ಕಲಬುರಗಿ: ಪ್ರತಿ ಬಾರಿಗಿಂತ ಇದೇ ಮೊದಲ ಬಾರಿ ಕಲಬುರಗಿಯಲ್ಲಿ ವಿಶ್ವಗುರು ಬಸವಣ್ಣನವರ 886ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಇಲ್ಲಿನ ಹಲವು ಬಸವ ಪರ ಸಂಘಟನೆಗಳು ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ನಗರದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಬಸವ ಧ್ವಜ ರಾರಾಜಿಸುತ್ತಿದ್ದವು. ಆಟೋ, ಬಸ್, ಟ್ರ್ಯಾಕ್ಟರ್, ಕಾರು, ಬೈಕ್ ಮೇಲೆಯೂ ಸಹ ಈ ಧ್ವಜಗಳು ರಾರಾಜಿಸಿದವು. ನಗರದ ಬಸವೇಶ್ವರ ವೃತ್ತದಲ್ಲಿ ಜಯಂತಿ ನಿಮಿತ್ತ ಮೂರು ದಿನಗಳ ಕಾಲ ಉಪನ್ಯಾಸ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಅಲ್ಲಿಯೇ ಬಸವಣ್ಣ ಹಾಗೂ ಅವರ ಸಮಕಾಲಿನ ಶರಣರ ಭಾವಚಿತ್ರ ಹಾಕುವ ಮೂಲಕ ನಮ್ಮ ಮಕ್ಕಳಿಗೆ ಆ ಬಗ್ಗೆ ಪರಿಚಯ ಮಾಡಿ ಕೊಡುವಂತಿದ್ದವು.
ಈ ಬಸವ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ರಾಜಕೀಯ ಧುರೀಣರು ಸೇರಿದಂತೆ ಸಮಾಜದ ಪ್ರಮುಖರು, ವಿಶೇಷವಾಗಿ ಯುವಕರು ಭಾಗವಹಿಸಿದ್ದರು. ಇದೆಲ್ಲವನ್ನೂ ಗಮನಿಸಿದರೆ ಪ್ರತಿ ಬಾರಿಗಿಂತ ಈ ಬಾರಿ ಬಸವ ಜಯಂತಿಗೆ ಹೆಚ್ಚಿನ ಕಳೆಗಟ್ಟಿತ್ತು. ಹೆಚ್ಚಿನ ಸಂಭ್ರಮಾಚರಣೆಗಳಿಂದ ಕೂಡಿತ್ತು ಎಂಬುದು ಕೂಡ ನಿಜ!
ಬಸವ ಜಯಂತ್ಯುತ್ಸವ ಸಮಿತಿ, ಬಸವ ಬಿಗ್ರೇಡ್, ಬಸವ ಮಿತ್ರ ಮಂಡಳಿ ಸೇರಿದಂತೆ ನಗರದ ಅನೇಕ ಬಸವಪರ ಸಂಘಟನೆಗಳು ನಡೆಸಿದ ಬೈಕ್ ರ್ಯಾಲಿ, ಕಾರ್ ರ್ಯಾಲಿ ಕೂಡ ನಡೆಸಿದರು. ಆದರೆ.. ನಿನ್ನೆ ರಾತ್ರಿ ನಡೆಸಿದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಮಾತ್ರ ಇನ್ನೊಬ್ಬರ ಕಣ್ಣಿಗೆ ಒತ್ತುವಂತಿದ್ದವು.
ಡಿಜೆ ಸೌಂಡ್ ನಲ್ಲಿ ಮುಳುಗಿದ್ದ ನಮ್ಮ ಯುವ ಪಡೆ ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಇದೆಲ್ಲವನ್ನೂ ಸೂಕ್ಷ್ಮ ವಾಗಿ ಗಮನಿಸುತ್ತಿದ್ದ ನನಗೆ ನಮ್ಮವರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿತು. ಸರಳತೆ, ಸೌಜನ್ಯ, ಆಚಾರ, ವಿಚಾರ, ನಯ ವಿನಯದ ಜೊತೆಗೆ ನಡೆ- ನುಡಿ, ಕಾಯಕ-ದಾಸೋಹ ಸಿದ್ಧಾಂತ ಹೇಳಿ ಕೊಟ್ಟ ಬಸವಣ್ಣನವರನ್ನು ಇವರೆಲ್ಲರು ಸೇರಿ ಎಲ್ಲಿಗೆ ಕೊಂಡೊಯ್ಯುತ್ತಾರೋ ಎಂಬ ಆತಂಕ ಶುರುವಾಗಿದೆ.
ಬಸವಣ್ಣನವರ ಕೈಯಲ್ಲಿ ಖಡ್ಗ ಹಿಡಿದು ನಿಲ್ಲಿಸಿದ್ದು, ಅವರಿಗೂ ಕಾವಿ ಹಾಕಿರುವುದು ಕಂಡರೆ ನಿಜಕ್ಕೂ ಭಯವಾಗುತ್ತಿತ್ತು! ಬಸವ ಜಯಂತಿ ನಿಮಿತ್ತ ಬಸವಣ್ಣ ಯಾರು? ಅವರ ಬದುಕು ಹಾಗೂ ಬೋಧನೆಗಳೇನಿದ್ದವು ಎಂಬುದನ್ನು ತಿಳಿಸಿಕೊಡುವುದು ಬಿಟ್ಟು ಬರೀ ಮೆರವಣಿಗೆ ಮಾಡಿ ಕೈ ತೊಳೆದುಕೊಂಡರೆ ಹೇಗೆ? ಜಾತಿವಾದ, ಕೋಮುವಾದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಬಸವಣ್ಣನವರನ್ನೇ ಹೈ ಜಾಕ್ ಮಾಡಿ ಅವರನ್ನೇ ಅದರಲ್ಲಿ ಮುಳುಗೇಳಿಸಿದಂತಿತ್ತು.
ಅಂದಮಾತ್ರಕ್ಕೆ ಭಾವಚಿತ್ರದ ಮೆರವಣಿಗೆ ಮಾಡಬಾರದು ಎಂಬುದು ಇದರ್ಥವಲ್ಲ. ಮೆರವಣಿಗೆ ನೆಪದಲ್ಲಿ ನಿಜವಾದ ತತ್ವಾದರ್ಶಗಳಿಗೆ ಎಳ್ಳು ನೀರು ಬಿಡುತ್ತಿರುವುದು ಎಷ್ಟು ಉಚಿತ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಮೇಲಿನ ಈ ಮಾತುಗಳು ಕೇವಲ ಬಸವ ಜಯಂತಿಗೆ ಮಾತ್ರ ಸೀಮಿತವಾಗಿರದೆ ಎಲ್ಲ ಮಹಾಪುರುಷರ ಜಯಂತಿಗೂ ಅನ್ವಯಿಸುವಂತಿವೆ. ಅವರು ಮಾಡಿದ್ದಾರೆ ಎಂದು ನಾವು ಮಾಡುವುದು, ನಾವು ಮಾಡಿದ್ದೇವೆ ಎಂದು ಅವರು ಮಾಡುವುದು ಎಷ್ಟು ಸರಿ? ಮೇಲಾಗಿ ಈ ಮಾತು ಕೇವಲ ಕಲಬುರಗಿಗೆ ಮಾತ್ರ ಸೀಮಿತವಾದುದಲ್ಲ. ಬದಲಾಗಿ ಇಡೀ ಇಂಡಿಯಾದಲ್ಲಿ ಕಂಡು ಬರುವ ಕಟು ವಾಸ್ತವ ಕೂಡ.
ಸಕಲ ಜೀವರಾಶಿಗೆ ಲೇಸು ಬಯಸಿದ ಮಹಾತ್ಮರ ಜಯಂತಿ ಆಚರಣೆಗಳನ್ನು ಇನ್ನೂ ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಿಲ್ಲವೇ? ಆದರೆ, ಇದೆಲ್ಲವನ್ನು ಯಾರಿಗೆ ಹೇಳಬೇಕು? ಹೇಳಿದರೂ ಕೇಳುವವರು ಯಾರಿದ್ದಾರೆ?
-ಶಿವರಂಜನ್ ಸತ್ಯಂಪೇಟೆ
ಮೊ: 9448204548
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
ಸೂಪರ್ ಸರ್
ಕನ್ನಡದಲ್ಲಿ ಹೇಳಿ ನನ್ನ ಹೆಸರು ಸೂರ್ಯಕಾಂತ್ ಹುಲಿ ಚಂದಾಪುರ್ ನಿವಾಸಿ ತಾಲೂಕು ಚಿಂಚೋಳಿ ಅವರು ನಿಜವಾಗಲೂ ನಿಮ್ಮ ವಿಚಾರ ಪ್ರಸ್ತುತ ನಾವು ಬೇರೆ ಮೆರವಣಿಗೆಗಳು ಕೂಡ ಇದೇ ರೀತಿ ದಾರಿ ತಪ್ಪಿದೆ ನಿಮ್ಮ ವಿಚಾರ ಸೂಕ್ತವಾದದ್ದು ನಾವು ಸರಳ ತಾತ್ವಿಕವಾದ ದಾರಿಯಲ್ಲಿ ದಾರಿಯಲ್ಲಿ ಸಾಗುವುದು ಬಹಳ ಮುಖ್ಯ ಪ್ರಸ್ತುತ ಕೂಡ ವಂದನೆಗಳೊಂದಿಗೆ
ಈ ಮೀಡಿಯಾ ನಮ್ಮ ರಾಜ್ಯದಲ್ಲಿ ಅತ್ಯಂತ ಉತ್ತಮ ಸಾ಼ನಕೆ ಹೋಗಲೆದು ಹಾರೈಸುತೆನೆ