ಕಲಬುರಗಿ: ಮಳೆಗಾಲ ಇರುವ ಕಾರಣ ಕುಡಿಯುವ ನೀರಿಗೆ ಮಣ್ಣು ಮಿಶ್ರಿತಗೊಳ್ಳುವುದು ಸಾಮಾನ್ಯ. ಆದರೆ ಅದನ್ನು ಶುದ್ಧೀಕರಿಸಿ ಜನರಿಗೆ ಶುದ್ಧ ನೀರು ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ. ನಿಷ್ಕಾಳಜಿಯಿಂದ ಕಲುಷಿತ ನೀರು ಸೇವನೆಯಿಂದ ಅವಘಡ ಸಂಭವಿಸಿದಲ್ಲಿ ಅಧಿಕಾರಿಗಳನ್ನೆ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಸಿದ್ಧತೆ ಮತ್ತು ಪ್ರವಾಹ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತುಮಕೂರು, ಮೈಸೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ ಪ್ರಕರಣಗಳು ಬೆಳಕಿಗೆ ಬಂದಿವೆ. ಅದು ಇಲ್ಲಿ ಮರುಕಳುಹಿಸಿದಲ್ಲಿ ಇ.ಇ., ಸಿ.ಇ ಎನ್ನದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ.ಗೆ ಖಡಕ್ ಸೂಚನೆ ನೀಡಿದರು.
ಪ್ರತಿ ವಾರ ಇ.ಇ., ಎ.ಇ.ಇ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಬೇಕು. ನೀರು ಸರಬರಾಜು ಟ್ಯಾಂಕ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ಪೌರ ಸಂಸ್ಥೆಗಳು ಜಲ ಮೂಲಗಳ ಸ್ವಚ್ಛತಾ ಜವಾಬ್ದಾರಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ 556 ಜಲ ಮೂಲಗಳು ನೀರು ಕುಡಿಯಲು ಯೋಗ್ಯವಿಲ್ಲ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಆಗಾಗ ನೀರು ಟೆಸ್ಟ್ ಮಾಡಿಸಬೇಕೆಂದರು.
ಮಳೆಗಾಲ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಈಗಾಗಲೆ ಆರ್.ಡಿ.ಪಿ.ಆರ್. ಸಚಿವಾಲಯದಿಂದ ಎಸ್.ಓ.ಪಿ. ಜಾರಿಗೊಳಿಸಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪದೇ ಪದೇ ಈ ಬಗ್ಗೆ ಹೇಳಿಸಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಬಾರಿ ಹೆಚ್ಚಿನ ಮಳೆ ಮುನ್ಸೂಚನೆ ಇರುವ ಕಾರಣ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ನದಿ ದಂಡೆ ಪ್ರದೇಶದಲ್ಲಿರುವ ಜನರನ್ನು ರಕ್ಷಿಸಲು ಬೋಟ್ ತರಿಸಿಡಬೇಕು. ಲೈಫ್ ಜಾಕೆಟ್ ಸಾಕಷ್ಟು ಪ್ರಮಾಣದಲ್ಲಿಡಬೇಕು. ಜನರಿಗೆ ಮಳೆ ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕು ಎಂದರು.
ಚರಂಡಿ ಸ್ವಚ್ಛಗೊಳಿಸಿ: ಮಳೆಗಾಲ ಸಮಯ ಇದಾಗಿದ್ದರಿಂದ ಎಲ್ಲಾ ಪಟ್ಟಣ, ಪುರಸಭೆ, ಕಲಬುರಗಿ ಮಹಾನಗರ ಪ್ರದೇಶದಲ್ಲಿ ಚರಂಡಿಗಳ ಇನಲೆಟ್, ಔಟಲೆಟ್ ಸ್ವಚ್ಛಬಾಗಿಡಬೇಕು. ಮಳೆಗೆ ವಿದ್ಯುತ್ ಕಂಬ, ಟಿ.ಸಿ. ಉರುಳಿಬಿದ್ದಲ್ಲಿ ಕೂಡಲೆ ಬದಲಾಯಿಸಬೇಕು. ರಸ್ತೆ ಮೇಲೆ ಗಿಡಗಳು ಬಿದ್ದಲ್ಲಿ ಅರಣ್ಯ ಇಲಾಖೆಯವರು ಕೂಡಲೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತವಾಗಿರಿಸಬೇಕು. ಅಗತ್ಯವಿದ್ದೆಡೆ ರಸ್ತೆ ಬದಿ ಗಿಡಗಳ ರೆಂಬೆ ಕತ್ತರಿಸಬೇಕು ಎಂದರು.
ಡೆಂಗ್ಯೂ ನಿಯಂತ್ರಣಕ್ಕೆ ಅರೋಗ್ಯ ಇಲಾಖೆ ಮುಂದಾಗಲಿ: ಡೆಂಗ್ಯೂ ಪ್ರಕರಣಗಳು ಜಿಲ್ಲೆಯಲ್ಲಿ ಶೇ.20 ರಷ್ಟು ಹೆಚ್ಚಿದೆ. ಡೆಂಗ್ಯೂ ಪ್ರಕರಣದಲ್ಲಿ ಕಲಬುರಗಿ 4ನೇ ಸ್ಥಾನದಲ್ಲಿದೆ. ಇಷ್ಟು ಸಂಖ್ಯೆ ಏರಿಕೆ ಆಗುವರೆಗೆ ಏಕೆ ಸುಮ್ಮನೇ ಕೂತಿರಿ. ಮಳೆಗಾಲ ಸಂದರ್ಭದಲ್ಲಿ ಇದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕಲ್ವಾ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಕುಡಿಯುವ ನೀರು ಆಗಾಗ ತಪಾಸಣೆ ಮಾಡಿಸಬೇಕು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಪ್ರಮಾಣದ ವಿವರ ನೀಡಿ ಅತಿವೃಷ್ಟಿಯಾದಲ್ಲಿ ಎಲ್ಲಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೆರೆ ಹಾವಳಿ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಈ ಅಧಿಕಾರಿಗಳು ಪ್ರಾವಾಹ ಪೀಡಿತ ಪ್ರದೇಶದಲ್ಲಿ ಹಾಜರಿದ್ದು, ರಕ್ಷಣಾ ಕಾರ್ಯ ನೇತೃತ್ವ ವಹಿಸಲಿದ್ದಾರೆ. ಪ್ರವಾಹದಿಂದ ಸಮಸ್ಯಾತ್ಮಕ ಎಂದು 147 ಗ್ರಾಮಗಳನ್ನು ಗುರುತಿಸಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಕ್ವಿಕ್ ರೆಸ್ಪಾನ್ಸ್ ಟೀಂ ನೋ ರೆಸ್ಪಾನ್ಸ್,ಸಚಿವ ಖರ್ಗೆ ಸಿಡಿಮಿಡಿ: ಮಳೆಗಾಲ ಸಂದರ್ಭದಲ್ಲಿ ಮರ ಬಿದ್ದಲ್ಲಿ, ಚರಂಡಿ ಬ್ಲಾಕೇಜ್ ಆದಲ್ಲಿ ಕೂಡಲೆ ತೆರವುಗೊಳಿಸಲು ಮಹಾನಗರ ಪಾಲಿಕೆ ಕ್ವಿಕ್ ರೆಸ್ಟಾನ್ಸ್ ತಂಡ ರಚಿಸಿ, ಸದರಿ ಸಿಬ್ಬಂದಿಗಳ ದೂರವಾಣಿ ನಂಬರ್ ಕೊಡಲಾಗಿದೆ. ಖುದ್ದು ನಾನೇ ಆ ಸಂಕ್ಯೆಗಳಿಗೆ ಕರೆ ಮಾಡಿದರು ನೋ ರೆಸ್ಪಾನ್ಸ್ ಎಂದು ಸಿಡಿಮಿಡಿಗೊಂಡರು. ಕಾಟಾಚಾರಕ್ಕೆ ತಂಡ ರಚಿಸುವುದು ಬೇಡ. ಅದು ಸರಿಯಾಗಿ ನಿರ್ವಹಣೆ ಮಾಡುತ್ತಿದಿಯೇ ಎಂಬುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಎಲ್ & ಟಿ ಕೆಲಸಕ್ಕೆ ಸಚಿವರ ಆಕ್ರೋಶ: ಕಲಬುರಗಿ ನಗರದ 55 ವಾರ್ಡುಗಳಲ್ಲಿ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆ ಮಂದಗತಿಯಲ್ಲಿ ಸಾಗಿಸುತ್ತಿರುವುದಕ್ಕೆ ಎಲ್ & ಟಿ ಕಂಪನಿ ಕಾರ್ಯವೈಖರಿಗೆ ಸಚಿವ ಪ್ರಿಯಾಂಕ್ ಕರ್ಗೆ ಮತ್ತು ಡಾ.ಶರಣಪ್ರಕಾಶ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ & ಟಿ ಅಧಿಕಾರಿ ಮಾತನಾಡಿ, 899 ಕಿ.ಮೀ. ಡಿಸ್ಟ್ರಿಬೂಷನ್ ಪೈಪಲೈನ್ ಪೈಕಿ ಇದೂವರೆಗೆ 86 ಕಿ.ಮೀ ಮಾತ್ರ ಪೈಪಲೈನ್ ಹಾಕಿದೆ ಎಂದಾಗ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಮೂರು ವರ್ಷದಲ್ಲಿ ಕೇವಲ 86 ಕಿ.ಮೀ ಎಂದರೆ ಉಳಿದ ಕೆಲಸ ಮುಗಿಯೋದು ಯಾವಾಗ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪ್ಲ್ಯಾನ್ ಮಾಡಿಸಿ ಹಣ ಕೊಟ್ಟರು ಎಲ್ & ಟಿ ಕಂಪನಿ ನಿಧಾನಗತಿ ಕೆಲಸಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿ ವಾರ ಈ ಕಾಮಗಾರಿ ಬಗ್ಗೆ ಗುಲಬರ್ಗಾ ದಕ್ಷಿಣ ಮತ್ತು ಉತ್ತರ ಶಾಸಕರ ಜೊತೆ ತಮಗೆ ಮಾಹಿತಿ ಹಂಚಿಕೊಳ್ಳಬೇಕೆಂದು ಡಿ.ಸಿ.ಗೆ ಸಚಿವರು ನಿರ್ದೇಶನ ನೀಡಿದರು.
ಕಲಬುರಗಿ ರಿಂಗ್ ರೋಡ್ ಒಳಗೆ ಅಭಿವೃದ್ಧಿಪಡಿಸಿ: ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ನಗರದ ರಿಂಗ್ ರಸ್ತೆ ಒಳಗೆ ಅನೇಕ ಬಡಾವಣೆಗಳು ತೆಲೆ ಎತ್ತುತ್ತಿವೆ. ಆದರೆಮೂಲಸೌಕರ್ಯ ಇರುವುದಿಲ್ಲ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇಂತಹ ಬಡಾವಣೆಗಳನ್ನು ಗುರುತಿಸಿ ಡೆವಲಪರ್ಸ್ ಗಳಿಗೆ ಅಭಿವೃದ್ಧಿ ಮಾಡಿ ಇಲ್ಲವೆ ಪ್ರಾಧಿಕಾರಕ್ಕೆ ಕೊಟ್ಟರೆ 50-50 ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ತಿಳಿಸಬೇಕು. ಇದರಿಂದ ರಿಮಗ್ ರೋಡ್ ಒಳಗಿನ ಜನವಸತಿಗಳಿಗೆ ಕುಡಿಯುವ ನೀರು, ಚರಂಡಿ, ಒಳಚರಂಡಿದಂತಹ ಮೂಲಸೌಕರ್ಯ ಕೊಡಲು ಸಹಕಾರಿಯಾಗುತ್ತದೆ ಎಂದರು.
ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿ ಮಹಾನಗರ ಪಾಲಿಕೆಯ ಎಲ್ಲಾ ಆಸ್ತಿಗಳನ್ನು ಇ-ಆಸ್ತಿಯನ್ನಾಗಿ ಪರಿವರ್ತನೆಗೆ ಇತ್ತೀಚೆಗೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರತಿ ಆಸ್ತಿಗೆ ಪಿ.ಐ.ಡಿ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…