ಆನೇಕಲ್: ಸ್ಥಳೀಯ ಪ್ರದೇಶದ ಭಾಷಾ ಸೊಗಡು ಹಾಗೂ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ಮೂಡಿದ ಕವಿತೆಗಳು ವೈಶಿಷ್ಟ್ಯತೆಯಿಂದ ಕೂಡಿರುತ್ತದೆ ಎಂದು ಕವಿ ಡಾ.ಮಹೇಂದ್ರ ಅಭಿಪ್ರಾಯಿಸಿದ್ದಾರೆ.
ಭಾನುವಾರ ಕೌದಿ ಪ್ರಕಾಶನ, ಪ್ರಜಾತಾರೆ, ಸಂಕ್ರಮಣ ಬಳಗ ಹಾಗೂ ಗಂಧದನಾಡು ಜನಪರ ವೇದಿಕೆ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನೇಕಲ್ ತಾಲ್ಲೂಕು ತಮಿಳುನಾಡಿನ ಗಡಿ ಪ್ರದೇಶದಲ್ಲಿದ್ದರೂ ಕನ್ನಡದ ಭಾಷಾ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ. ಈ ಭಾಗದ ಕನ್ನಡ ಭಾಷೆಯೇ ವಿಶಿಷ್ಟವಾದದ್ದು. ಹೀಗಾಗಿ ಇಲ್ಲಿನ ಯುವ ಕವಿಗಳು ತಮ್ಮ ಕವಿತೆಗಳಲ್ಲಿ ಸ್ಥಳೀಯ ಭಾಷೆಯನ್ನು ಹೆಚ್ಚು ದುಡಿಸಿಕೊಳ್ಳಬೇಕೆಂದು ಆಶಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಪಾರಿಜಾತಾ ಮಾತನಾಡಿ, ಆನೇಕಲ್ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಇಲ್ಲಿನ ಸಂಘ ಸಂಸ್ಥೆಗಳು ಶ್ರಮ ವಹಿಸುತ್ತಿರುವುದು ಸಂತೋಷದ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಂಧದ ನಾಡು ಜನಪರ ವೇದಿಕೆಯ ರಾಜ್ಯಾಧ್ಯಕ್ಷ ವಿಜಯರಾಮ್ ಮಾತನಾಡಿ, ಸಂಘ ಸಂಸ್ಥೆಗಳ ಜೊತೆಗೂಡಿ ಆನೇಕಲ್ ತಾಲ್ಲೂಕಿನಲ್ಲಿ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಕೀಲರಾದ ಆರ್ ವಿವಿ ಮೂರ್ತಿ,ಆನಂದ್ ಚಕ್ರವರ್ತಿ, ದಾಸನಪುರ ಮಂಜುನಾಥ, ವಾಣಿ, ವಿದ್ಯಾ, ಅನುರಾಧಾ ಆರ್, ರೇಣುಕಾ, ಸ್ನೇಹ, ಪೂರ್ಣ, ಮೈತ್ರಿ, ಹಿರಣ್ಮಿಯಿ, ಹಿರಿಯ ಕವಿ ಅಂಬರೀಶ್, ಕೌದಿ ಪ್ರಕಾಶನದ ಮಮತಾ, ವಕೀಲ ಪುರುಷೋತಮ್ ಚಿಕ್ಕಹಾಗಡೆ, ದಿವ್ಯಕಿರುನಗೆ ಸೇರಿ ಹಲವರು ಉಪಸ್ಥಿತರಿದ್ದರು.