ಬಿಸಿ ಬಿಸಿ ಸುದ್ದಿ

ಕಡಕೋಳ ಕಾಲಂ: ಭಾಗ-13: ಅವ್ವನ ನೆನಪಲಿ…

ಸಗರನಾಡಿನ ಮಸಬಿನ ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ” ಅವ್ವನ ತವರೂರು. ಏಳೂರು ಗೌಡಕಿಯ ವತನದಾರ ಮನೆತನದಾಕೆ. ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ ಆಕೆಯನ್ನು ನೋಡಿದ ಅಪ್ಪನಿಗೆ,

ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ ಮಾಡಿದ.

ಅಪ್ಪನಿಗೆ ಆಗ ಉಂಡುಡಲು ಯಥೇಚ್ಛವಾಗಿದ್ದುದು ಕಡು ಬಡತನ ಮಾತ್ರ . ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ ನೂರಾರು ಎಕರೆ ಜಮೀನು. ಅದೆಲ್ಲ ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳು ಹೇಳಿ ಅವ್ವನನ್ನು ಲಪಟಾಯಿಸಿದನಂತೆ. ರಜಾಕಾರರ ಸಪಾಟಿಯಷ್ಟೊತ್ತಿಗೆ ಅವರ ಲಗ್ನವಾಗಿ ಎರಡು ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು ವರುಷಗಳು ಕಳೆದಿದ್ದವಂತೆ.

ಒರಟು ಕಗ್ಗಲ್ಲಿನಂತಹ ಅಪ್ಪನನ್ನು ತಿದ್ದಿ ತೀಡಿ ಮೂರ್ತಿ ಮಾಡಿದ ಕೀರ್ತಿ ತನ್ನದೆಂದು ಅವ್ವ ಹೇಳುತ್ತಿದ್ದಳು. ನಮ್ಮ ಮನೆತನವೆಂಬ ವೃಕ್ಷದ ಬೇರು, ಬೊಡ್ಡೆ, ಒಟ್ಟು ಮರವೇ ಅವಳು. ಅಪ್ಪ , ಮಡಿವಾಳಪ್ಪನ ತತ್ವ ಪದಗಳೊಂದಿಗೆ ಊರೂರು ಶಪಥ ಭಜನೆಗಳನ್ನು ಹುಡುಕುತ್ತ ತಿರುಗುವ ತಿರುಗಲು ತಿಪ್ಪ. ಅವನೊಂದಿಗೆ ತಾನು ಕಳೆದ ಮುಕ್ಕಾಲು ಶತಮಾನದ ಕತೆಗಳನ್ನು ಅವ್ವ ಸ್ವಾರಸ್ಯಕರವಾಗಿ ನಿರೂಪಿಸುತ್ತಿದ್ದಳು.

ನನ್ನವ್ವ ತೀರಿಕೊಂಡು ಇವತ್ತಿಗೆ ನಾಲ್ಕು ವರುಷ ತೀರಿದವು. ಯಾವುದೇ ಕಾರಣಕ್ಕು ತಾನು ಕಡಕೋಳ ಮಡಿವಾಳಪ್ಪನ ಸನ್ನಿಧಾನದಲ್ಲೇ ಪ್ರಾಣ ಬಿಡಬೇಕೆಂಬುದು ಅವಳ ಸಂಕಲ್ಪ. ಅಷ್ಟಕ್ಕು ಅವ್ವ ತನ್ನ ಸಂಕಲ್ಪ ಈಡೇರಿಸಿಕೊಂಡಳು. ೧೯೮೯ ರಲ್ಲಿ ಅಪ್ಪ ತೀರಿಕೊಂಡ ಮೇಲೆ ಅವ್ವ ನಮ್ಮೊಂದಿಗೆ ದಾವಣಗೆರೆಯಲ್ಲೇ ಇರ್ತಿದ್ದಳು. ಹಾಗಿರಬೇಕಿದ್ರೇ ನಮ್ಮನೆಗೆ ಬರುವ ರಂಗಕರ್ಮಿಗಳು, ಸಾಹಿತಿ, ಪತ್ರಕರ್ತರಿಗೆ ಅವಳ ಪರಿಚಯ ಮಾಡಿ ಕೊಡದಿದ್ದರೆ ಸಣ್ಣ ಮಕ್ಕಳಂತೆ ಮುನಿಸಿಕೊಂಡು ಬಿಡ್ತಿದ್ದಳು.

ಕಂಚ್ಯಾಣಿ ಶ್ಯಾಣಪ್ಪ , ಪಿ.ಬಿ. ಧುತ್ತರಗಿ, ಅವ್ವನ ಮಾತಿನಲ್ಲೇ ಹೇಳೋದಾದರೆ.. ಸತ್ಯಂಪ್ಯಾಟಿ ನಿಂಗಣ್ಣ , ರವಿ ಬೆಳಗೆರೆ, ಬಸೂ, ಆರ್.ನಾಗೇಶ್, ಮುಖ್ಯಮಂತ್ರಿ ಚಂದ್ರು, ಆರ್. ನಾಗರತ್ನಮ್ಮ, ಆರ್.ಟಿ. ರಮಾ, ಮಾಸ್ಟರ್ ಹಿರಣ್ಣಯ್ಯ….ಹೀಗೆ ಯಾರೇ ಬರಲಿ ಅವರೊಂದಿಗೆ ತಾನು ಮಾತಾಡುವ ಅದಮ್ಯ ಹಂಬಲ ಅವ್ವಗೆ.

ಒಮ್ಮೆ ಎಂ.ಪಿ. ಪ್ರಕಾಶ್ ಬಂದು ಅವಳೊಂದಿಗೆ ತಾಸೊಪ್ಪತ್ತು ಸಂವಾದಕ್ಕಿಳಿದು, ಅವ್ವ ಜವಾರಿ ಸ್ವರದಲ್ಲಿ ಹಾಡುವ ಮಡಿವಾಳಪ್ಪನ ತತ್ವಪದ ಕೇಳಿ ಮೈ ಮರೆತರು. ಊಟ ಮಾಡಿ ಮತ್ತೆ ಮತ್ತೆ ಹಾಡು ಕೇಳಿ… ಹೋಗುವಾಗ, ಎಂ.ಪಿ. ಪಿ. ಅವ್ವನ ಕಾಲು ಮುಟ್ಚಿ ನಮಸ್ಕರಿಸಿದರು.

ಪ್ರಕಾಶ ಹೋದ ಮೇಲೆ ” ಅವರು ದೊಡ್ಡವರು.. ಮಂತ್ರಿಗಳು ” ಅಂತ ಹೇಳಿದೆವು. ಅವಳಲ್ಲಿ ಯಾವ ಪ್ರತಿಕ್ರಿಯೆ ಇರಲಿಲ್ಲ. ಅವರು ಸ್ವಾಮಿಗೋಳು, ಅಯನೋರು ಅಂದೆವು. ಆಗ ನೋಡಿ ಅವಳ ಪಾಪಪ್ರಜ್ಞೆಯ ಕಟ್ಟೆ ಒಡೆದು ಭೋರ್ಗರೆಯ ತೊಡಗಿತು.

” ಅಯ್ಯೋ ನರಕಕ್ಕೆ ಹೋಗ್ತಿನಪೋ.. ಜಂಗಮರು ನನಗ ನಮಸ್ಕಾರ ಮಾಡಿದರು ” ಅಂತ ಭೋರ್ಯಾಡಿ ದುಃಖಿಸ ತೊಡಗಿದಳು. ಅವರು ಮತ್ತೆ ಯಾವಾಗ ಬಂದಾರು… ಅವರ ಪಾದ ತೊಳೆದು ಧೂಳು ಪಾದಕ ಕುಡಿದು ಪಾವನವಾಗಲು ವರುಷಗಟ್ಟಲೇ ಕಾಯ್ದಳು. ಕಡೆಗೂ ಪ್ರಕಾಶರು ಬರಲೇ ಇಲ್ಲ.

ಒಂದಲ್ಲ ಎರಡು ಬಾರಿ ಬಿದ್ದು ಕಾಲು ಮುರಕೊಂಡಳು. ಅಷ್ಟಾದರೂ ಆಕೆ ಬೆತ್ತ ಹಿಡಿಯಲಿಲ್ಲ. ವಾರಗಟ್ಟಲೇ ಊಟ ಬಿಟ್ಟಳು. ಪೂರ್ತಿ ಮೆತ್ತಗಾದಳು. ದಾವಣಗೆರೆಯಿಂದ ತನ್ನನ್ನು ಕಡಕೋಳಕ್ಕೆ ಕರ್ಕೊಂಡು ಹೋಗಬೇಕೆಂದು ಎದೆಯೊಡೆದು ಹಾಸಿಗೆ ಹಿಡಿದಳು.

ನೀನು ಇಲ್ಲೇ ತೀರಿಕೊಂಡರೂ ಊರಿಗೆ ತಗೊಂಡು ಹೋಗ್ತೀನಂದರೂ ಕೇಳುತ್ತಿರಲಿಲ್ಲ. ” ಮಲ್ಲಣ್ಣ… ನೀನು ತಗೊಂಡು ಹೋಗ್ತಿ ಖರೇ.. ನನಗೆ ಹ್ಯಂಗೊತ್ತಾಗ್ತದಪ.. ಸತ್ತು ಹೋಗಿರ್ತಿನಿ. ಊರಲ್ಲಿ ಮಡಿವಾಳಪ್ಪನ ನೆಲಕ್ಕ ತಲಿ ಕೊಟ್ಟು ಪ್ರಾಣ ಬಿಡಬೇಕು ” ಅಂತಿದ್ಳು.. ಹಂಗೇ ಆಯ್ತು.

ಮೇ ೨೮ ರಂದು ಮುಂಜಾನೆ ಹೊರಟು ರಾತ್ರಿ ಹತ್ತು ಗಂಟೆಗೆ ಕಡಕೋಳ ತಲುಪಿದಾಗ ಅವಳಿಗೆ ಸ್ವರ್ಗ ತಲುಪಿದ ಖಂಡುಗ ಖುಷಿ. ಮಡಿವಾಳಪ್ಪನ ಮಣ್ಣಲ್ಲಿ ಸತ್ತು ಮಣ್ಣಾಗಲು ಸಂತಸ ಪಟ್ಟಳು. ರಾತ್ರಿಯೆಲ್ಲ, ಮತ್ತು ಮಳ್ಳೇ ಮರುದಿನ ಊರಿಗೂರೇ ಬಂದು ಅವ್ವನೊಂದಿಗೆ ಮಾತಾಡಿತು. ಸಂಜೆ ನಾಲ್ಕುಗಂಟೆಗೆ ಮಡಿವಾಳಪ್ಪನ ಧ್ಯಾನದೊಳಗೆ ಲೀನವಾದಳು.

 -ಮಲ್ಲಿಕಾರ್ಜುನ ಕಡಕೋಳ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago