ಶಹಾಬಾದ:ಸೇಡಂ ಶೈಕ್ಷಣಿಕ ಜಿಲ್ಲೆಗೆ ಶಹಾಬಾದ ತಾಲೂಕಾವನ್ನು ಸೇರಿಸಲು ಎಲ್ಲಾ ರೀತಿಯಿಂದ ಸಿದ್ಧತೆ ನಡೆಯುತ್ತಿದೆ.ಯಾವುದೇ ಕಾರಣಕ್ಕೂ ಶಹಾಬಾದ ತಾಲೂಕಾವನ್ನು ಸೇಡಂಗೆ ಸೇರ್ಪಡೆಗೊಳಿಸದೇ ಕಲಬುರಗಿ ಜಿಲ್ಲೆಯಲ್ಲಿಯೇ ಮುಂದುವರೆಯಬೇಕೆಂದು ಕಾಂಗ್ರೆಸ್ ಜಿಲ್ಲಾ ಮುಖಂಡ ವಿಜಯಕುಮಾರ ರಾಮಕೃಷ್ಣ ಹೇಳಿದರು.
ಆಡಳಿತಾತ್ಮಕ ದೃಷ್ಟಿಯಿಂದ ಶಹಾಬಾದ ತಾಲೂಕಾವನ್ನು ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಸೇರ್ಪಡೆಯಾಗಬೇಕು. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಸ್ಥಳೀಯ ಶಾಸಕರು ತುಟಿ ಪಿಟಕ್ ಎಂದು ತೆರೆಯದೇ ಮೌನವಾಗಿದ್ದಾರೆ.ಕೂಡಲೇ ಮೌನ ಮುರಿದರೇ ಮಾತ್ರ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಇಲ್ಲವಾದರೆ ಇಲ್ಲಿನ ಸಾರ್ವಜನಿಕರು, ಶಿಕ್ಷಕರು ದೂರದ ಸೇಡಂ ಶೈಕ್ಷಣಿಕ ಜಿಲ್ಲೆಗೆ ತಿರುಗಾಡಬೇಕಾಗುತ್ತದೆ.
ಶಹಾಬಾದಿಂದ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಕೇವಲ ೨೫ ಕಿಮೀ ಅಂತರವಿದೆ.ಆದರೆ ಅದೇ ಸೇಡಂ ತಾಲೂಕಾಕ್ಕೆ ಹೋಗಬೇಕಾದರೆ ೬೫ ಕಿಮೀ ಹೋಗಬೇಕಾಗುತ್ತದೆ.ಜನರು ತಮ್ಮ ಕೆಲಸ ಕಾರ್ಯಗಳಿಗೆ ಬಹುದೂರ ಅಲೆಯಬೇಕಾದ ಪ್ರಸಂಗ ಎದುರಾಗುತ್ತದೆ.ಅಲ್ಲದೇ ಶಹಾಬಾದ ತಾಲೂಕಿನ ಇತರ ಗ್ರಾಮದಿಂದ ಬಡ ಜನರು ತೆರಳಬೇಕಾದರೆ ಸುಮಾರು ೮೦ ಕಿಮೀ ದೂರವಾಗುತ್ತದೆ.ಎಲ್ಲಾ ರೀತಿಯಿಂದ ಎಲ್ಲರಿಗೂ ಸೇಡಂ ಹೋಗಿ ಬರಲು ಅನಾನೂಕೂಲವಾಗುತ್ತದೆ. ಅಲ್ಲದೇ ಬಹಳ ದೂರವಾಗುತ್ತದೆ.ಆದ್ದರಿಂದ ಕಲಬುರಗಿ ಜಿಲ್ಲೆಯಲ್ಲಿಯೇ ಮುಂದುವರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.