ಸುರಪುರ:ಕ್ಷೇತ್ರದ ಸರ್ವಾಂಗಿಣ ಅಭಿವೃಧ್ಧಿಗೆ ಶಾಸಕ ರಾಜುಗೌಡ ಅನೇಕ ಯೋಜನೆಗಳನ್ನು ತಂದು ಅಭಿವೃಧ್ಧಿ ಮಾಡಿದ್ದು,ಇದರಿಂದ ರಾಜುಗೌಡ ಈಬಾರಿ 30 ಸಾವಿರ ಮತಗಳ ಅಂತರ ದಿಂದ ಗೆಲ್ಲಲಿದ್ದಾರೆ ಎಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಉಪ ಸಭಾಪತಿ ರಘುನಾಥ ಮಲ್ಕಾಪುರೆ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ರಾಜುಗೌಡ ಉತ್ತಮ ವಾಗ್ಮಿ ಹಾಗೂ ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕನಾಗಿದ್ದು ಆತನು ಗೆಲುವು ಶತಸಿದ್ಧ ಎಂದರು.
ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ,ಮನೆ ಒಡತಿಗೆ ತಿಂಗಳಿಗೆ 2 ಸಾವಿರ,10 ಕೆ.ಜಿ ಅಕ್ಕಿ,ಪದವೀಧರರಿಗೆ 3ಸಾವಿರ,ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ಹೀಗೆ 6 ಭರವಸೆಗಳನ್ನು ಹೇಳುತ್ತಿದ್ದಾರೆ,ಇದಕ್ಕೆಲ್ಲ ವಾರ್ಷಿಕ 2 ಲಕ್ಷ ಕೋಟಿ ಹಣ ಬೇಕು,ರಾಜ್ಯದ ಬಜೆಟ್ ಇರವುದೆ 3 ಲಕ್ಷ 16 ಸಾವಿರ ಕೋಟಿ,ಅದರಲ್ಲಿ 75 ಸಾವಿರ ಕೋಟಿ ಸಾಲದ ಬಡ್ಡಿಗೆ ಹೋಗುತ್ತದೆ,ಆದ್ದರಿಂದ ಇವೆಲ್ಲವು ಸುಳ್ಳು ಭರವಸೆಗಳು,ಮತದಾರರಿಗೆ ಇದರಿಂದ ಆಮಿಷ ಒಡ್ಡುತ್ತಿದ್ದು ಇದನ್ನು ಖಂಡಿಸುತ್ತೇನೆ ಮತ್ತು ಗ್ಯಾರಂಟಿ ಕಾರ್ಡ್ ವಿತರಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಆದ್ದರಿಂದ ಚುನಾವಣಾ ಆಯೋಗ ಇದರ ವಿರುದ್ಧ ಕೇಸು ದಾಖಲಿಸಬೇಕು ಎಂದರು.
ಕಾಂಗ್ರೆಸ್ 40 ಪರ್ಸೆಂಟ್ ಸರಕಾರ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.ಇದು ನಿಜವಾಗಿದ್ದರೆ ಕೇಸು ದಾಖಲಿಸಬೇಕಿತ್ತು ಎಂದರು.ಅಲ್ಲದೆ ಜಗದೀಶ ಶೆಟ್ಟರ್‍ಗೆ ಪಕ್ಷ ಎಲ್ಲವನ್ನು ನೀಡಿತ್ತು,ಈಬಾರಿ ಹೊಸಬರಿಗೆ ಅವಕಾಶ ಕೊಡುವ ಕಾರಣಕ್ಕೆ ಟಿಕೆಟ್ ನೀಡಿರಲಿಲ್ಲ,ಆದರೆ ಟಿಕೇಟ್ ಕೊಟ್ಟಿಲ್ಲ ಎಂದು ಪಕ್ಷ ಬಿಟ್ಟಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ಗುರು ಕಾಮಾ,ಹೆಚ್.ಸಿ ಪಾಟೀಲ್,ಕಿಶೋರ ಚಂದ್ ಜೈನ್,ಜಗದೀಶ ಪಾಟೀಲ್ ಉಪಸ್ಥಿತರಿದ್ದರು.