ಅಡ್ಡಂಡ ಕಾರ್ಯಪ್ಪ”ರ ‘ಬಹುರೂಪಿ’ಯ ರಂಪಾಟ: ಹೊರದಬ್ಬಿಸಿಕೊಂಡ ರಂಗಾಯಣದ ಸೈದ್ಧಾಂತಿಕ ವಿರೋಧಿಗಳೂ.!

0
20
  •  ಕೆ.ಶಿವು.ಲಕ್ಕಣ್ಣವರ

ಮೈಸೂರು ರಂಗಾಯಣ ಇತ್ತೀಚಿನ ದಿನಗಳಲ್ಲಿ ವಿವಾದದ ಕೇಂದ್ರಬಿಂದುವಾಗಿದೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬಿಜೆಪಿ ಪ್ರಚಾರಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ್ ಅವರಿಗೆ ಆಹ್ವಾನ ನೀಡಿದ ಬಳಿಕ ರಂಗಾಯಣ ನಿರ್ದೇಶಕರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿಯ ಬಹುರೂಪಿ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಗಳೂ ಇವೆ. ಇದರ ನಡುವೆಯೇ ರಂಗಾಯಣ ನಿರ್ದೇಶಕರು ತನ್ನ ನಿಲುವನ್ನು ವಿರೋಧಿಸುವವರನ್ನೆಲ್ಲಾ ರಂಗಾಯಣದಿಂದ ಹೊರದೂಡುತ್ತಿರುವುದು ಹೊಸ ವಿದ್ಯಮಾನವಾಗಿದೆ.

ಈಗಾಗಲೇ ಸುಮಾರು ಹತ್ತು ಪ್ರದರ್ಶನಗಳನ್ನು ಕಂಡಿರುವ ಇತ್ತೀಚಿನ ಬಿಜೆಪಿ ನಡೆಯ ಪ್ರಚಾರಕ ಎಸ್‌.ಎಲ್‌.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗ ರೂಪಕ್ಕೆ ಮತ್ತೊಮ್ಮೆ ಹೊಸ ಕಲಾವಿದರನ್ನು ಕರೆದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Contact Your\'s Advertisement; 9902492681

“ರಂಗಾಯಣದ ರಂಗ ಶಿಕ್ಷಣ ಹಾಗೂ ಇತರೆ ರಂಗ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆದ, ನಾಟಕ ತಂಡಗಳಲ್ಲಿ ಅಭಿನಯಿಸಿ ಅನುಭವವಿರುವ ಕಲಾವಿದರಿಗೆ ಆದ್ಯತೆ ನೀಡಲಾಗುವುದು. 18 ರಿಂದ 35 ವರ್ಷದೊಳಗಿನ ಕಲಾವಿದರು ಸ್ವವಿವರದೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ” ಎಂದು ರಂಗಾಯಣ ನಿರ್ದೇಶಕ ಅಡ್ಡಂಡ.ಸಿ.ಕಾರ್ಯಪ್ಪ ಅವರು ಇತ್ತೀಚಿನ ಪ್ರಕಟಣೆಯಲ್ಲಿ ನೀಡಿದ್ದಾರೆ.

# ಮೈಸೂರಿನ ಪ್ರಾದೇಶಿಕ ಪತ್ರಿಕೆ ‘ಆಂದೋಲನ’ದ ವರದಿ‌: ಆದರೆ ರಂಗಾಯಣ ಅಂಗಳದ ಒಳಸುದ್ದಿ ಬೇರೆಯೇ ಇದೆ. ಬಹುರೂಪಿ ವಿಚಾರವಾಗಿ ಎದ್ದ ವಿವಾದದ ಬಳಿಕ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ರಂಗಾಯಣ ಅಂಗಳದಿಂದ ಹೊರಹಾಕಲು ರಂಗಾಯಣ ನಿರ್ದೇಶಕರು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳೂ ಬಂದಿವೆ. ಈ ನಿರ್ದೇಶಕರೂ ಬಿಜೆಪಿಯ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ರಂಗಾಯಣವನ್ನು ಕಟ್ಟಿದ ಹಿರಿಯ ಕಲಾವಿದರನ್ನು ಹೊರಹಾಕುವ ಅಥವಾ ಮೂಲೆ ಗುಂಪು ಮಾಡುವ ಕೆಲಸವನ್ನು ನಿರ್ದೇಶಕರು ಮಾಡುತ್ತಿದ್ದಾರೆ ಎಂದು ‘ಇ-ಮೀಡಿಯಾಲೈನ್’ಗೆ ಕೆಲ ಮೂಲಗಳು ತಿಳಿಸಿವೆ.

ಹಿರಿಯ ಕಲಾವಿದರಾದ ಹುಲುಗಪ್ಪ ಕಟ್ಟೀಮನಿ, ವಿನಾಯಕ್‌ ಭಟ್‌ ಹಾಸಣಗಿ, ರಾಮು ಅವರು ನಿವೃತ್ತಿಯ ಬಳಿಕವೂ ‘ಪರ್ವ’ ನಾಟಕದಲ್ಲಿ ಭಾಗಿಯಾಗಿ ಪಾತ್ರಗಳನ್ನು ನಿರ್ವಹಿಸಿದ್ದರು. ಬಹುರೂಪಿ ವಿವಾದದ ಬಳಿಕ ಈ ಹಿರಿಯ ಕಲಾವಿದರು ನಿರ್ದೇಶಕರ ನಡೆಯನ್ನು ವಿರೋಧಿಸಿದ್ದರು. ಹೀಗಾಗಿ ಇವರನ್ನು ‘ಪರ್ವ’ ನಾಟಕದಿಂದ ಹೊರಗಿಡಲು ನಿರ್ದೇಶಕರು ನಿರ್ಧರಿಸಿದ್ದಾರೆ ಎಂಬ ಆರೋಪಗಳೂ ಬಂದಿವೆ. ಹಿರಿಯ ಕಲಾವಿದರೊಂದಿಗೆ ‘ಇ-ಮೀಡಿಯಾಲೈನ್’ ಮಾತನಾಡಿದಾಗ ಈ ಸುದ್ದಿಯನ್ನು ಅಲ್ಲಗಳೆಯಲಿಲ್ಲ.

“ರಂಗಭೂಮಿ ಯಾವುದೋ ಒಂದು ಪಂಥಕ್ಕೆ ಸೀಮಿತವಾಗಬಾರದು. ರಂಗಭೂಮಿ ಎಡವೂ ಹೌದು, ಬಲವೂ ಹೌದು. ಅದರ ಬಗೆಗೆ ಚರ್ಚೆಗಳಾಗಲಿ. ಆದರೆ ಹಿರಿಯ ಕಲಾವಿದರನ್ನು ಪರಿಗಣಿಸದೇ ಬಹುರೂಪಿ ವಿಚಾರವಾಗಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧವಿದೆ. ಇದನ್ನು ವ್ಯಕ್ತಪಡಿಸಿದ ಬಳಿಕ ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆ. ರಂಗಾಯಣವನ್ನು ಮೂವತ್ತು ವರ್ಷಗಳ ಕಾಲ ಕಟ್ಟಿದ ಕಲಾವಿದರು ತಮ್ಮ ಅಭಿಪ್ರಾಯವನ್ನು ಹೇಳಬಾರದೇ” ಎಂದು ಕೇಳುತ್ತಾರೆ ರಂಗಾಯಣ ಹಿರಿಯ ಕಲಾವಿದ ವಿನಾಯಕ ಭಟ್ ಹಾಸಣಗಿ.

ರಂಗಾಯಣದ ಮತ್ತೊಬ್ಬ ಹಿರಿಯ ಕಲಾವಿದರಾದ ರಾಮು ಅವರು, “ನಮ್ಮನ್ನು ಪರ್ವ ನಾಟಕದಿಂದ ಕೈಬಿಡುತ್ತಾರೆಂಬ ಸುದ್ದಿ ಬಂದಿದೆ. ಅಧಿಕೃತವಾಗಿ ಯಾವುದೇ ಸೂಚನೆಯನ್ನು ನಿರ್ದೇಶಕರು ನೀಡಿಲ್ಲ. ಆದರೆ ಅಡ್ಡಂಡ ಕಾರ್ಯಪ್ಪ ಅವರ ವರ್ತನೆಗಳು ಬಹಳ ಬೇಸರ ತಂದಿದ್ದು, ಅವರು ಪರ್ವ ನಾಟಕಕ್ಕೆ ಕರೆದರೂ ನಾನು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. (ಹುಲುಗಪ್ಪ ಕಟ್ಟೀಮನಿಯವರು ಅವರು ಅಡ್ಡಂಡ ಕಾರ್ಯಪ್ಪ ಅವರ ಕರೆ ಸ್ವೀಕರಿಸಲಿಲ್ಲ)

ಬಹುರೂಪಿ ಅತಿಥಿಗಳ ವಿಚಾರವಾಗಿ ಧ್ವನಿ ಎತ್ತಿದವರಲ್ಲಿ ‘ಪರ್ವ’ ಕಿರಿಯ ಕಲಾವಿದರೂ ಸೇರಿದ್ದಾರೆ. ಅದರ ಮುಂದುವರಿದ ಭಾಗವಾಗಿ ದನಿ ಎತ್ತಿದ ಕಿರಿಯ ಕಲಾವಿದನೊಬ್ಬನನ್ನು ‘ಪರ್ವ’ ನಾಟಕದಿಂದ ಕೈಬಿಡಲಾಗಿದೆ.

# ಪರ್ವ ನಾಟಕದ ಕಿರಿಯ ಕಲಾವಿದರು ಬರೆದಿದ್ದ ಪತ್ರ —

ರಂಗಾಯಣದಿಂದ ಹೊರಬಿದ್ದ ಕಿರಿಯ ಕಲಾವಿದ ಅನುರಾಗ್‌‌ ತಮ್ಮ ಬೇಸರವನ್ನು ಹೇಳಿಕೊಂಡಿದ್ದಾರೆ. “ಕಿರಿಯ ಕಲಾವಿದರ ನಿಲುವನ್ನು ಸಹಿಸದ ನಿರ್ದೇಶಕರು ‘ಪರ್ವ’ ನಾಟಕದಿಂದ ತೆಗೆದು ಹಾಕಲಾಗುವುದೆಂದು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಕಿರಿಯ ಕಲಾವಿದರು ಬರೆದ ಪತ್ರ ಮಾಧ್ಯಮಗಳಿಗೆ ಲಭ್ಯವಾಗಿತ್ತು. ಮಾಧ್ಯಮಗಳಿಗೆ ಪತ್ರವನ್ನು ರವಾನಿಸಿದ್ದರಿಂದ ನನ್ನನ್ನು ಹೊರಗಿಡಲಾಗಿದೆ. ನಾನು ಎರಡು ವರ್ಷಗಳಿಂದ ರಂಗಾಯಣದಲ್ಲಿ ಕೆಲಸ ಮಾಡುತ್ತಿದ್ದೆ” ಎಂದು ಹೇಳಿದರು ಅನುರಾಗ್‌.

ಈ ಕುರಿತು ಅನುರಾಗ್‌ ಅವರು ರಂಗಾಯಣದ ಕಿರಿಯ ಕಲಾವಿದರನ್ನು ಉದ್ದೇಶಿಸಿ ಪತ್ರವನ್ನೂ ಬರೆದಿದ್ದಾರೆ. “ಒಂದು ಪಕ್ಷಕ್ಕೆ ನಿಷ್ಠರಾಗಿರುವ ಅತಿಥಿಗಳು ಬಹುರೂಪಿಗೆ ಬೇಡ ಎಂದೆನಿಸಿದಾಗ ನಾವೆಲ್ಲ ಒಟ್ಟಿಗೆ ಕೂತು ತಾನೇ ಪತ್ರ ಬರೆದಿದ್ದೆವು. ನೀವುಗಳು ಎಲ್ಲರೂ ಓದಿ ತಾನೇ ಪತ್ರಕ್ಕೆ ಸಹಿ ಹಾಕಿದ್ದು. ಆಗ ನಿಮ್ಮಲ್ಲಿ ಇದ್ದ ಪ್ರಶ್ನಿಸುವ ಗುಣ ಮತ್ತು ನಿಮ್ಮ ವ್ಯಕ್ತಿತ್ವ ಈಗ ಎಲ್ಲಿ ಹೋಯಿತು..? ಆಗ ನಿಮ್ಮಲ್ಲಿ ಇದ್ದ ಒಗ್ಗಟ್ಟು ಈಗ ಎಲ್ಲಿ ಹೋಯಿತು..? ಈಗ ಎಲ್ಲಿ ಕಳೆದುಹೋದಿರಿ..?” ಎಂದು ಅನುರಾಗ್‌ ಪ್ರಶ್ನಿಸಿದ್ದಾರೆ.

“ರಂಗಾಯಣದ ಗೇಟಿನ ಮುಂದೆ ಒಂದಿಷ್ಟು ಪ್ರೇಕ್ಷಕರನ್ನು ಹವ್ಯಾಸಿ ರಂಗ ತಂಡದವರು ತಡೆದರೆಂದೂ ಕಾರ್ಯಪ್ಪನವರ ಮೇಲೆ ಮಸಿ ಬಳೆಯುವ ಕೆಲಸ ಆಗುತ್ತಿದೆ ಎಂದೂ ಪತ್ರಿಕಾ ಹೇಳಿಕೆ ಕೊಟ್ಟಿದ್ದೀರಿ. ಗೇಟಿನ ಮುಂದೆ ನನ್ನ ತಂಡದವರೂ ಇದ್ದರು. ತಾಲೀಮು ಮಾಡಲು ಬಂದಿದ್ದರು. ಕಾರ್ಯಪ್ಪನವರು ಪೊಲೀಸರಿಗೆ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳಿದ ಮೇಲೆ ಅವರಿಗೆ ಪ್ರೇಕ್ಷಕರು ಯಾರು, ಬೇರೆ ತಂಡದವರು ಯಾರು ಎಂದು ಹೇಗೆ ಗೊತ್ತಾಗಬೇಕು..? ನೀವೇನು ಪ್ರತ್ಯಕ್ಷವಾಗಿ ಪ್ರೇಕ್ಷಕರನ್ನು ತಡೆಯುವುದನ್ನು ನೋಡಿದಿರಾ..? ನೀವು ಮಾಡುತ್ತಿರುವುದೇನು..? ಯಾರನ್ನು ಒಲೈಸುವುದಕ್ಕೆ ಹೊರಟಿದ್ದೀರಿ..? ಈಗ ನೀವು ಕೊಡುತ್ತಿರುವ ಅಸಂಬದ್ಧ ಹೇಳಿಕೆಗಳಿಂದ ನಿಮ್ಮ ಭವಿಷ್ಯ ಭದ್ರವಾಗುತ್ತದೆಯೇ..? ಇನ್ನೊಂದೆರಡು ತಿಂಗಳು, ಅನಂತರ ಮತ್ತೆ ರಂಗ ಕಾಯಕ ಅರಸುತ್ತಾ ಹೋಗಲೇಬೇಕು. ರಂಗಾಯಣವೇ ಶಾಶ್ವತ ಅಲ್ಲ. ನಿಮ್ಮನ್ನು ಅವರೇನು ಕಾಯಂ ಮಾಡುವುದಿಲ್ಲ. ಕಾರ್ಯಪ್ಪನವರು ಇಷ್ಟು ದಿನ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು ಎನ್ನುತ್ತೀರಿ, ಕೈತುಂಬಾ ಸಂಬಳ ಕೊಟ್ಟರು ಎನ್ನುತ್ತೀರಿ. ಆ ಸಂಬಳ ನಾನೂ ಪಡೆದಿದ್ದೇನೆ. ಆದರೆ ಅದು ಸರ್ಕಾರದ ಹಣ ಅವರ ಸ್ವಂತದ್ದಲ್ಲ” ಎಂದು ತನ್ನ ಸ್ನೇಹಿತರಿಗೆ ಅನುರಾಗ್‌ ತಿಳಿಸಿದ್ದಾರೆ.

ರಂಗಾಯಣದಿಂದ ಒಬ್ಬ ಮಹಿಳಾ ಸಿಬ್ಬಂದಿಯನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳೂ ಬಂದಿವೆ. ಈ ಕುರಿತು ಅಧಿಕೃತ ಮಾಹಿತಿ ದೊರೆತ್ತಿಲ್ಲ.
ಈ ತೆರನಾಗಿ ಈಗ ಮೈಸೂರಿನ ರಂಗಾಯಣ ಈಗ ಬಿಜೆಪಿ ಪಕ್ಷದ ಅಕಾಡವಾಗಿ ಮಾರ್ಪಟ್ಟಿದೆ.

ಈಗ ಹೇಳಿ ಮೈಸೂರಿನ ರಂಗಾಯಣ ಯಾವ ಹಂತ ತಲುಪಿದೆ ಎಂದು.!?

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here