ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಭವಿಷ್ಯದ ದೃಷ್ಟಿಯಿಂದಾಗಿ ಕಾಂಗ್ರೆಸ್ ಪಕ್ಷ ಸೇರಿರುವುದಾಗಿ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಎನ್ನುವುದು ನದಿ ಇದ್ದಂತೆ. ಅದು ನಿಂತು ಹೋಗಬಾರದು. ಒಳ್ಳೆಯ ವಿದ್ಯಾವಂತರು ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಕ್ಷೇತ್ರದ ಬೆಳವಣಿಗೆ ನಾಂದಿ ಹಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಅರವಿಂದ ಚವ್ಹಾಣ ಅವರು ಕಳೆದ ಏಳೆಂಟು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗುವ ಮೂಲಕ ಪಕ್ಷದ ವರ್ಚಸ್ಸು ಹೆಚ್ಚಿಸಿದ್ದರು. ಹೀಗಾಗಿ ಇವರಿಗೆ ಟಿಕೆಟ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವು. ಆದರೆ ಏಕಾಏಕಿ ಯಾರಿಗೋ ಟಿಕೆಟ್ ನೀಡುವ ಮೂಲಕ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿರುವುದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ಸ್ಪಷ್ಟಪಡಿಸಿದರು.
ಪಕ್ಷದಲ್ಲಿರುವಾಗ ಬೀದರ್ ಮತ್ತು ಕಲಬುರಗಿ ಎಂ.ಪಿ. ಅವರ ಸಹಾಯದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಪಕ್ಷದ ಇಬ್ಬಗೆಯ ನೀತಿಯಿಂದಾಗಿ ಈ ಹಿಂದೆ ಎರಡು ಬಾರಿ ರಾಜೀನಾಮೆ ಸಲ್ಲಿಸಿದ್ದೆ. ಆದರೆ ಅದು ಅಂಗೀಕಾರ ಆಗಿರಲಿಲ್ಲ. ಇದು ಕೊನೆ ರಾಜೀನಾಮೆ ಎಂದು ತಿಳಿಸಿದರು.
ಪಕ್ಷಕ್ಕಾಗಿ ಕಳೆದ ಏಳೆಂಟು ವರ್ಷಗಳಿಂದ ಸಾಕಷ್ಟು ದುಡಿದಿದ್ದೆ. ಆದರೆ ಪಕ್ಷಕ್ಕಾಗಿ ದುಡಿದವರಿಗೆ ಬಿಜೆಪಿಯಲ್ಲಿ ಕಿಮ್ಮತ್ತಿಲ್ಲ. 10 ವರ್ಷಗಳ ಹಿಂದಿನ ಬಿಜೆಪಿ ಈಗ ಇಲ್ಲ. ಅಧಿಕಾರದ ಮದದಲ್ಲಿ ಎಲ್ಲವನ್ನೂ ಮರೆತಿದ್ದಾರೆ. ಕ್ರಿಮಿನಲ್ಸ್, ಬುಕ್ಕಿಗಳಿಗೆ ಅಲ್ಲಿ ಜಾಗವಿದೆ. ಹೆಚ್ಚಿನ ಕೇಸ್‍ಗಳಿದ್ದರೆ ಗ್ರೇಡ್ ಹೆಚ್ಚುತ್ತ ಹೋಗುತ್ತದೆ. ಕಾರ್ಯಕರ್ತರ, ಅಭಿಮಾನಿಗಳ ಇಚ್ಛೆಯಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಅರವಿಂದ ಚವ್ಹಾಣ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಹಾಂತಪ್ಪ ಸಂಗಾವಿ, ರೇವಣಸಿದ್ದಪ್ಪ ಮಾಸ್ತರ್, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ ಮರತೂರ, ರಮೇಶ, ಮಲ್ಲಿಕಾರ್ಜುನ ಪೂಜಾರಿ ಇತರರಿದ್ದರು.