-
ಕೆಯುಡಬ್ಲೂಜೆನಿಂದ ಮನೆಯಂಗಳದಲ್ಲಿ ಗೌರವಾರ್ಪಣೆ ಸಮಾರಂಭದಲ್ಲಿ ಪಿ.ಎಂ. ಮಣ್ಣೂರ್ ಇಂಗಿತ
ಸ್ಥಳೀಯ ಸಣ್ಣ ಪತ್ರಿಕೆಗಳ ಉಳಿವಿಗಾಗಿ ಪ್ಯಾಕೇಜ್ ಘೋಷಣೆ ಮಾಡಬೇಕು. ನಿವೃತ್ತ ಪತ್ರಕರ್ತರಿಗೆ ೧೦ ಸಾವಿರ ರೂ. ಮಾಸಾಶನ ನೀಡಬೇಕು. ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಂದ ಮಾತ್ರ ಅಸ್ಮಿತೆ ಉಳಿದಿದೆ. -ಪಿ.ಎಂ. ಮಣ್ಣೂರ, ಹಿರಿಯ ಪತ್ರಕರ್ತ.
ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತರಿಗೆ ಅವರ ಮನೆ ಅಂಗಳಲ್ಲಿ ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತ ಪಿ.ಎಂ. ಮಣ್ಣೂರ್ ಅವರನ್ನು ಗೌರವಿಸಿತು.
ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ್ ಅವರನ್ನು ಬಸವೇಶ್ವರ ನಗರದ ಅವರ ನಿವಾಸಕ್ಕೆ ತೆರಳಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬರಾವ ಯಡ್ರಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜು ಕೋಷ್ಠಿ, ಪತ್ರಕರ್ತ ಜಗದೀಶ ಕುಂಬಾರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಆಗ ಪತ್ರಿಕೆ ಆರಂಭಿಸುವುದು ಬಹಳ ಸರಳವಾಗಿತ್ತು. ಈಗಿನಂತೆ ಹಲವು ನೀತಿ-ನಿಯಮಗಳಿರಲಿಲ್ಲ. ಆದರೆ ಪತ್ರಿಕೆ ಪ್ರಿಂಟ್ ಮಾಡಿಸುವುದು, ಅಚ್ಚು ಮೊಳೆ ಜೋಡಿಸುವುದು ಮುಂತಾದ ಕೆಲಸಗಳು ಬಹಳ ಕಷ್ಟದಾಯಕವಾಗಿದ್ದವು. ೧೯೬೮-೧೯ರಲ್ಲಿ ನಾನು ಸತ್ಯಕಾಮ ಎಂಬ ವಾರಪತ್ರಿಕೆ ಆರಂಭಿಸಿದೆ. ೧೯೭೨ರಲ್ಲಿ ಜರುಗಿದ ಲೋಕಸಭೆ ಚುನಾವಣೆ ವೇಳೆ ಧರ್ಮರಾವ ಅಫಜಲಪುರಕರ್ ಅವರು ಕಾಂಗ್ರೆಸ್ (ಐ) ಅಭ್ಯರ್ಥಿಯಾಗಿದ್ದರು. ತಮ್ಮ ಸುದ್ದಿ ಕವರೇಜ್ ಮಾಡಲು ಅವರು ೧೦ ಸಾವಿರ ರೂ. ಕೊಟ್ಟಿದ್ದರು. ಹಣ ತೆಗೆದುಕೊಳ್ಳುವ ವೇಳೆಯಲ್ಲೇ ಡಾ. ಶರಣಬಸವಪ್ಪ ಅಪ್ಪ ಅವರು ಸ್ಪರ್ಧಿಸಿದರೆ ನಾನು ಅವರ ಬಗ್ಗೆ ಬರೆಯಬೇಕಾಗುತ್ತದೆ ಎಂದು ಹೇಳಿದ್ದರಿಂದ ಪ್ರಿಂಟ್ ಆದ ಪತ್ರಿಕೆ ಅವರಿಗೆ ಕೊಟ್ಟು ಉಳಿದ ಹಣ ವಾಪಸ್ ಕೊಡಲು ಹೋದಾಗ ಅವರು ನನ್ನ ಪ್ರಾಮಾಣಿಕತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಸತ್ಯಕಾಮ ಪತ್ರಿಕೆಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿದೆ ಎಂದು ತಮ್ಮ ಪತ್ರಿಕಾಲೋಕದ ಪಾದಾರ್ಪಣೆ ಕುರಿತು ಮೆಲುಕು ಹಾಕಿದರು.
ಆ ಚುನಾವಣೆಯಲ್ಲಿ ಅಪ್ಪ ಅವರು ಸೋಲುಂಡರು. ಆದರೆ ಎಪಿಎಂಸಿ ಚೇರ‍್ಮನ್ ಆಗಿದ್ದ ಬಳಬಟ್ಟಿ ವಕೀಲರು, ನನ್ನನ್ನು ಕರೆದು ಒಂದಿಷ್ಟು ದುಡ್ಡು ಕೊಟ್ಟರು. ಅವರು ಕೊಟ್ಟ ಹಣದಿಂದ ಬೆಂಗಳೂರಿಗೆ ಹೋಗಿ ಟೈಪ್ ಮಷಿನ್ ಖರೀದಿಸಿದೆ. ಮಷಿನ್‌ವೊಂದನ್ನು ಬಾಡಿಗೆ ಪಡೆದು ಪ್ರಿಂಟ್ ಹಾಕಿಸುತ್ತಿದ್ದೆ. ಪತ್ರಿಕೆಯ ಒಂದು ಪುಟವನ್ನು ನಾಲ್ಕು ಸಲ ಪ್ರಿಂಟ್ ಹಾಕಬೇಕಿತ್ತು. ನನ್ನ ಪರಿಸ್ಥಿತಿ ನೋಡಲಾರದೆ ಕರ್ನಾಟಕ ಬ್ಯಾಂಕಿನ ಅಧಿಕಾರಿಯೊಬ್ಬರು ನನಗೆ ಲೋನ್ ಮಾಡಿಸಿದರು. ಆಗ ಸ್ವಂತ ಮಷಿನ್ ಹಾಕಿ ಪತ್ರಿಕೆ ಪ್ರಿಂಟ್ ಮಾಡಲು ಶುರು ಮಾಡಿದೆ ಎಂದು ಪತ್ರಿಕಾ ಲೋಕದ ಪಯಣವನ್ನು ವಿವರಿಸಿದರು.
ಕಮಲಾಕರ್ ಲಾಕಪ್ ಡೆತ್ ಪ್ರಕರಣ ಮತ್ತು ಶ್ಯಾಮುವೆಲ್ ಕರಿಯಪ್ಪ ಪ್ರಕರಣದ ಮೂಲಕ ಸತ್ಯಕಾಮ ಆಗ ಎಲ್ಲರ ಮನೆ ಮಾತಾಯಿತು. ಆ ಸಂದರ್ಭದಲ್ಲಿ ಸಂಬಂಧಿಸಿದವರು ನನಗೆ ಹಣ, ಚಿನ್ನದ ಆಸೆ, ಆಮಿಷವೊಡ್ಡಿದರು. ಆದರೆ ನಾನು ಮಾತ್ರ ಪತ್ರಿಕಾ ಧರ್ಮ ಪಾಲಿಸಿಕೊಂಡು ಬಂದೆ. ೧೨ ವರ್ಷದಿಂದ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಾಗಿ ಬೆಳವಣಿಗೆ ಕಂಡಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಪತ್ರಕರ್ತರು ಮುಲಾಜಿಗೆ ಒಳಗಾಗಬಾರದು. ಸುದ್ದಿ ಬರೆಯುವಾಗ ನಮ್ಮ ಓಪನಿಯನ್ ಇರಬಾರದು. ಈಗಿನವರಿಗೆ ಓದು ಕಡಿಮೆ. ವ್ಯವಧಾನ ಇಲ್ಲ. ಪತ್ರಿಕೆಯ ಮೂಲಕ ಹಲವರಿಗೆ ನೆಮ್ಮದಿಯ ಬದುಕು ಕಲ್ಪಿಸಿದ ತೃಪ್ತಿ ನನಗಿದೆ ಎಂಬುದನ್ನು ಹಲವಾರು ಉದಾಹರಣೆ ಕೊಟ್ಟು ತಿಳಿಸಿದರು.