ವಾಡಿ: ಅರಣ್ಯ ಪ್ರದೇಶದ ಪಾಳು ಭೂಮಿಯನ್ನು ಹಸನು ಮಾಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಬಗರ್‍ಹುಕುಂ ಹಕ್ಕುಪತ್ರ ನೀಡಬೇಕಾದ ಸರ್ಕಾರ, ಸಾಗುವಳಿದಾರರಿಂದ ನಿಗದಿತ ಅವಧಿಗೆ ಶುಲ್ಕ ಪಡೆದು ಭೂಮಿ ಗುತ್ತಿಗೆ ನೀಡುವ ಪದ್ಧತಿ ಜಾರಿಗೆ ತರಲು ಹೊರಟಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್)ಯ ರಾಜ್ಯಾಧ್ಯಕ್ಷ ಎಚ್.ವಿ.ದಿವಾಕರ ಆಕ್ರೋಶ ವ್ಯಕ್ತಪಡಿಸಿದರು.
ಯಾಗಾಪುರ ಗ್ರಾಮದಲ್ಲಿ ಮಂಗಳವಾರ ಎಐಕೆಕೆಎಂಎಸ್ ವತಿಯಿಂದ ಏರ್ಪಡಿಸಲಾಗಿದ್ದ ರೈತರ ಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರೈತರ ಬದುಕು ಹಸನು ಮಾಡುತ್ತೇವೆ. ಅವರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ, ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತೇವೆ ಎಂಬಿತ್ಯಾದಿ ಭರವಸೆಗಳನ್ನು ನೀಡುತ್ತಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ಈಗ ರೈತರ ಬುಡಕ್ಕೆ ಕೊಳ್ಳಿ ಇಟ್ಟಿದೆ. ಬೇಸಾಯಗಾರರ ಬದುಕನ್ನೇ ನಾಶ ಮಾಡಲು ಕಾನೂನು ರೂಪಿಸುತ್ತಿದೆ. ಭೂಮಿ ಗುತ್ತಿಗೆ ನೀಡುವ ನಿರ್ಧಾರ ರೈತವಿರೋಧಿಯಾಗಿದೆ. ಬಡ, ಸಣ್ಣ, ಮಧ್ಯಮ ರೈತರಿಗೆ ದ್ರೋಹ ಬಗೆಯುವ ಹುನ್ನಾರವಾಗಿದೆ.
ಬಡಜನರಿಂದ ಭೂಮಿ ಕಸಿದು ಕಾರ್ಪೋರೇಟ್ ಬಂಡವಾಳಿಗರಿಗೆ ನೀಡಲು ತುದಿಗಾಲಮೇಲೆ ನಿಂತಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಿಪತಿಗಳು ದಾಳಿಯಿಟ್ಟು ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಸರ್ಕಾರವೆ ರತ್ನಗಂಬಳಿ ಹಾಸುತ್ತಿದೆ ಎಂದು ಗುಡುಗಿದ ದಿವಾಕರ್, ರೈತರು ಸಂಘಟಿತರಾಗುವ ಕಾಲ ಬಂದಿದೆ. ಅ.18 ರಂದು ಬೆಂಗಳೂರು ಚಲೋ ಚಳುವಳಿಗೆ ಕರೆ ನೀಡಲಾಗಿದ್ದು, ರಾಜ್ಯದ ಲಕ್ಷಾಂತರ ಜನ ರೈತರು ಈ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ರೈತ ಸಂಘಟನೆ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ ಮಾತನಾಡಿ, ನಾಡಿನ ರೈತರು ಈಗಾಗಲೇ ಬಡತನದಿಂದ ಬಳಲುತ್ತಿದ್ದಾರೆ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಗೋಳಾಡುತ್ತಿದ್ದಾರೆ. ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಅನುಭವಿಸುತ್ತಿದ್ದಾರೆ. ಸಾಗುವಳಿ ಭೂಮಿಯನ್ನು ಶುಲ್ಕ ಪಡೆದು ನಿಗದಿತ ಅವಧಿಗೆ ಗುತ್ತಿಗೆ ನೀಡುವ ಕಾನೂನು ತರುತ್ತಿರುವ ವಿಚಾರ ಕೇಳಿ ರೈತರ ಸಹನೆ ಕಟ್ಟೆಯೊಡೆದಿದೆ. ರಾಜ್ಯದ ರೈತರ ಆಕ್ರೋಶ ಇಮ್ಮಡಿಗೊಳಿಸಿದೆ. ದುಡಿಯುವ ಜನರ ಮೇಲಿನ ಅನ್ಯಾಯ, ದಬ್ಬಾಳಿಕೆ, ಕ್ರೌರ್ಯ, ಬಹಳ ನಡೆಯುವುದಿಲ್ಲ. ಇದನ್ನು ಕೊನೆಗಾಣಿಸಲು ಹೋರಾಟವೊಂದೇ ಪರಿಹಾರ ಎಂದರು.
ರೈತ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಈರಣ್ಣ ಇಸಬಾ, ಚಿತ್ತಾಪುರ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಕುಂಬಾರ, ಮುಖಂಡರಾದ ವೀರೇಶ ನಾಲವಾರ, ಕರಣಪ್ಪಾ ಇಸಬಾ, ರವಿ, ಮಹಾಂತೇಶ, ಲಕ್ಷ್ಮಣ ಪಾಲ್ಗೊಂಡಿದ್ದರು. ಇದೇ ದಿನ ಅಲ್ಲೂರ (ಬಿ), ಭೀಮನಳ್ಳಿ ಗ್ರಾಮಗಳಲ್ಲೂ ಸಭೆಗಳನ್ನು ಸಂಘಟಿಸಲಾಯಿತು.
ಅ.18 ರಂದು ಕರೆ ನೀಡಲಾದ ರೈತರ ಬೆಂಗಳೂರು ಚಲೋ ಹೋರಾಟದ ಬೇಡಿಕೆಗಳು: ಬಗರ್‍ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಗುತ್ತಿಗೆ ಆಧಾರದಲ್ಲಿ ಜಮೀನು ಕೊಡುವ ನೀತಿಯನ್ನು ಕೈಬಿಡಬೇಕು. ಈ ಹಿಂದೆ ಹಂಗಾಮಿ ಸಾಗುವಳಿ ಚೀಟಿ ವಿತರಿಸಿದ್ದರೂ ಸಹ ದುರಸ್ತ್ (ಪೋಡ್) ಆಗಿರುವುದಿಲ್ಲ. ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ನೂರಾರು ವರ್ಷಗಳಿಂದ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿರುವ ಕೃಷಿ ಭೂಮಿಯನ್ನು ಕೂಡಲೇ ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಂಡು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತರ ಮೇಲಿರುವ ಕೇಸುಗಳನ್ನು ಹಿಂಪಡೆಯಬೇಕು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೂಲಕ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…