‘ಉದ್ಯೋಗ ಯುವಜನರ ಮೂಲಭೂತ ಹಕ್ಕು’ ಎಂಬ ಘೋಷಣೆಯೊಂದಿಗೆ ಎಐಡಿವೈಓ ಯುವಜನ ಸಮ್ಮೇಳನವನ್ನು ಇದೇ ಅಕ್ಟೋಬರ್ 30ರಂದು ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಜಿಲ್ಲಾ ಮಟ್ಟದ 8ನೇ ಯುವಜನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಓ) ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ ತಿಳಿಸಿದ್ದರು.
ಅವರು ಬುಧವಾರ ಸಂಘಟನೆ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಿಗ್ಗೆ :11 ಗಂಟೆಗೆ ಈ ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮುನಿಸ್ಟ್) ಎಸ್ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ರವರು ಉದ್ಘಾಟಿಸುವರು.
ಅತಿಥಿಗಳಾಗಿ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಕರಿಘೋಳೇಶ್ವರ ಅವರು ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ನಾಯಕರಾದ ಆರ್. ಕೆ.ವೀರಭದ್ರಪ್ಪ ಭಾಗವಹಿಸುವರು. ಮುಖ್ಯ ಭಾಷಣಕಾರರಾಗಿ ಎಐಡಿವೈಓ ನ ರಾಜ್ಯ ಅಧ್ಯಕ್ಷೆ ಎಂ.ಉಮಾದೇವಿ ಹಾಗೂ ಭಾಷಣಕಾರರಾಗಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್. ವಹಿಸುವರು. ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ ವಹಿಸುವರು ಎಂದು ಹೇಳಿದರು.
ಹೋರಾಟವೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿರುವ ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಯುವಜನ ವಿರೋಧಿ ನೀತಿಗಳ ಹೋರಾಟವನ್ನು ಕಟ್ಟಿದೆ. ನಿರುದ್ಯೋಗದ ವಿರುದ್ಧ ಪಾರ್ಲಿಮೆಂಟ್ ಚಲೋ ಚಳುವಳಿ ನಡೆಸಿದೆ. ಕೇಂದ್ರ-ರಾಜ್ಯ ಸರ್ಕಾರಗಳು ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಲಕ್ಷಾಂತರ ಯುವಜನರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಂತವರನ್ನು ನಿರುದ್ಯೋಗಿ ಎಂದು ಪರಿಗಣಿಸಿ ಅವರಿಗೆ ನಿರುದ್ಯೋಗ ಭತ್ಯೆ ನೀಡಲು ಸರಕಾರಗಳು ಮುಂದಾಗಬೇಕು ಅವರ ಜೀವನಕ್ಕೆ ಭದ್ರತೆ ಒದಗಿಸಬೇಕು.
ಹಾಗೇ ರಾಜ್ಯದಲ್ಲಿ ಬಿ.ಎಡ್, ಡಿ.ಎಡ್. ವಿದ್ಯಾರ್ಥಿಗಳ ಸಮಸ್ಯೆಗಳು, ಆನ್ಲೈನ್ ಲಾಟರಿ ವಿರುದ್ಧ, ಐಟಿಐ ತರಬೇತಿದಾರರ ಸೆಮಿಸ್ಟರ್ ಪದ್ಧತಿ ಮತ್ತು ಋಣಾತ್ಮಕ ಅಂಕ ಪದ್ಧತಿ ಯಶಸ್ವಿ ಹೋರಾಟ ಕಟ್ಟಿದೆ. ನೇಮಕಾತಿಯಲ್ಲಿ ನಡೆದ ಅವ್ಯವಹಾರದ ವಿರುದ್ಧ ನೂತನ ಪಿಂಚಣಿ ಯೋಜನೆ ವಿರುದ್ಧ ಧ್ವನಿಯೆತ್ತಿದೆ. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಹೋರಾಟವನ್ನು ಬೆಂಬಲಿಸಿ ಚಳುವಳಿಯಲ್ಲಿ ಭಾಗವಹಿಸಿದೆ ಎಂದು ತಿಳಿಸಿದ್ದರು.
ಜಿಲ್ಲೆಯಲ್ಲಿ ಸಹ ಕಳೆದ ಮೂವತ್ತು ವರ್ಷಗಳಿಂದ ಯುವಜನರ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ ಬಂದಿದೆ .ಶ್ರಮಾಧಾರಿತ ಕಾರ್ಖಾನೆ ಸ್ಥಾಪಿಸಿ, ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು. ಉದ್ಯೋಗದ ನೇಮಕಾತಿಗಾಗಿ ಇರುವ ಅರ್ಜಿ ಶುಲ್ಕ ರದ್ದುಪಡಿಸಬೇಕು. ಅಶ್ಲೀಲ ಸಿನಿಮಾ ಸಾಹಿತ್ಯ ಪ್ರಸಾರ ತಡೆಗಟ್ಟಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ,ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು.
ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಬೆಲೆಯೇರಿಕೆ ನಿಯಂತ್ರಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕುಟುಂಬಕ್ಕೆ ವಾರ್ಷಿಕ ಕನಿಷ್ಠ 200 ಮಾನವ ದಿನಗಳ ಉದ್ಯೋಗ ಖಾತ್ರಿ ಪಡಿಸಬೇಕು. ಕೆಪಿಎಸ್ಸಿ ನೇಮಕಾತಿಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರ ವನ್ನು ತಡೆಗಟ್ಟಬೇಕು.ಹೀಗೆ ಇನ್ನು ಹಲವು ಪ್ರಮುಖ ಬೇಡಿಕೆ ಈಡೇರಿಸುವಂತೆ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವಿವರಿಸಿದ್ದರು ಮತ್ತು ಸಂಘಟನೆಯನ್ನು ಬಲಪಡಿಸಲು ಹಾಗೂ ಹೋರಾಟವನ್ನು ತೀವ್ರಗೊಳಿಸಲು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರುಗಳಾದ ಭೀಮಾಶಂಕರ ಪಾಣೇಗಾಂವ್, ಶರಣು ವಿ.ಕೆ., ಸಿದ್ದು ಚೌದ್ರಿ, ಸದಸ್ಯರಾದ ಅಂಬಿಕಾ ಎಸ್.ಜಿ.,ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರಕರ್, ರಮೇಶ ದೇವಕರ್, ಈಶ್ವರ. ಇ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.