ಕಲಬುರಗಿ: ಬಹು ಸಂಸ್ಕೃತಿಯ ಅಸ್ಮಿತೆಯನ್ನು ಒಳಗೊಂಡಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೃಶ್ಯ ವಿಧಾನಗಳ ಮೂಲಕ ಸಂವಹನ ಸಾಧ್ಯತೆಗೆ ವಿಪುಲ ಅವಕಾಶಗಳಿವೆ. ಅನಂತ ವೈವಿಧ್ಯತೆಯ ಕಲಾಕೃತಿಗಳನ್ನು ರಚಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಸೃಜನಶೀಲತೆಯನ್ನು ಮೈಗುಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾ ವಿಭಾಗದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಟಿ. ಎನ್ ಕೃಷ್ಣಮೂರ್ತಿ ಹೇಳಿದರು.
ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ “ತಿಂಗಳ ದೃಶ್ಯೂಪನ್ಯಾಸ ಮತ್ತು ಸಂವಾದ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸತ್ಯ ಘಟನೆಗಳನ್ನು ಮತ್ತು ಸಮಕಾಲೀನ ಸಂಗತಿಗಳನ್ನು ಕಲಾವಿದರು ತಮ್ಮ ವೃತ್ತಿ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯವಿದೆ. ಸಾಹಿತ್ಯವನ್ನು ಅರಿತು ಕಲಾ ಮಾಧ್ಯಮಗಳಾದ ಸಿನಿಮಾ, ಜಾಹಿರಾತು, ಭೂಪಟ, ಛಾಯಾಚಿತ್ರ, ಪೇಂಟಿಂಗ್ ಮುಂತಾದ ದೃಶ್ಯ ಕಲೆಯ ಮೂಲಕ ಅಭಿವ್ಯಕ್ತಿ ಗೊಳಿಸಬೇಕು ಎಂದರು. ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ತಜ್ಞತೆಯುಳ್ಳ ಕಲಾವಿದರಿಗೆ ಅಪಾರ ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚೆನ್ನೂರ್ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಕಲಾವಿದರು ಇದ್ದಾರೆ. ತಮ್ಮ ಕಲಾ ಸಾಮರ್ಥ್ಯದಿಂದ ರಾಷ್ಟ್ರ ಅಂತರ ರಾಷ್ಟ್ರೀಯ ಮಟ್ಟದ ಪ್ರದರ್ಶನ ನೀಡಿ ಈ ಭಾಗಕ್ಕೆ ಮೆರಗು ತಂದಿದ್ದಾರೆ ಎಂದು ನುಡಿದರು.
ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಷಿ ಗೌರವಾನ್ವಿತ ಅತಿಥಿಯಾಗಿ ಮಾತನಾಡಿ ಭವ್ಯ ಸಂಸ್ಕೃತಿ ಪರಂಪರೆ ಇರುವ ಕಲಬುರಗಿಯಲ್ಲಿ ಅಂತರ ರಾಷ್ಟ್ರೀಯ ಕಲಾ ಗ್ಯಾಲರಿ ನಿರ್ಮಾಣವಾದರೆ ಕಲಾವಿದರಿಗೆ ಮತ್ತಷ್ಟು ಅವಕಾಶ ಸಿಗಲಿದೆ. ಕಲಬುರಗಿ ಭಾಗದ ಎಲ್ಲಾ ಕಲಾ ತಜ್ಞರು, ಕಲಾವಿದರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ. ಪರಶುರಾಮ ಮಾತನಾಡಿ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹತ್ತು ಗಳಿಂದ ಉಪನ್ಯಾಸ, ಕಲಾವಿದರಿಗೆ ಕಾರ್ಯಾಗಾರ, ವಿವಿಧ ವೃತ್ತಿಪರ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತ ಬೆಳೆದಿದೆ. ವಿಚಾರ ಸಂಕಿರಣಗಳನ್ನು ನಡೆಸಿ ರಾಷ್ಟ್ರ ಅಂತರ ರಾಷ್ಟ್ರ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಯಶಸ್ವಿಗೊಳಿಸಿದೆ ಎಂದರು. ಕೊನೆಯಲ್ಲಿ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಎ ಎಸ್ ಪಾಟೀಲ, ವಿ ಬಿ ಬಿರಾದರ್ ,ಪ್ರಕಾಶ್ ಗಡಕರ, ಚಂದ್ರ ಹಾಸ ಜಾಲಿಹಾಳ, ಮಲ್ಲಿಕಾರ್ಜುನ್ ಶೆಟ್ಟಿ , ಡಾ. ಕೆ. ಎಂ. ಕುಮಾರಸ್ವಾಮಿ ಸಂತೋಷ್ ರಾಥೋಡ್, ಡಾ. ಮಲ್ಲಿಕಾರ್ಜುನ್ ಸಿ ಬಾಗೋಡಿ, ಗಿರೀಶ್ ಕುಲಕರ್ಣಿ, ಅಣ್ಣಾರಾಯ ಹಂಗರಗಿ, ಅಶೋಕ್ ಚಿತ್ಕೋಟಿ,ನಾರಾಯಣ ಜೋಶಿ, ದಾನಯ್ಯ ಚೌಕಿಮಠ್, ಮಹೇಶ್ ತಳವಾರ್, ದೌಲತ್
ರಾಯ್ ದೇಸಾಯಿ ,ಸಿದ್ದು ಮರಗೋಳ ಮುಂತಾದವರು ಇದ್ದರು. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ನಯನಾ ಬಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.