ಚಿಂಚೋಳಿ: ಕಾಳಗಿ ತಾಲೂಕಿನ ಸುಕ್ಷೇತ್ರ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರ ಸದಸ್ಯತ್ವಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ರೇವಗ್ಗಿ ಶ್ರೀ ರೇವಣಸಿದ್ದೇಶ್ವರರ ಭಕ್ತರು ಮತ್ತು ಚಿಂಚೋಳಿ ಮತಕ್ಷೇತ್ರದ ಲಿಂಗಾಯತ ಸಮುದಾಯವು ಶ್ರೀ ರೇವಣಸಿದ್ದೇಶ್ವರ ಜೀರ್ಣೋದ್ಧಾರ ಸಮಿತಿಗೆ ಲಿಂಗಾಯತರು ಅಧ್ಯಕ್ಷರಾಗಬೇಕೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಯಾವುದೇ ರಾಜಕೀಯ ಪಕ್ಷದ ಸದಸ್ಯರು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಲು ಅರ್ಹರಲ್ಲ ಅನ್ನುವಂತಹ ಸರಕಾರದ ನಿರ್ದೇಶನ ಇದ್ದರೂ ಸಹ ಸಂಸದ ಉಮೇಶ ಜಾಧವ್ ಕುಟುಂಬವು ಅಧಿಕಾರದ ದುರ್ಬಳಕೆ ಮಾಡಿಕೊಂಡು ಜಾಧವ ಸಹೋದರ ರಾಮಚಂದ್ರ ಜಾಧವ್ ಅವರಿಗೆ ರೇವಣಸಿದ್ದೇಶ್ವರ ಜೀರ್ಣೋದ್ಧಾರ ಸಮಿತಿಯ ಸದಸ್ಯರನ್ನಾಗಿ ಮಾಡಿ ಅಧ್ಯಕ್ಷ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪಗಳು ಇವೆ.
ಈ ರಾಜಕೀಯ ಅಧಿಕಾರ ದುರ್ಬಳಕೆಯ ಕುರಿತು ಉಚ್ಚ ನ್ಯಾಯಾಲಯ ಪೀಠ ಕಲಬುರ್ಗಿಯಲ್ಲಿ ಸಲ್ಲಿಸಿದ ರಿಟ್ ಅರ್ಜಿ ಮುಖಾಂತರ ಪ್ರಶ್ನಿಸಿದ್ದು, ಮಂಗಳವಾರ ಕಲಬುರಗಿ ಉಚ್ಛ ನ್ಯಾಯಾಲಯ ಪೀಠವು ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರ ಸರಕಾರದ ನೇಮಕ ಆದೇಶಕ್ಕೆ ದಿನಾಂಕ 29.04.2022 ಕ್ಕೆ ತಡೆಯಾಜ್ಞೆ ನೀಡಿದೆ.
ನ್ಯಾಯಲ ನೀಡಿರುವ ತಡೆಯಾಜ್ಞೆ ರೇವಣಸಿದ್ದೇಶ್ವರ ಭಕ್ತರಿಗೆ ಸಂದ ಮೊದಲ ಜಯವಾಗಿದ್ದು, ಶಾಸಕ ಅವಿನಾಶ್ ಜಾಧವ್, ಸಂಸದ ಉಮೇಶ್ ಜಾಧವ್ ಅವರ ಭ್ರಷ್ಟಾಚಾರಕ್ಕೆ ಚಿಂಚೋಳಿ ಮತಕ್ಷೇತ್ರದ ಜನತೆ ಬೇಸತ್ತಿರುವ ಸಮಯದಲ್ಲಿ ಜಾಧವ್ ಕುಟುಂಬವು ಹಣ ಮಾಡುವ ದುರುದ್ದೇಶದಿಂದ ನಮ್ಮ ಭಾಗದಲ್ಲಿಯೇ ಆತಿ ಹೆಚ್ಚು ಭಕ್ತರನ್ನು ಹೊಂದಿದ ಅಲ್ಲದೆ ವರ್ಷಕ್ಕೆ ಸುಮಾರು ಒಂದು ಕೋಟಿ ಹುಂಡಿ ಹಣ ಸ್ವೀಕೃತವಾಗುವ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಾಲಯದ ಲಾಭವನ್ನು ದುರ್ಬಳಕೆ ಮಾಡಿಕೊಳ್ಳವ ಉದ್ದೇಶದಿಂದ ರಾಮಚಂದ್ರ ಜಾಧವ್ ರವರು ಸದಸ್ಯ ಅಲ್ಲದೆ ರೇವಸಿದ್ದೇಶ್ವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಸಿದರು ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆರೋಪಿಸಿದ್ದಾರೆ.
ಉಚ್ಛ ನ್ಯಾಯಾಲಯ ಪೀಠವು ತಡೆಯಾಜ್ಞೆ ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ಚಿಂಚೋಳಿ ಕ್ಷೇತ್ರವನ್ನು ಹಾಳು ಮಾಡಿರುವ ಜಾಧವ್ ಕುಟುಂಬವು ದೇವರ ಗುಡಿಯನ್ನು ಲೂಟಿ ಹೊಡಿಯಲು ಹೊರಟಿದ್ದರು ಆದರೆ ಈ ಉಚ್ಛ ನ್ಯಾಯಾಲಯದ ಆದೇಶದಿಂದ ಜಾಧವ್ ಕುಟುಂಬಕ್ಕೆ ಮುಖಭಂಗವಾಗಿದೆ ಎಂದು ಮೋತಕಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜಾಧವ ಕುಟುಂಬಕ್ಕೆ ರೇವಣಸಿದ್ದೇಶ್ವರರ ಶಾಪವು ತಟ್ಟದೇ ಇರುವುದಿಲ್ಲ. ರೇವಣಸಿದ್ದೇಶ್ವರ ಶಾಪವೇ ಮುಂದೆ ಜಾಧವ್ ಕುಟುಂಬದ ರಾಜಕೀಯ ಅವನತಿಗೆ ಕಾರಣವಾಗುತ್ತದೆ. ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಆದೇಶ ಭಕ್ತರಿಗೆ ಹರ್ಷ ತಂದಿದೆ ಎಂದು ಮಲ್ಲಿಕಾರ್ಜುನ್ ಪಾಟೀಲ್ ಹುಲಗೆರ, ಬಸವರಾಜ ಪಾಟೀಲ ಹೇರೂರು, ಬಸವರಾಜ ಕೊಲಕುಂದಿ, ಚಿತ್ರಶೇಖರ ಪಾಟೀಲ್, ವಿರಷೆಟ್ಟಿ ಪಾಟೀಲ್ ಐನಾಪುರ, ಸಂಗಮೇಶ ಏರಿ, ಮಲ್ಲಿಕಾರ್ಜುನ ಭೂಷೆಟ್ಟಿ, ವಿರಶೆಟ್ಟಿ ಪಾಟೀಲ ಅನವಾರ, ಶರಣು ಮಜ್ಜಗಿ, ಜಗನ್ನಾಥ ಇದಲಾಯಿ, ವಿಜಯಕುಮಾರ ಮಾನಕರ್ ತಿಳಿಸಿದ್ದಾರೆ.