ಕಲಬುರಗಿ: ಪರಿಸರ ವ್ಯವಸ್ಥೆಯ ಸರಪಣಿ ಇದ್ದ ಹಾಗೆ. ಅದರಲ್ಲಿ ಒಂದು ಕೊಂಡಿ ಕಳಚಿದರೆ ಇಡಿ ಸರಪಣಿಯೇ ಬೇರ್ಪಡುತ್ತದೆ. ಹಾಗೆಯೆ ಪರಿಸರದಲ್ಲಿನ ಯಾವುದೇ ಜೀವಿಯ ಸಂತತಿ ನಾಶವಾದರೆ ಅದರ ನೇರ ಪರಿಣಾಮದ ಪರಿಸರದ ಮೇಲಾಗಿ, ಅಸಮತೋಲನೆಯಾಗುತ್ತದೆ. ಆದ್ದರಿಂದ ವನ್ಯ ಜೀವಿಗಳ ಸಂರಕ್ಷಣೆ ಮಾಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ ಅಭಿಮತ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಮೃ
ಗಾಲಯ ಪ್ರಾಧಿಕಾರದ ಜಿಲ್ಲಾ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಿರು ಮೃಗಾಲಯದಲ್ಲಿ ಏರ್ಪಡಿಸಲಾಗಿದ್ದ ‘68ನೇ ವಿಶ್ವ ವನ್ಯಜೀವಿ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವನ್ಯಜೀವಿಗಳು ಜೀವ ವೈವಿಧ್ಯತೆಯನ್ನು ಕಾಪಾಡುತ್ತವೆ. ಜೀವಿಗಳ ನಾಶಗಳನ್ನು ತಡೆಗಟ್ಟುತ್ತವೆ. ಪ್ರವಾಸೋದ್ಯಮದ ಮೂಲಕ ಆರ್ಥಿಕ ಬೆಳವಣಿಗೆಯಾಗುತ್ತದೆ. ವನೀಕರಣಕ್ಕೆ ಉತ್ತೇಜನಕಾರಿಯಾಗಿವೆ. ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವುನಂಚಿನಲ್ಲಿವೆ. ಪ್ರಾಣಿ ಸಂಕುಲನದ ಉಳಿವು ಅಗತ್ಯವಾಗಿದೆ ಎಂದರು.
ವನ್ಯ ಜೀವಿ ಸಂರಕ್ಷಣೆ ಅಧ್ಯಯನದ ವಿಷಯವಾಗಬೇಕಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಿಷಯವಾಗಿ ವನ್ಯಜೀವಿ ಕುರಿತು ಪಾಠಗಳಿರಬೇಕು. ವನ್ಯ ಜೀವಿಗಳ ಚರ್ಮ, ಗರಿ, ಕೊಂಬು ಮುಂತಾದವುಗಳಿಂದ ಮಾಡಿದ ವಸ್ತುಗಳನ್ನು ಪ್ರೋತ್ಸಾಹಿಸಬಾರದು. ರಾಷ್ಟ್ರೀಯ ವನ್ಯಧಾಮಗಳು ಮತ್ತು ಅಭಯಾರಣ್ಯಗಳನ್ನು ನಿರ್ಮಿಸಬೇಕು. ಪಕ್ಷಿ ವೀಕ್ಷಣೆ, ವನ್ಯ ಜೀವಿಗಳಿಗೆ ಸಂಬಂಧಿಸಿದ ಅಂಚೆ ಚೀಟಿ ಸಂಗ್ರಹ ಮೊದಲಾದ ಹವ್ಯಾಸ ಬೆಳೆಸಬೇಕು. ಪ್ರಕೃತಿಯಲ್ಲಿನ ಒಲವು ಹೆಚ್ಚಿದಂತೆಲ್ಲ ಸಂರಕ್ಷಣೆ ತಾನಾಗಿಯೇ ಆಗುವದರ ಜೊತೆಗೆ, ಪರಿಸರ ಸಮತೋಲನದಲ್ಲಿರುತ್ತದೆ. ‘ಪ್ರಾಜೆಕ್ಟ್ ಟೈಗರ್’, ‘ಗಿರ್ ಲೈಯನ್ ಪ್ರಾಜೆಕ್ಟ್’, ‘ಕ್ರೊಕೊಡೈಲ್ ಬ್ರೀಡಿಂಗ್ ಪ್ರಾಜೆಕ್ಟ್’, ‘ಸ್ನೋಲೆಪರ್ಡ್ ಪ್ರಾಜೆಕ್ಟ್’, ‘ಪ್ರ್ರಾಜೆಕ್ಟ್ ಎಲಿಫೆಂಟ್’ ಇವುಗಳು ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಲಾದ ಯೋಜನೆಗಳಾಗಿವೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ್ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆರ್.ಎಫ್.ಓ ಭೀಮರಾಯ ಶಿಳ್ಳೆಕ್ಯಾತ್, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ರಂಗನಾಥ ಹೊಸಮನಿ, ದೇವಾಂಗ ಆರ್.ಸುಕೂತೆ, ಈಶ್ವರ ಜಮಾದಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.