ಚಿತ್ತಾಪೂರ:ಆಯುರ್ವೇದ ಹಾಗೂ ಯುನಾನಿ ವೈದ್ಯ ವಿಜ್ಞಾನಕ್ಕೆ ಹಕೀಂ ಅಜ್ಮಲ್ ಖಾನ್ ಕೊಡುಗೆ ಮಹತ್ತರವಾದುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ.ಎಸ್.ಯು ಅಭಿಪ್ರಾಯಪಟ್ಟರು.
ಅವರು ಚಿತ್ತಾಪೂರ ತಾಲೂಕಿನ ಕರದಳ್ಳಿ ಗ್ರಾಮದ ಸರಕಾರಿ ಯುನಾನಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಯುನಾನಿ ವೈದ್ಯ ಪದ್ಧತಿಯ ವೈದ್ಯ ಹಕೀಂ ಅಜ್ಮಲ್ ಖಾನ್ ಅವರ 155ನೇ ಜನ್ಮ ದಿನದ ಪ್ರಯುಕ್ತ ಯುನಾನಿ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಜ್ಮಲ್ ಖಾನ್ ಪ್ರಸಿದ್ಧ ಮನೆತನದಲ್ಲಿ ಜನಿಸಿ ವೈದ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆಗಳಿಸಿದವರು. ಕೇವಲ ವೈದ್ಯರಾಗಿ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಿಂದೂ- ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ ಉಜ್ವಲ ರಾಷ್ಟ್ರಭಕ್ತರಾಗಿಯೂ ನಾಡಿನ ಸೇವೆ ಮಾಡಿದವರಲ್ಲಿ ಪ್ರಮುಖರು ಎಂದು ಸ್ಮರಿಸಿದರು.
ಯುನಾನಿ ವೈದ್ಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಇವರು, ಮನೆತನದವರೇ ಸ್ಥಾಪಿಸಿ ಬೆಳೆಸಿಕೊಂಡು ಬಂದಿದ್ದ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬಂದರು. ವಿವಿಧೆಡೆ ಸಂಚರಿಸಿ, ವೈದ್ಯ ಪದ್ಧತಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿಕೊಂಡರು. ಆ ಮೂಲಕ ದೇಶದ ಅಭಿವೃದ್ಧಿಗೆ ದುಡಿದ ವ್ಯಕ್ತಿ ಎಂದು ಹೇಳಿದರು.
ಕರದಾಳ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಶಿವಲಿಂಗಪ್ಪ ಹೆಬ್ಬಾಳಕರ್ ಮಾತನಾಡಿ,ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡುವವರೇ ವೈದ್ಯರು. ಆಯುರ್ವೆದ ಹಾಗೂ ಯುನಾನು ವೈದ್ಯ ವಿಜ್ಞಾನಕ್ಕೆ ಮಹತ್ತರ ಕೊಡುಗೆ ನೀಡಿದ ಹಕೀಂ ಅಜ್ಮಲ್ ಖಾನ್ ಅವರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವಿದು ಎಂದು ಹೇಳಿದರು.
ಯುನಾನಿ ವೈದ್ಯೆ ಡಾ.ಸಯೀದಾ ಅತರ್ ಮಾತನಾಡಿ,ಯುನಾನಿ ಹಾಗೂ ಆಯುರ್ವೇದದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.ಬದಲಾದ ಆಹಾರ ಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ದಿನಕ್ಕೊಂದು ಬಗೆಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆಲ್ಲಾ ಆಯುರ್ವೇದ ಮತ್ತು ಯುನಾನಿಯಲ್ಲಿ ಶಾಶ್ವತ ಪರಿಹಾರವಿದೆ ಎಂದು ಹೇಳಿದರು.
ಕರದಾಳ ಗ್ರಾಪಂ ಅಧ್ಯಕ್ಷ ನರಸಣ್ಣ, ಕೆಜಿಬಿವಿಎನ್ ಮೇಲ್ವಿಚಾರಕಿ ಬಾಬುಬಾಯಿ, ಯುನಾನಿ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ.ರಾಯಿಸ್ ಫಾತೀಮಾ, ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.