ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ವೇಣುಗೋಪಾಲ ದೇಶಪಾಂಡೆ ಹೇಳಿದರು.
ಹರಿಯಾಣ ವಿಶ್ವವಿದ್ಯಾಲಯದಿಂದ ಮ್ಯಾಜಿಕ್ ಬುಕ್ ಆಫ್ ರಿಕಾರ್ಡ್ಸ್ ಗೌರವ ಡಾಕ್ಟರೇಟ್ ಪಡೆದ ಹುಮನಾಬಾದನ ಹಾಸ್ಯ ಕಲಾವಿದ ಡಾ. ರೇವಣಸಿದ್ಧಯ್ಯ ಹಿರೇಮಠ ದಂಪತಿಗಳಿಗೆ ನಗರ ಹೊರವಲಯದ ಕೆ.ವಿ.ಪಿ ದಣ್ಣೂರ ಪಿ.ಯು ಕಾಲೇಜಿನಲ್ಲಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯ ಕಷ್ಟದಲ್ಲಿ ಬೆಳೆದಾಗ ಬದುಕಿನ ತಿರುಳು ಗೊತ್ತಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೇವಣಸಿದ್ದಯ್ಯ ಹಿರೇಮಠ, ಪ್ರತಿಯೊಬ್ಬರು ಕಷ್ಟ ಪಟ್ಟು ಕಲಿತಾಗ ಮಾತ್ರ ಅದರ ಬೆಲೆ ಅರಿಯಲು ಸಾಧ್ಯ. ಎಲ್ಲರ ನೋವು ನನ್ನದು ಎಂದು ಅರಿತಾಗಲೇ ಆ ಬಾಳಿಗೊಂದು ಬೆಲೆ ಸಿಗುವುದು ಎಂದು ಹೇಳಿದರು.
ಸಾಧನೆ ತುಡಿತ ಇದ್ದವರಿಗೆ ಎಂಥ ಕಷ್ಟ ಕಾರ್ಪಣ್ಯ ಎದುರಾದರೂ ಮೆಟ್ಟಿ ನಿಲ್ಲುವ ಎದೆಗಾರಿಕೆ ಹೊಂದಿರಬೇಕು. ಮತ್ತೊಬ್ಬರ ಬದುಕಿಗೆ ಒಳಿತಾಗುವ ನಿಟ್ಟಿನಲ್ಲಿ ಪರೋಪಕಾರ ಸೇವೆ ಸಲ್ಲಿಸಿದ್ದಾಗ ಮಾತ್ರ ಆತ್ಮತೃಪ್ತಿ ಸಿಕ್ಕು ಜೀವನಕ್ಕೊಂದು ಸಾರ್ಥಕ ಬರಲಿದೆ ಎಂದರು.
ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯರಾದರೆ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳಲಿದೆ. ಹೀಗಾಗಿ, ಅದೃಷ್ಟಕ್ಕೆ ಕೈಕಟ್ಟಿ ಕೂತರೆ ಸಾಲದು, ನಿರಂತರವಾಗಿ ಪರಿಶ್ರಮಪಟ್ಟಾಗ ಗುರಿ ತಲುಪಲು ಸಾಧ್ಯ ಎಂದರು.
ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಅಧ್ಯಕ್ಷತೆ ವಹಿಸೊದ್ದರು. ಇದೇ ವೇಳೆಗೆ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರಾಜು ಹೆಬ್ಬಾಳ ಸೇರಿ ಅನೇಕರು ಹಾಸ್ಯದ ಚಟಾಕಿ ಸಿಡಿಸುವ ಮೂಲಕ ವಿದ್ಯಾರ್ಥಿಗಳು ನಗಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾವಾದಿ ಹಣಮಂತರಾಯ ಅಟ್ಟೂರ್, ಸಂಗೀತ ಕಲಾವಿದರಾದ ಶ್ರವಣಕುಮಾರ ಎಸ್. ಮಠ, ರಾಜು ಹೆಬ್ಬಾಳ, ಬಾಬುರಾವ ಪಾಟೀಲ್, ಉಪನ್ಯಾಸಕಿಯರಾದ ಪ್ರಿಯಾಂಕಾ ಕರಣಿಕ ಸೇರಿ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು. ರವಿ ಶಹಾಪುರಕರ್ ನಿರೂಪಿಸಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವಂದಿಸಿದರು.