ಕಲಬುರಗಿ: ಆಳಂದ ಚಾರಿತ್ರಿಕ ಪಟ್ಟಣ, ಈ ಹಿಂದೆ ಸಾವಿರ ಗ್ರಾಮಗಳ ಪ್ರಧಾನ ಪಟ್ಟವಾಗಿತ್ತು. ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ತನ್ನ ವೈಭವ ಕಂಡಿತ್ತು. ಇಂತಹ ಐತಿಹಾಸಿಕ ನಾಡಿನಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸಿರುವುದು ಸ್ತುತ್ಯರ್ಹ ಕೆಲಸ ಎಂದು ಗುಲ್ಬರ್ಗ ವಿವಿ ಕುಲಸಚಿವ ಡಾ. ಬಿ. ಶರಣಪ್ಪ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಶುಕ್ರವಾರ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಹೈದರಾಬಾದನ ನಿಜಾಮನ ರಾಜ್ಯದಲ್ಲಿ ಆಳಂದ ತಾಲ್ಲೂಕು ಕೇಂದ್ರವಾಗಿತ್ತು ಎಂಬುದು ಬಹಳ ಮಹತ್ವದ್ದು ಎಂದು ತಿಳಿಸಿದರು.
ನುಡಿಜಾತ್ರೆ ಮೂಲಕ ನಮ್ಮ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸಮ್ಮೇಳನಗಳಿಂದ ಸಾಧ್ಯವಾಗಿದ್ದು, ಅನುಭವ ಮಂಟಪದ ನಂತರ ಎಲ್ಲ ಸ್ತರದ ಜನರು ಭಾಗವಹಿಸಿರುವುದು ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯಲ್ಲಿ ಎಂದು ಅವರು ಅಭಿಪ್ರಾಯಪಟ್ಟರು.
ಕವಿರಾಜ ಮಾರ್ಗಕಾರ ಹೇಳುವಂತೆ ಕುರಿತೋದದಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು. ಆಡು ನುಡಿಯ ಈ ಭಾಗದಲ್ಲಿ ವಚನ, ದಾಸ ಸಾಹಿತ್ಯ, ಜನಪದ ಸಾಹಿತ್ಯ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಮುಖ್ಯ ಅತಿತಯಾಗಿದ್ದ ಮಾಜಿ ಶಾಸಕ ಬಿ.ಅರ್. ಪಾಟೀಲ ಮಾತನಾಡಿ, ಸಮ್ಮೇಳನದ ಮೂಲಕ ಯುವಕರಿಗೆ ಪ್ರೇರಣೆ ನೀಡುವ ಕೆಲಸ ಆಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕವಿ, ಸಾಹಿತಿ, ಬರಹಗಾರರು ಕೇವಲ ಸಾಹಿತ್ಯವನ್ನು ಕೃಷಿ ಮಾಡುವ ಮೂಲಕ ಸಮಾಜವನ್ನು ಹದ ಮಾಡುವ ಕೆಲಸ ಮಾಡಬೇಕಿದೆ. ಕನ್ನಡ ಉಳಿಯಲು ಗ್ರಾಮೀಣ ಭಾಗದ ಕನ್ನಡ ಶಾಲೆಗಳ ಕೊಡುಗೆ ಬಹಳ ಮುಖ್ಯವಾಗಿದೆ. ಗಡಿ ಭಾಗದ ಕನ್ನಡಗಿರ ಬದುಕು ಉತ್ತಮವಾಗಿಲ್ಲ. ಹೀಗಾಗಿ ಸರ್ಕಾರ ಈ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯ ಸೌಲತ್ತು ಸೇರಿದಂತೆ ಎಲ್ಲವನ್ನೂ ಹೋರಾಟದ ಮೂಲಕ ಪಡೆಯಲಾಗಿದೆ. ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಕನ್ನಡಿಗರ ಬದುಕಿನ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಡಾ.ಕಲ್ಯಾಣರಾವ ಜಿ. ಪಾಟೀಲ, ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಆಳಂದ ತಾಲ್ಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ, ಜಿಪಂ. ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಗ್ರಾಪಂ ಅಧ್ಯಕ್ಷ ಸಿದ್ಧರಾಮ ಯಾದವಾಡ ವೇದಿಕೆಯಲ್ಲಿದ್ದರು.
ಸಮ್ಮೇಳನದ ನಿರ್ಣಯಗಳು;
- ಇದೇ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಡಗಿ ನಿರ್ಣಯ ಮಂಡನೆ ಮಾಡಿದರು.
- ಮಳಖೇಡ ಕೋಟೆ ಸಂರಕ್ಷಣೆ ಮಾಡಿ ಪಠ್ಯಕ್ರಮದಲ್ಲಿ ಅಳವಡಿಸಬೇಕು.
- ಕರ್ನಾಟಕದಲ್ಲಿ ಓಡಾಡುವ ಬಸ್ ಗಳ ನಾಮಫಲಕ ಕನ್ನಡದಲ್ಲಿ ಇರಬೇಕು.
- ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆ, ಬಾವಿ, ಬೋರ್ ವೆಲ್ ಗಳ ಹೂಳು ಎತ್ತಿಸಬೇಕು.
- ಆಳಂದ ಅಕ್ಕಲಕೋಟ ಮಾರ್ಗದಲ್ಲಿರುವ ಜಗದ್ಗುರು ಗುರುನಾಥರೂಢರ ಪವಿತ್ರ ಧಾರ್ಮಿಕ ಸ್ಥಳಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು.
- ಗಡಿನಾಡು ಭಾಗವಾಗಿರುವ ಮಾದನಹಿಪ್ಪರಗಿ, ಹಿರೊಳ್ಳಿ, ಖಜೂರಿ, ಹೊದಲೂರು ಗ್ರಾಮಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗಭವನ ಅಥವಾ ಕಲಾ ಭವನ ಸ್ಥಾಪನೆ ಮಾಡಬೇಕು.
- ಶರಣರ ತಾಣವಾಗಿರುವ ಗಜೇಶ ಮಸಣಯ್ಯನ ನೆಲೆವೀಡು ಕರ್ಜಗಿ (ಅಕ್ಕಲಕೋಟ), ಮುನ್ನೋಳಿ, ಹಾಗೂ ಏಕಾಂತ ರಾಮಯ್ಯ ಅನುಭವ ಮಂಟಪ ಅಭಿವೃದ್ಧಿ ಪಡಿಸಬೇಕು.
- ನಾಗಾವಿ, ನಿಂಬರಗಿ, ಸನ್ನತಿ, ಹೊಡೆಲ್, ಮಾಡ್ಯಾಳ, ನರೋಣಾ ಮುಂತಾದ ಕ್ಷೇತ್ರಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಮತ್ತು ಶಾಲಾ ಪಠ್ಯಕ್ರಮದಲ್ಲಿ ಈ ಬಗ್ಗೆ ಅಳವಡಿಸಬೇಕು.
ರಾಜಶೇಖರ ಪಾಟೀಲ ನಿರೂಪಿಸಿದರು. ಎಸ್.ಕೆ.ಬಿರಾದಾರ ಸ್ವಾಗತಿಸಿದರು.