ಕಲಬುರಗಿ: ಆಳಂದ ತಾಲ್ಲೂಕಿನ ಜಿರಳ್ಳಿ ಗ್ರಾಮದ ಮೂಲಭೂತ ಸೌಲಭ್ಯಗಳಿಗಾಗಿ ನವೆಂಬರ್ 18 ರಂದು ಬೆಳಿಗ್ಗೆ 11-30 ಕ್ಕೆ ಜಿಲ್ಲಾ ಪಂಚಾಯತ ಕಾರ್ಯಾಲಯ ಮುಂದೆ ಅಖಿಲ ಭಾರತ ಯುವಜನ ಒಕ್ಕೂಟ ಎಐವೈಎಫ್ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಎಐಸ್ಎಫ್ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐವೈಎಫ ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ.ಅಟ್ಟೂರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಗ್ರಾಮಾಭಿವೃದ್ಧಿಯೆ ರಾಷ್ಟ್ರಅಭಿವೃದ್ಧಿ ಎನ್ನುವಂತೆ ಗ್ರಾಮಗಳು ಅಭಿವೃದ್ಧಿಯಾಗದೆ ಹಲವಾರು ಸಮಸ್ಯೆಗಳಿಂದ ಜನರು ತತ್ತರಿಸಿದ್ದಾರೆ.ಅದೆ ರೀತಿ ಜಿರಳ್ಳಿ ಗ್ರಾಮವು ಕೂಡ ಹಲವಾರು ಮೂಲಭೂತ ಸೌಲಭ್ಯಗಳಿಲ್ಲದೆ ಸಮಸ್ಯೆಗಳಲ್ಲಿಯೇ ಜನರು ಬದುಕು ದೂಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳು ಪರಿಹರಿಸಬೇಕೆ೦ದು ಒತ್ತಾಯಿಸಿದರು.
ಜಿರಳ್ಳಿ ಗ್ರಾಮದ ಸಂಘಟನೆ ಮುಖಂಡರಾದ ದತ್ತಾತ್ರೇಯ ಸೊಡಗೆ ಮಾತನಾಡುತ್ತಾ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಕಾಮಗಾರಿ, ನೀರಿನ ಟ್ಯಾಂಕ, ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗುತ್ತಿಲ್ಲ. ಜನರು ಉದ್ಯೋಗವಿಲ್ಲದೆ ಸಮಸ್ಯೆ ಮಧ್ಯದಲ್ಲಿ ಬದುಕುತ್ತಿದ್ದಾರೆ.
ಹೆಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಿರಳ್ಳಿ ಗ್ರಾಮವು ಹಲವಾರು ವರ್ಷದಿಂದ ಗ್ರಾಮ ಸಭೆ, ವಾರ್ಡ್ ಸಭೆ ಮಾಡದೆ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುತ್ತಿರುವದು ಖಂಡನೀಯ. ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಹಲವಾರು ಬಾರಿ ಗ್ರಾಮ ಪಂಚಾಯತಿ, ತಹಸಿಲ ಕಾರ್ಯಾಲಯದ ಎದುರುಗಡೆ ಹಲವಾರು ಬಾರಿ ಹೋರಾಟ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಸಾಂಕೇತಿಕ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಅನಿಲ ಕಾಂಬ್ಳೆ, ಮಲಕಾರಿ ಪೂಜಾರಿ, ಶರಣಬಸಪ್ಪ ಭಟ್ಟರಗಿ ಇತರರು ಉಪಸ್ಥಿತರಿದ್ದರು.