ವಾಡಿ: ಸರ್ಕಾರಿ ಪದವಿಪೂರ್ವ ಕಾಲೇಜು, ಕ್ರೀಡಾಂಗಣ, ಉದ್ಯಾನವನ, ಬಸ್ ನಿಲ್ದಾಣ, ರೈಲ್ವೆ ಒಳಸೇತುವೆ, ಸುಲಭ ಶೌಚಾಲಯ, ಮೂತ್ರಾಲಯಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಾಡಿ ಬಂದ್ ಕರೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಆಡಳಿತವನ್ನು ಎಚ್ಚರಿಸಿದರು.
ರವಿವಾರ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಜನಧ್ವನಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷ ಕಳೆದಿದೆ. ನಾವಿನ್ನೂ ಶೌಚಾಲಯ, ಮೂತ್ರಾಲಯ, ಸರಕಾರಿ ಕಾಲೇಜು ಕೇಳಬೇಕಾದಂತಹ ಕೆಟ್ಟ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದೇವೆ. ಪುರಸಭೆ ಆಡಳಿತ ಇರುವಂತಹ ನಗರದಲ್ಲಿ ಸಾರ್ವಜನಿಕರಿಗಾಗಿ ಮೂಲಭೂತ ಸೌಕರ್ಯಗಳು ಇಲ್ಲದಿರಿವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾಲೇಜು ಮತ್ತು ಗ್ರಂಥಾಲಯ ಕೊಟ್ಟರೆ ವಿದ್ಯಾರ್ಥಿಗಳು ಮತ್ತು ಯುವಜನರು ಜ್ಞಾನ ಪಡೆದು ಪ್ರಶ್ನೆ ಕೇಳುತ್ತಾರೆ.
ಇದು ಆಳುವ ವರ್ಗಕ್ಕೆ ಬೇಕಿಲ್ಲ. ಹೀಗಾಗಿ ಈ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ. 13 ಪ್ರೌಢ ಶಾಲೆಗಳಿರುವ ವಾಡಿ ನಗರಕ್ಕೆ ಒಂದು ಕಾಲೇಜು ಮಂಜೂರು ಮಾಡಲು ಸಾಧ್ಯವಾಗಿಲ್ಲ. ರಸ್ತೆಗಳಲ್ಲಿ ಬಸ್‍ಗಳು ನಿಲ್ಲುತ್ತವೆ. ಬಿಸಿಲಲ್ಲಿ ಪ್ರಯಾಣಿಕರು ನಿಲ್ಲುತ್ತಾರೆ. ಇದು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಅರ್ಥವಾಗಲ್ಲ. ಮಾರುಕಟ್ಟೆಗೆ ಬರುವ ಜನರು ಶೌಚಾಲಯಗಳಿಗಾಗಿ ಪರದಾಡುತ್ತಾರೆ. ಗೋಡೆಗಳ ಮರೆಗೆ ಕರ್ಮಗಳನ್ನು ಮುಗಿಸಿ ವ್ಯವಸ್ಥೆಯ ವಿರುದ್ಧ ಕೋಪ ಕಾರುತ್ತಿದ್ದಾರೆ. ಇದು ಅಭಿವೃದ್ಧಿನಾ? ಎಂದು ಪ್ರಶ್ನಿಸಿದ ವೀರಭದ್ರಪ್ಪ, ಹೋರಾಟದಲ್ಲಿ ಪೊಲೀಸರ ಲಾಠಿ ತಿಂದು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಧ್ವನಿ ಜಾಗೃತ ಸಮಿತಿಯ ಗೌರವಾಧ್ಯಕ್ಷ ವಿ.ಕೆ.ಕೆದಿಲಾಯ, ನೂರೆಂಟು ಸಮಸ್ಯೆಗಳಿದ್ದರೂ ವಾಡಿ ಜನರು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ. ತೆರಿಗೆ ಕಟ್ಟುವ ನಾವುಗಳು ಸೌಲಭ್ಯಗಳನ್ನು ಕೇಳಲು ಹಿಂದೇಟು ಹಾಕಬೇಕಾ? ಸುಲಭ ಶೌಚಾಲಯ ಮತ್ತು ಮೂತ್ರಾಲಯಗಳನ್ನೇ ಕೊಡಲಾಗದ ಪುರಸಭೆ ಆಡಳಿತ ಯಾರ ಹಿತಕ್ಕಾಗಿ ಸೇವೆ ಮಾಡುತ್ತಿದೆ. ಕುಡಿಯಲು ಶುದ್ಧ ನೀರು ಕೊಡಿ ಎಂದು ಹೋರಾಟ ಮಾಡಬೇಕಾ? ಎಷ್ಟುದಿನ ಅಂತ ಕಷ್ಟಗಳನ್ನು ಸಹಿಸಿಕೊಳ್ಳಬೇಕು. ಹೋರಾಟಗಳು ಸತ್ತರೆ ಭ್ರಷ್ಟಾಚಾರ ಮುಗಿಲು ಮುಟ್ಟುತ್ತದೆ. ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವುದಿಲ್ಲ. ಜಾತಿ, ಧರ್ಮ, ಪಕ್ಷಬೇಧ ಮರೆತು ಜನರು ಸಂಘಟಿತರಾಗಬೇಕು. ಜನಧ್ವನಿ ಸಮಿತಿ ಉಗ್ರವಾದ ಹೋರಾಟಗಳನ್ನು ಸಂಘಟಿಸಲು ಪಣ ತೊಟ್ಟಿದೆ. ರಸ್ತೆ ತಡೆ, ಬಸ್ ಘೇರಾವ್, ವಾಡಿ ಬಂದ್‍ನಂತಹ ಹೋರಾಟಗಳನ್ನು ಹಮ್ಮಿಕೊಳ್ಳಲು ಹಿಂದೆ ಸರಿಯುವುದಿಲ್ಲ ಎಂದರು.
ವಿವಿಧ ಬಡಾವಣೆಗಳ ಮುಖಂಡರಾದ ರವಿ ಸಿಂಧಗಿ, ಭೀಮಸಿಂಗ್ ಚವ್ಹಾಣ, ಜಯದೇವ ಜೋಗಿಕಲ್‍ಮಠ, ಆನಂದ ಆರ್.ಎನ್, ಮಹ್ಮದ್ ಯುಸೂಫ್ ಮುಲ್ಲಾ ಕಮರವಾಡಿ, ಚಂದ್ರು ಕರಣಿಕ, ಮಹಾಲಿಂಗ ಶೆಳ್ಳಗಿ, ಮಾನಸಿಂಗ್, ವಿಠ್ಠಲ ರಾಠೋಡ, ಕಾಶೀನಾಥ ಶೆಟಗಾರ, ಈರಣ್ಣ ಯಲಗಟ್ಟಿ, ಶ್ರೀಶೈಲ ಪುರಾಣಿಕ, ದೇವಿಂದ್ರ ದೊಡ್ಡಮನಿ, ಸುಭಾಷ ಹೇರೂರ, ಶ್ರೀಶೈಲ ಜಿರೊಳ್ಳಿ ಸೇರಿದಂತೆ ವಿವಿಧ ಬಡಾವಣೆಗಳ ಮುಖಂಡರು ಪಾಲ್ಗೊಂಡಿದ್ದರು. ಶರಣಕುಮಾರ ದೋಶೆಟ್ಟಿ ಸ್ವಾಗತಿಸಿದರು. ಶಿವಪ್ಪ ಮುಂಡರಗಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು. ಶೇಖ ಅಲ್ಲಾಭಕ್ಷ್ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ: ಜನಧ್ವನಿ ಜಾಗೃತ ಸಮಿತಿಯ ಪ್ರಥಮ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಯದೇವ ಜೋಗಿಕಲ್‍ಮಠ, ಭೀಮಸಿಂಗ್ ಚವ್ಹಾಣ, ಆನಂದ ಆರ್.ಎನ್, ಈರಣ್ಣ ಯಲಗಟ್ಟಿ (ಸಲಹಾ ಸಮಿತಿ ಸದಸ್ಯರು). ವಿ.ಕೆ.ಕೆದಿಲಾಯ (ಗೌರವಾಧ್ಯಕ್ಷ), ವೀರಭದ್ರಪ್ಪ ಆರ್.ಕೆ (ಅಧ್ಯಕ್ಷ), ಶೇಖ ಅಲ್ಲಾಭಕ್ಷ್ (ಕಾರ್ಯದರ್ಶಿ), ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮಹ್ಮದ್ ಯುಸೂಫ್ ಮುಲ್ಲಾ ಕಮರವಾಡಿ (ಉಪಾಧ್ಯಕ್ಷರು), ಶಿವಪ್ಪ ಮುಂಡರಗಿ, ಚಂದ್ರು ಕರಣಿಕ, ವಿಠ್ಠಲ್ ರಾಠೋಡ, ರಮೇಶ ಮಾಶಾಳ, ಕಾಶೀನಾಥ ಶೆಟಗಾರ, ದೇವಿಂದ್ರ ದೊಡ್ಡಮನಿ, ಮಹಾಂತೇಶ ಬಿರಾದಾರ, ಮಹೆಬೂಬ ನದಾಫ್, ಶ್ರೀಶೈಲ ಪುರಾಣಿಕ (ಕಾರ್ಯಕಾರಿಣಿ ಸಮಿತಿ ಸದಸ್ಯರು).
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…