ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ನೀಡುವ ದೃಷ್ಟಿಯಿಂದ ಪ್ರತಿಷ್ಟಿತ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ಕಲಬುರಗಿಯಲ್ಲಿ ನಿರ್ಮಾಣಕ್ಕೆ ಮುಂದಿನ 3-4 ತಿಂಗಳಿನಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಶನಿವಾರ ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 30.14 ಕೋಟಿ ರೂ. ವೆಚ್ಚದ 50 ಹಾಸಿಗೆಗಳ ತೀವ್ರ ನಿಗಾ ಘಟಕ ಮತ್ತು 15.57 ಕೋಟಿ ರೂ. ಮೊತ್ತದ 30 ಹಾಸಿಗೆಗಳ ಸಾಮರ್ಥ್ಯದ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದಕ್ಕಾಗಿ 90 ಕೋಟಿ ವ್ಯಯ ಮಾಡಲಾಗುತ್ತಿದೆ. ಬೆಂಗಳೂರು ಹೊರತುಪಡಿಸಿದರೆ ಬೇರೆಲ್ಲೂ ಈ ಆಸ್ಪತ್ರೆ ಇಲ್ಲ ಎಂದರು.
ಕಲಬುರಗಿ ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಬರ್ನ್ ಯೂನಿಟ್ ಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಈ ಕಟ್ಟಡಗಳು ತಲೆ ಎತ್ತಲಿವೆ. ಟ್ರಾಮಾ ಸೆಂಟರ್ ಹೊರತಾದ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ. ಕಳೆದ ಫೆಬ್ರವರಿಯಲ್ಲಿ ಟ್ರಾಮಾ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಟ್ರಾಮಾ ಸೆಂಟರ್ ಆರಂಭವಾದರೆ ಹಾಸಿಗೆಗಳ ಭರ್ತಿಯಾಗಲಿದೆ ಎಂದು ಹೇಳಿದ್ದೆ, ಅದು ಇಂದು ನಿಜವಾಗಿದೆ. ಅಷ್ಡರ ಮಟ್ಟಿಗೆ ಟ್ರಾಮಾ ಸೆಂಟರ್ ಸೇವೆ ಜನಪಯೋಗಿಯಾಗಿದೆ ಎಂದರು.
ಜಿಲ್ಲೆಯ ಜನರು ಚಿಕಿತ್ಸೆಗೆ ಹಿಂದೆಲ್ಲ ಸೋಲಾಪೂರ, ಹೈದ್ರಾಬಾದ, ಬೆಂಗಳೂರು ಹೋಗುತ್ತಿದ್ದರು. 371ಜೆ ಪರಿಣಾಮ ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಜಯದೇವ, ತಾಯಿ-ಮಗು ಆಸ್ಪತ್ರೆ, ಜಿಮ್ಸ್, ಕ್ರಿಟಿಕಲ್ ಕೇರ್ ಯುನಿಟ್, ಬರ್ನ್ ಯೂನಿಟ್, ಟ್ರಾಮಾ ಸೆಂಟರ್, ಕಿದ್ವಾಯಿ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ, ಇಂದಿರಾಗಾಂಧಿ ಅಸ್ಪತ್ರೆ ಬರಲು ಸಹಕಾರಿಯಾಗಿದೆ. 371ಜೆ ಮೀಸಲಾತಿ ರೂವಾರಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಯದಂತೆ ಕಲಬುರಗಿಯನ್ನು ಮೆಡಿಕಲ್ ಹಬ್ ಆಗಿ ಮಾಡಲಾಗುತ್ತಿದ್ದು, ಬಡ ಜನರಿಗೆ ಸ್ಥಳೀಯವಾಗಿ ಗುಣಮಟ್ಟ ಮತ್ತು ಉಚಿತ ಚಿಕಿತ್ಸೆ ನೀಡುವ ಗುರಿ ನಮ್ಮ ಸರ್ಕಾರ ಹೊಂದಿದೆ ಎಂದರು.
ಕಲಬುರಗಿಯ ಜಿಮ್ಸ್ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಗುರುತಿಸಿಕೊಂಡಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ನಂತರ ಜಿಮ್ಸ್ ಕ್ಕೆ ವಿದ್ಯಾರ್ಥಿಗಳು ಪ್ರವೇಶಾತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬಡಜನರ ಕಲ್ಯಾಣಕ್ಕೆ ಕಲಬುರಗಿಯಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ನಮ್ಮ ಸರ್ಕಾರ ಕಲ್ಪಿಸಿದೆ. ಸರ್ಕಾರದ ಮೂಲಸೌಕರ್ಯ ಬಳಸಿಕೊಂಡು ಜಿಮ್ಸ್ ವೈದ್ಯರು, ಸಿಬ್ಬಂದಿಗಳು ರೋಗಿಗಳನ್ನು ತುಂಬಾ ಕಾಳಜಿಯಿಂದ ಆರೈಕೆ ಮಾಡಬೇಕು ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.
3 ತಿಂಗಳಿನಲ್ಲಿ ಸೂಪರ್ ಸ್ಪೆಷಾಲಿಟಿ, ಜಯದೇವ ಆಸ್ಪತ್ರೆ ಉದ್ಘಾಟನೆ: ಕಲಬುರಗಿ ನಗರದ ಜಿಮ್ಸ್ ಆವರಣದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು 371 ಹಾಸಿಗೆಯ ಜಯದೇವ ಹೃದ್ರೋಗ ಆಸ್ಪತ್ರೆ ಮುಂದಿನ 3 ತಿಂಗಳಿನಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿವಿಲ್ ಕಾಮಗಾರಿ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ. ಪೀಠೋಪಕರಣಕ್ಕೆ ಟೆಂಡರ್ ಕರೆಯಲಾಗಿದೆ. ನೇಮಕಾತಿ ಸಹ ಮಾಡಲಾಗುವುದು ಎಂದರು.
ತಿಂಗಳಲ್ಲಿ ತಾಯಿ-ಮಗು ಮತ್ತು ಕಿದ್ವಾಯಿ ಆಸ್ಪತ್ರೆಗೆ ಅಡಿಗಲ್ಲು: ಜಿಮ್ಸ್ ಆವರಣದಲ್ಲಿ ಹಳೇ ಆಸ್ಪತ್ರೆ ಕೆಡವಿ ಅಲ್ಲಿ 92 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ತಾಯಿ-ಮಗು ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಅಲ್ಲದೆ ಜಿಮ್ಸ್ ಹಿಂಭಾಗ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚುವರಿಯಾಗಿ 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ವಿಸ್ತರಣಾ ಕಟ್ಟಡಕ್ಕೂ ಅಡಿಗಲ್ಲು ಹಾಕಲಾಗುವುದು ಎಂದರು.
ರಿಜಿನಲ್ ಮೆಡಿಕಲ್ ಹಬ್ ಆಗಿ ಪರಿವರ್ತನೆ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ 371ಜೆ ಪರಿಣಾಮ ವೈದ್ಯಕೀಯ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳು ಇಲ್ಲಿಗೆ ಬರಲು ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಜೊತೆಗೆ ಹೆಚ್ಚಿನ ಅನುದಾನ ಸಹ ಹರಿದು ಬರುತ್ತಿದೆ. ಕಳೆದ 10 ವರ್ಷದಲ್ಲಿ 7 ಸಾವಿರ ಮೆಡಿಕಲ್ ಸೀಟ್ ನಮ್ಮ ಭಾಗದ ಮಕ್ಕಳಿಗೆ ಸಿಕ್ಕಿದೆ. ನಮ್ಮ ಸರ್ಕಾರ ಕೇವಲ ಕಟ್ಟಡ ಕಟ್ಟುತ್ತಿಲ್ಲ, ಬದಲಾಗಿ ಮಾನವ ಸಂಪನ್ಮೂಲ ಬೆಳವಣಿಗೆಗೂ ಉತ್ತೇಜನ ನೀಡುತ್ತಿದೆ. ಇದೇ ಮಾದರಿ ಮೀಸಲಾತಿ ಬಿಹಾರ, ಆಂಧ್ರ ಪ್ರದೇಶ ರಾಜ್ಯ ಅಪೇಕ್ಷಿಸುತ್ತಿದೆ ಎಂದು ಈ ಭಾಗಕ್ಕೆ ದೊರೆತ ಮೀಸಲಾತಿಯ ಪ್ರಯೋಜನ ವಿವರಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪಟಾಪ್-ಪುಸ್ತಕ ವಿತರಣೆ:ಇದೇ ಸಂದರ್ಭದಲ್ಲಿ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಎಸ್.ಸಿ.ಪಿ-ಟಿ.ಎಸ್.ಪಿ ಅನುದಾನದಡಿ ಲ್ಯಾಪಟಾಪ್, ಪುಸ್ತಕಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ ಪಾಟೀಲ ವಿತರಣೆ ಮಾಡಿದರು.
ಇದಕ್ಕೂ ಮುನ್ನ ಸಚಿವರು ಕಲಬುರಗಿ ನಗರದ ಸಪ್ತಗಿರಿ ಹೋಟೆಲ್ (ಆರೆಂಜ್) ನಲ್ಲಿ ಸಂಭವಿಸಿದ ಸಿಲಿಂಡರ್ ಸ್ಪೋಟಕ್ಕೆ ತುತ್ತಾಗಿ ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಚಿವರು ಮತ್ತು ಶಾಸಕರು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಕ್ಷಯ್ ಹಾಕೈ, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಜಿಲ್ಲಾ ಸರ್ಜನ್ ಡಾ.ಓಂಪ್ರಕಾಶ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಪಾಟೀಲ ಸೇರಿದಂತೆ ಜಿಮ್ಸ್ ನ ಅಂಗ ಸಂಸ್ಥೆಗಳ ವೈದ್ಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಸ್ವಾಗತಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…