಲೆ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಜಿಲ್ಲಾ ನ್ಯಾಯವಾದಿ ಸಂಘದ ಕಾರ್ಯದರ್ಶಿ ಪಿ.ಎನ್. ಕಪನೂರ, ಕಾರ್ಮಿಕ ಇಲಾಖೆಯ ಎಸ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಕಲಬುರಗಿ 3ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.