ಬೀದರ : ಇಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಬೀದರ ಜಿಲ್ಲಾ ಘಟಕದ ವತಿಯಿಂದ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಅನಂತರೆಡ್ಡಿ ಬ ರೆಡ್ಡೇನೋರ ಮತ್ತು ಪದಾಧಿಕಾರಿಗಳು ಹಾಗೂ ಸಮಿತಿಯ ಸಕ್ರೀಯ ಕಾರ್ಯಕರ್ತರು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ರಾಜ್ಯ ಸಚಿವರಾದ ಭಗವಂತ ಖೂಬಾ ಅವರಿಗೆ ಭೇಟಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿ ಸೇರಿದಂತೆ ಕಲಬುರಗಿ ದೂರದರ್ಶನ ಕೇಂದ್ರ ಉಳಿಸಿಕೊಳ್ಳಲು ಆಗ್ರಹಿಸಿ ಬೇಡಿಕೆಗಳ ವಿವರವಾದ ಮನವಿ ಪತ್ರವನ್ನು ಸಲ್ಲಿಸಿ ಚರ್ಚಿಸಲಾಯಿತು.
1) ಸುಮಾರು ನಾಲ್ಕು ದಶಕಗಳ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಸ್ಥಾಪನೆಯಾದ ದೂರದರ್ಶನ ಕೇಂದ್ರ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದೇ ಅಲ್ಲಿಯೇ ಉಳಿಸಿಕೊಂಡು ಮತ್ತು ಅದಕ್ಕೆ ಮುಚ್ಚುವ ಯಾವುದೇ ರೀತಿಯ ಕ್ರಮಗಳಿಗೆ ಅವಕಾಶ ಕೊಡದೇ ವಿಶೇಷ ಒತ್ತು ಕೊಡಬೇಕು.
2) ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು, 3) ಹಿಂದುಳಿದ ಮತ್ತು ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಕೇಂದ್ರ ಸರಕಾರದಿಂದ ಪ್ಯಾಕೇಜ ಹಣ ಮಂಜೂರು ಮಾಡಿಸಲು ಮುತುವರ್ಜಿ ವಹಿಸಬೇಕು. 3) 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಿರುವಂತೆ ಪ್ರತ್ಯೇಕ ಮಂತ್ರಾಲಯ ಕಾಲಮಿತಿಯಲ್ಲಿ ಸ್ಥಾಪನೆ ಮಾಡಲು ರಾಜ್ಯ ಸರಕಾರಕ್ಕೆ ಅಧಿಕೃತ ಒತ್ತಡ ತರಬೇಕು.
4) ಬೀದರ-ಕಲಬುರಗಿ ಜಿಲ್ಲೆಗೆ ಮಂಜೂರಾಗಿರುವ ನೀಮ್ಝ್ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕು, 5) ಬೀದರ ಜಿಲ್ಲೆಗೆ ಮಂಜೂರಾದ ಸಿಪೆಟ್ ಕೇಂದ್ರದ ಅನುಷ್ಠಾನಕ್ಕೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು, 6) ನೆನೆಗುದಿಗೆ ಬಿದ್ದಿರುವ ಕಲಬುರಗಿ ರೈಲ್ವೆ ವಿಭಾಗಿಯ ಕಚೇರಿ ಸ್ಥಾಪನೆಗೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು. 7) ಬೀದರ ಜಿಲ್ಲೆಯ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಕಾಲಮಿತಿಯ ಕ್ರಮ ಕೈಗೊಳ್ಳಲು ಒತ್ತಡ ತರಬೇಕು, 8) ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರ, ರಾಯಚೂರು, ಬಳ್ಳಾರಿ ವಿಜಯನಗರ, ಕೊಪ್ಪಳ ಮಾರ್ಗವಾಗಿ ಸಂಚರಿಸಲು ಕಲ್ಯಾಣ ಕರ್ನಾಟಕ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು.
9) ಬೀದರ-ಬೆಂಗಳೂರು (ಕಲಬುರಗಿ ಮಾರ್ಗವಾಗಿ) ಹೊಸ ರೈಲು ಸಂಚಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು, 10) ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕು. ಮೊದಲನೇ ಹಂತವಾಗಿ ಬೀದರನಲ್ಲಿ ಬೃಹತ್ ಕಾರ್ಖಾನೆಗೆ ಕಾಳಜಿ ವಹಿಸಬೇಕು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಸಚಿವರು, ತಮಗೆ ಸಿಕ್ಕಿರುವ ಈ ಜವಾಬ್ದಾರಿಯಿಂದ ತಾವು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿ ಇಟ್ಟಿರುವ ಈ ಬೇಡಿಕೆಗಳ ಬಗ್ಗೆ ತಾವು ಅತೀ ಮುತುವರ್ಜಿ ವಹಿಸಿ ಬದ್ಧತೆ ಪ್ರದರ್ಶಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖ ಮುಖಂಡರುಗಳಾದ ಡಾ.ಸಿ.ಆನಂದರಾವ್, ಬಕ್ಕಪ್ಪ ನಾಗೂರೆ, ಶಿವರಾಜ ಮಾಳಗೆ, ವಿಜಯಕುಮಾರ ರೆಡ್ಡಿ, ಹಣಮು ಪಾಜಿ, ಅನೀಲ ಎಸ್. ಕೃಷ್ಣರೆಡ್ದಿ, ನಾಗೇಶಕುಮಾರ, ಧನರಾಜ ಶೇರಿಕಾರ, ವಿಶ್ವನಾಥ ಉಪ್ಪೆ, ಪ್ರಭಕರ ರೆಡ್ಡಿ, ವಿಜಯಕುಮಾರ ಪಾಟೀಲ ಜಿ. ಸೇರಿದಂತೆ ಮುಂತಾಗಿ ಅನೇಕರು ಉಪಸ್ಥಿತರಿದ್ದರು.