ಕಲಬುರಗಿ: ಬೆಂಗಳೂರು ಸಮೀಪದ ತುಮಕೂರಿನ ಬಿ.ಎಚ್. ರಸ್ತೆಯ ಅಗಳಕೋಟೆಯ ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ರಾಜ್ಯ ಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನ ಡಿ.28ರಿಂದ ಜಸ್ಟಿಸ್ ನಾಗಮೋಹನದಾಸ್ ಸರ್ವಾಧ್ಯಕ್ಷತೆಯಲ್ಲಿ 29ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ತಿಳಿಸಿದರು.
28ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿರುವ ಈ ಸಮ್ಮೇಳನದ ಸಾನ್ನಿಧ್ಯವನ್ನು ತುಮಕೂರು ರಾಮಕೃಷ್ಣಾಶ್ರಮದ ವೀರೇಶಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಹಿಂದಿನ ಸಮ್ಮೇಳನಾಧ್ಯಕ್ಷ, ಇಸ್ರೋ ಮಾಜಿ ಆದ್ಯಕ್ಷ ಡಾ.ಎ.ಎಸ್. ಕಿರಣಕುಮಾರ ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಜಸ್ಟಿಸ್ ನಾಗಮೋಹನದಾಸ ಅವರು ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದಾರೆ. ಇದೇವೇಳೆ ಕಲ್ಲಸಿರಿ ಸ್ಮರಣ ಸಂಚಿಕೆಯನ್ನು ರೆಡ್ ಕ್ರಾಸ್ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯ ಜಿ.ಎನ್. ಶ್ರೀಧರ ಬಿಡುಗಡೆ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ವಚನಗಳಲ್ಲಿ ವೈಜ್ಞಾನಿಕತೆ, ಕನ್ನಡ ಭಾಷೆಯಲ್ಲಿ ವಿಜ್ಞಾನದ ಅಸ್ಮಿತೆ, ಯುವ ಮನಸ್ಸಿನ ಆತಂಕಗಳು ವಿಷಯಗಳ ಕುರಿತು ಗೋಷ್ಠಿ ನಡೆಯಲಿದ್ದು, ಡಾ. ಸಿ.ಸೋಮಶೇಖರ, ಡಾ.ಬಿ.ಪಿ. ವೀರಭದ್ರಪ್ಪ, ಎಸ್.ಕೆ.ಉಮೇಶ ಮುಂತಾದವರು ವಿಷಯ ಮಂಡನೆ ಮಾಡಲಿದ್ದಾರೆ. ಇದೇವೇಳೆ ರಾಜ್ಯ ಮಟ್ಟದ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
29ರಂದು ಪ್ರಸ್ತುತ ಶೈಕ್ಷಣಿಕ ತಲ್ಲಣಗಳು, ರೈತರ ಪ್ರಚಲಿತ ಸಮಸ್ಯೆಗಳು ಕುರಿತು ಗೋಷ್ಠಿಗಳು ಜರುಗಲಿವೆ. ಅಂದು ಮಧ್ಯಾಹ್ನ 12 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಅಂದು ಮಧ್ಯಾಹ್ನ 2.30ಕ್ಕೆ ರಾಜ್ಯ ಮಟ್ಟದ ಡಾ.ಎಚ್.ಎನ್. ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ವಿಜ್ಞಾನ ಗ್ರಾಮ ಉದ್ಘಾಟನೆ: ಡಿ.27ರಂದು ಶಿಡ್ಲಘಟ್ಟದಲ್ಲಿ ವಿಜ್ಞಾನ ಗ್ರಾಮ ಭೂಮಿಪೂಜೆ ಮತ್ತು ವಿಜ್ಞಾನ ಜ್ಯೋತಿ ಜಾಥಾ ಕಾರ್ಯಕ್ರಮವನ್ನು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣಕುಮಾರ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಜ್ಞಾನ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಕಲಾ ಜಾಥಾಕ್ಕೆ ಶಾಸಕ ವಿ.ಮುನಿಯಪ್ಪ ಕಲಾ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ವಿಜ್ಞಾನ ಗ್ರಾಮಕ್ಕೆ 10 ಎಕರೆ ಜಮೀನು ದಾನ ನೀಡಿದ ಆರ್.ರವಿ. ಬಿಳಿಸಿವಾಲೆ ಉಪಸ್ಥಿತರಿರುವರು ಎಂದು ಶಾಬಾದಿ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಶೆಟಕಾರ, ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾಯ ಆವಂಟಿ, ಸಂಚಾಲಕರಾದ ಅಯ್ಯಣ್ಣ ನಂದಿ, ಸತೀಶ ಸಜ್ಜನ್ ಸುದ್ದಿಗೋಷ್ಠಿಯಲ್ಲಿದ್ದರು.