ಜನಾಗ್ರಹ ನನ್ನ ನಗರ ನನ್ನ ಬಜೆಟ್ ಅಭಿಯಾನದ ವರದಿ ಸಲ್ಲಿಕೆ

0
21

ಕಲಬುರಗಿ; ಪಾಲಿಕೆ ಬಜೆಟ್ ಪ್ರಕ್ರಿಯೆಗೆ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ “ನನ್ನ ನಗರ ನನ್ನ ಬಜೆಟ್” ಅಭಿಯಾನದ ವರದಿಯನ್ನು ಜನಾಗ್ರಹ ಸಂಸ್ಥೆ ಇಂದು ಮಧ್ಯಾಹ್ನ ಪಾಲಿಕೆ ಆಯುಕ್ತರಾದ ಭುವನೇಶ್ ದೇವಿದಾಸ್ ಪಾಟೀಲ್, ಐಎಎಸ್ ರವರಿಗೆ (ಕಲಬುರಗಿ ಮಹಾನಗರ ಪಾಲಿಕೆಗೆ) ಸಲ್ಲಿಸಲಾಯಿತು.

3,249 ನಾಗರಿಕರ ಸಲಹೆಗಳು ನಗರದ 55 ವಾರ್ಡ್ ಗಳಿಂದ 2023-24ರ ಹಣಕಾಸು ವರ್ಷದ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ನಲ್ಲಿ ಪರಿಗಣಿಸಲು ಸ್ವೀಕೃತವಾಗಿದ್ದು, ಈ ಬಜೆಟ್ ಸಲಹೆಯಲ್ಲಿ ನಾಗರಿಕರು ಹವಾಮಾನ ಸಂಬಂಧಿಸಿದ ವರ್ಗಕ್ಕೆ ಮುಖ್ಯ ಆದ್ಯತೆಯನ್ನು ನೀಡಿದ್ದಾರೆ.

Contact Your\'s Advertisement; 9902492681

ಕಲಬುರಗಿ ಮಹಾನಗರ ಪಾಲಿಕೆ ವಾರ್ಷಿಕವಾಗಿ ನಗರದಾದ್ಯಂತ ಹಲವಾರು ಸಂಘ ಸಂಸ್ಥೆಗಳ, ಕ್ಷೇಮಾಭಿವೃದ್ಧಿ ಸಂಘಗಳ, ಕಲಬುರಗಿ ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ನಾಗರಿಕರ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡುವ ಪ್ರಕ್ರಿಯೆಯೇ ನನ್ನನಗರನನ್ನಬಜೆಟ್ (MyCityMyBudget) ಅಭಿಯಾನವಾಗಿದ್ದು. 1ನೇ ಆವೃತ್ತಿ 2ನೇ ಫೆಬ್ರವರಿ 2023 ರಂದು ಕಲಬುರಗಿ ಮಹಾನಗರ ಪಾಲಿಕೆ ಆವರಣದಲ್ಲಿ ಚಾಲನೆ ನೀಡಲಾಗಿತ್ತು. ಬಜೆಟ್ ಸಲಹೆಗಳನ್ನು ಸ್ವೀಕರಿಸಲು 11 ದಿನಗಳವರೆಗೆ 3 ವಲಯಗಳಲ್ಲಿ ಎಲ್ಲಾ 55 ವಾರ್ಡ್ ಗಳನ್ನು ಬಜೆಟ್ ಬಸ್ ತಲುಪಿ 3,249 ನಾಗರಿಕರ ಬಜೆಟ್ ಸಲಹೆಗಳನ್ನು ಸ್ವೀಕರಿಸಲಾಗಿದೆ. ನಾಗರಿಕರ ಈ ಬಜೆಟ್ ಸಲಹೆಗಳನ್ನು ಪರಿಗಣಿಸಿ 2023-24ರ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ನಲ್ಲಿ ಸೇರಿಸಲು ವಿವರವಾದ ವರದಿಯನ್ನು ಆಯುಕ್ತರ ಕಚೇರಿಯಲ್ಲಿ ಸಲ್ಲಿಸಲಾಗಿದೆ.

“ತಮ್ಮ ವಾರ್ಡ ಮಟ್ಟದಲ್ಲಿ ತಕ್ಷಣವೇ ಗಮನಹರಿಸಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬಜೆಟ್ ಸಲಹೆಗಳನ್ನು ನೀಡಿರುವುದು ಸಂತೋಷದ ಸಂಗತಿಯಾಗಿದೆ. ಕಲಬುರಗಿ ವಾರ್ಡ್ ಸಮಿತಿ ಬಳಗದ ನೆರವಿನೊಂದಿಗೆ ಈ ಅಭಿಯಾನ ಯಶಸ್ವಿಯಾಗಿ ಜರುಗಿದೆ. ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ನಲ್ಲಿ ನಾಗರಿಕರು ನೀಡಲಾದ ಸಲಹೆಗಳಿಗೆ ಸೂಕ್ತವಾದ ಹಣಕಾಸು ಹಂಚಿಕೆ ಸಂಭವಿಸಿದಾಗ ಇದರ ಯಶಸ್ಸನ್ನು ವೀಕ್ಷಿಸಬಹುದು” ಎಂದು, ಮಂಜುನಾಥ ಹಂಪಾಪುರ ಎಲ್, ಕಾರ್ಯಕ್ರಮ ವ್ಯವಸ್ಥಾಪಕರು ನಾಗರಿಕ ಸಹಭಾಗಿತ್ವದ(ಕರ್ನಾಟಕ) ಜನಾಗ್ರಹ ತಿಳಿಸಿದರು.

“ಕಲಬುರ್ಗಿ ಮಹಾನಗರ ಪಾಲಿಕೆ ಕಳೆದ ಹಲವು ವರ್ಷಗಳಿಂದ, ಪಾಲಿಕೆ ರಚಿಸುವ ಬಜೆಟ್ ಪ್ರಕ್ರಿಯೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸುತ್ತಾ ಬಂದಿದೆ. ಜನಾಗ್ರಹ ಸಂಸ್ಥೆ ಮತ್ತು ಕಲಬುರಗಿ ವಾರ್ಡ್ ಸಮಿತಿ ಬಳಗವು ಜೊತೆಗೂಡಿ, ಉತ್ತರ ಕರ್ನಾಟಕದ ಪ್ರಪ್ರಥಮ ಆವೃತ್ತಿಯ ‘ನನ್ನ ನಗರ ನನ್ನ ಬಜೆಟ್’ ಎಂಬ ಜನಪರ ಹಾಗೂ ಜನಸ್ನೇಹಿ ಬಜೆಟ್ ಕುರಿತ ವಾರ್ಷಿಕ ಅಭಿಯಾನವನ್ನು ಕೈಗೊಳ್ಳುವುದರ ಮೂಲಕ ಕಲಬುರ್ಗಿ ನಗರದಾದ್ಯಂತ 55 ವಾರ್ಡ್ ಗಳಲ್ಲಿ, ಜನಸಾಮಾನ್ಯರು, ನಾಗರಿಕರು ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರನ್ನು ಸಂಪರ್ಕಿಸಿ ಅಭಿಯಾನದಲ್ಲಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲು ಮಹಾನಗರ ಪಾಲಿಕೆಗೆ ಸಹಾಯ ಮಾಡಿರುವುದನ್ನು ಉಲ್ಲೇಖಿಸಲು ನನಗೆ ಸಂತೋಷವಾಗಿದೆ.

‘ನನ್ನ ನಗರ ನನ್ನ ಬಜೆಟ್’ ಅಭಿಯಾನದ ಮೂಲಕ ನಾಗರಿಕರು ಸೂಚಿಸಿರುವ ಸಮಸ್ಯೆಗಳನ್ನು ಪರಿಹರಿಸಲು, ಸೂಕ್ತ ಹಣಕಾಸಿನ ಲಭ್ಯತೆಯ ಅನುಗುಣವಾಗಿ, ಪ್ರತಿ ವಾರ್ಡಿಗೆ ಹಣವನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲು ಉದ್ದೇಶಿಸಿದ್ದೇವೆ, ಅತೀ ಮುಖ್ಯವಾಗಿ, ಇದರ ಮುಂದುವರಿದ ಭಾಗವಾಗಿ, ಅಭಿಯಾನದ ಮೂಲಕ ಗುರುತಿಸಲಾದ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನಾಗರಿಕರು ಸಹ ಆದ್ಯತೆ ಕೊಡುತ್ತಾರೆ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೆ ಸಹಾಯ ಸಹಕಾರ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ.

ಆ ಮೂಲಕ, ನಗರದ ಬಜೆಟ್ ಮತ್ತು ಅಭಿವೃದ್ಧಿಯಂತಹ ಮಹತ್ವಪೂರ್ಣ ವಿಷಯಗಳಲ್ಲಿ ಸಮುದಾಯದ ಸಹಭಾಗಿತ್ವದ ಸಾಂಸ್ಥಿಕೀಕರಣದ ಕಡೆಗೆ ಮತ್ತೊಂದು ಮಹತ್ವದ ಹೆಜ್ಜೆ ಸಾಗಿದಂತಾಗುತ್ತದೆ.ಒಟ್ಟಾರೆಯಾಗಿ, ಈ ಜನಸ್ನೇಹಿ ಪ್ರಕ್ರಿಯೆ ಕೈಗೊಳ್ಳುವ ಮೂಲಕ, ಭಾರತದ ಅತ್ಯಂತ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ, ಕಲಬುರಗಿ ನಗರವೂ ಸಹ ಸ್ಥಾನವನ್ನು ಸುಭದ್ರಗೊಳಿಸುವಲ್ಲಿ ಮತ್ತೊಂದು ಆಯಾಮವನ್ನು ಪಡೆಯುತ್ತದೆ.” -ಭುವನೇಶ್ ದೇವಿದಾಸ್ ಪಾಟೀಲ್, ಐಎಎಸ್ ಮಾನ್ಯ ಆಯುಕ್ತರು ಕಲಬುರ್ಗಿ ಮಹಾನಗರ ಪಾಲಿಕೆ
“ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕಲಬುರಗಿ ನಗರದ ಹಲವು ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಪಾಲುದಾರರಾಗಿ ಭಾಗವಹಿಸಿ ವಾರ್ಡ್ ಮಟ್ಟದಲ್ಲಿ ನಾಗರಿಕರಿಂದ ಸಲಹೆಗಳನ್ನುಪಡೆಯುವುದು ನಗರ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆ ಪ್ರಜಾಪ್ರಭುತ್ವದ ಅತ್ಯುತ್ತಮ ರೂಪವಾಗಿದೆ, ಮತ್ತು ಒಂದು ವೇದಿಕೆಯಾಗಿ ನಾಗರಿಕರ ಅಗತ್ಯತೆಗಳು ಮತ್ತು ಬಜೆಟ್ ಹಂಚಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ”. – ವಿಕಾಸ ಸಜ್ಜನ, ಮುಖ್ಯ ಲೆಕ್ಕ ಅಧಿಕಾರಿ, ಕಲಬುರ್ಗಿ ಮಹಾನಗರ ಪಾಲಿಕೆ

“ನಾಗರಿಕರು ನೀಡಿದ ಸಲಹೆಗಳನ್ನು ಪರಿಗಣಿಸಲು ಕೆಎಂಪಿ ನಾಯಕತ್ವವು ತೀವ್ರ ಆಸಕ್ತಿಯನ್ನು ತೋರಿಸಿದೆ. ನಾಗರಿಕರು ತಿಳಿಸಿರುವ ಸಮಸ್ಯೆಗಳನ್ನು ಪರಿಹರಿಸಲು 2023-24ನೇ ಹಣಕಾಸು ವರ್ಷಕ್ಕೆ ಕೆಎಂಪಿ ಬಜೆಟ್ ನಲ್ಲಿ ಹೆಚ್ಚಿನ ಹಂಚಿಕೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ನಗರ ಬಜೆಟ್ ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ನಾಗರಿಕರ ತೊಡಗಿಸಿಕೊಳ್ಳುವಿಕೆಯ ಸಾಂಸ್ಥಿಕೀಕರಣದ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ಸ್ವಾಭಾವಿಕ ಹಂತವೆಂದರೆ, ತಮ್ಮದೇ ಆದ ವಾರ್ಷಿಕ ವಾರ್ಡ್ ಅಭಿವೃದ್ಧಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುವ ಮೂಲಕ ವಾರ್ಡ್ ಮಟ್ಟದಿಂದ ನಗರ ಮಟ್ಟಕ್ಕೆ ಪೂರ್ಣ ಪ್ರಮಾಣದ ತಳಮಟ್ಟದ ಬಜೆಟ್ ಸಮಗ್ರ ಸಂಯೋಜನೆಯಾಗಿದೆ. ಕಲಬುರಗಿ ವಾರ್ಡ ಸಮಿತಿ ಬಳಗ, ಕಲಬುರಗಿ ಮಹಾನಗರ ಪಾಲಿಕೆಯ ಈ ಅಭಿಯಾನದ ನೇತೃತ್ವ ವಹಿಸಿದ್ದಕ್ಕೆ ಹೆಮ್ಮೆ ಇದೆ”. ಸಂತೋಷ ನರಗುಂದ, ಮುಖ್ಯಸ್ಥರು ನಾಗರಿಕ ಭಾಗವಹಿಸುವಿಕೆ, ಜನಾಗ್ರಹ

“ನನ್ನ ನಗರ ನನ್ನ ಬಜೆಟ್ ಅಭಿಯಾನವು ನಾಗರಿಕರಿಂದ ಸಲಹೆ ಪಡೆಯುವುದು ಪಾಲಿಕೆ ಆಯುಕ್ತರ ಇಟ್ಟಿರುವ ಉತ್ತಮವಾದ ಹೆಜ್ಜೆ. ಇದರಿಂದ ನಗರದ ಆದ್ಯತೆಗಳನ್ನು ಬಜೆಟ್ ನಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ. ಈ ಬಾರಿಯ ಬಜೆಟ್ ನಲ್ಲಿ ಹೆಚ್ಚು ಪಾರದರ್ಶಕತೆಗಾಗಿ ಎದುರು ನೋಡುತ್ತಿದ್ದೇನೆ. – ಡಾ. ಕೆ ಎಸ್ ವಾಲಿ, ಅಧ್ಯಕ್ಷರು ಜಯನಗರ ಅಭಿವೃದ್ಧಿ ಸಂಘ

”ನಾಗರಿಕರಿಂದ ಮಾಹಿತಿ ಸಂಗ್ರಹಿಸುವ ಮೂಲಕ ಕೆಎಂಪಿ ಜನಪರ ಬಜೆಟ್ ನೀಡಲು ಮೊದಲ ಹೆಜ್ಜೆ ಇಟ್ಟಿದೆ ಎಂಬುದು ನನ್ನ ಅಭಿಪ್ರಾಯ. ನಾಗರಿಕರು ಈ ಅಭಿಯಾನದಲ್ಲಿ ವ್ಯಕ್ತಪಡಿಸಿರುವ ಸಲಹೆಗಳನ್ನು ಪರಿಗಣಿಸಲು ಅಗತ್ಯವಾದ ಹಣದ ಹಂಚಿಕೆಯನ್ನು ಮಾಡಬೇಕು ಮತ್ತು ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸುವಂತೆ ಕ್ರಮ ವಹಿಸಬೇಕು. – ಡಾ.ಸುಧಾ ಹಾಲ್ಕಾಯಿ. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಅಧ್ಯಕ್ಷೆ.

“ಕೆಎಂಪಿ ಯಲ್ಲಿ ಯಾವುದೇ ಚುನಾಯಿತ ಸಂಸ್ಥೆ (ಕೌನ್ಸಿಲ್) ಇಲ್ಲದಿರುವ ಈ ಸಮಯದಲ್ಲಿ ಕಲಬುರಗಿ ನಾಗರಿಕರು ಪೂರ್ವಭಾವಿಯಾಗಿ ವಾರ್ಡ್ ಸಮಿತಿ ಬಳಗ ಸ್ವಯಂಸೇವಕರು ನನ್ನನಗರನನ್ನಬಜೆಟ್ ಗೆ ಚಾಲನೆ ನೀಡಿದ್ದಾರೆ ಎಲ್ಲಾ ವರ್ಗಗಳ ಸಕ್ರಿಯ ನಿವಾಸಿಗಳು ತಮ್ಮ ಸಲಹೆಗಳನ್ನು ನೀಡಿದ್ದಾರೆ. -ಪಿ ಎಸ್ ಮಹಾಗಾಂವಕರ್ ಸಂಚಾಲಕರು, ಕಲಬುರಗಿ ವಾರ್ಡ್ ಸಮಿತಿ ಬಳಗ

“ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ, ನಾಗರಿಕರಿಂದ ಬಜೆಟ್ ಸಲಹೆಗಳನ್ನು ಕೆಎಂಪಿ ಪಡೆಯುತ್ತಿರುವುದು ಒಳ್ಳೆಯದು. ಈ ಅಭಿಯಾನವು ಬಜೆಟ್ ಅನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ, ಕಲಬುರಗಿ ನಾಗರಿಕರು ಸ್ಥಳೀಯ ಸರ್ಕಾರದಿಂದ ಏನನ್ನು ಬಯಸುತ್ತಾರೆ ಎಂಬುದನ್ನು ವ್ಯಕ್ತಪಡಿಸಲು ಸಹಕರಿಯಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳಲುಬಯಸುತ್ತೇವೆ. ನಾಗರಿಕರ ಅರಿವು ಮತ್ತು ಭಾಗವಹಿಸುವಿಕೆ ಮಾತ್ರ ಯಶಸ್ವಿ ಸ್ಥಳೀಯ ಆಡಳಿತಕ್ಕೆ ಕಾರಣವಾಗಬಹುದು”. ಸಿದ್ಧರಾಮ ಯಳವಂತಗಿ, ಕಲಬುರಗಿ ವಾರ್ಡ್ ಸಮಿತಿ ಬಳಗದ ಸದಸ್ಯರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here