ಕಲಬುರಗಿ: ಚಿತ್ತಾಪುರದ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಲು ನಾನು ಬಿಡುವುದಿಲ್ಲ. ಮೋದಿ ಫೋಟೋ ತೋರಿಸಿದರೆ ಯಾರಿಗೆ ಬೇಕಾದರೂ ನಮ್ಮ ಜನರು ಮತ ಹಾಕಿಬಿಡಬೇಕಾ? ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಂಕಲಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದ ಅವರು ಬಿಜೆಪಿ ಅಭ್ಯರ್ಥಿ ತನ್ನ ಮೇಲೆ ಖುದ್ದಾಗಿ ಬಿಜೆಪಿ ಸರ್ಕಾರ ಕೇಸ್ ಹಾಕಿದ್ದಕ್ಕೆ ಪ್ರಿಯಾಂಕ್ ಖರ್ಗೆ ಕೇಸು ಹಾಕಿಸಿದ್ದಾನೆ ಎಂದು ಹೇಳುತ್ತಿದ್ದಾನೆ. ಅವನ ವಿರುದ್ದ ತೆಲಂಗಾಣ, ಆಂಧ್ರ, ಕರ್ನಾಟಕ ಹಾಗೂ ಮಹಾರಾಷ್ಟ್ರ ದಲ್ಲಿ ಕೇಸು ದಾಖಲಾಗಿವೆ. ಈ ಯಾವ ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಅಷ್ಟಕ್ಕೂ ಆ ಹುಡುಗ ಯಾರೂ ಅಂತಾನೆ ನನಗೆ ಗೊತ್ತಿರಲಿಲ್ಲ. ತೀರಾ ಇತ್ತೀಚಿಗೆ ನನ್ನನ್ನು ಶೂಟ್ ಮಾಡುತ್ತೇನೆ ಎಂದ ಮೇಲೆ ಅವನ ಹಿನ್ನೆಲೆ ಗೊತ್ತಾಗಿದೆ ಎಂದರು.
ನೀವು ಹೋದ ಸಲ ಕಡಿಮೆ ಕೂಲಿ ಕೊಟ್ಟರು ನಿಮ್ಮ ಮನೆಯ ಆಳುಮಗನಾಗಿ ಹೆಚ್ಚಿನ ಕೆಲಸ ಮಾಡಿದ್ದೇನೆ. ಈಸಲ ಹೆಚ್ಚಿನ ಕೂಲಿ ಕೊಟ್ಟರೆ ಇನ್ನೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಹಾಗಾಗಿ ನೀವೆಲ್ಲ ನನಗೆ ಆಶೀರ್ವಾದ ಮಾಡಿ. ಅವನನ್ನು ಹೀನಾಯವಾಗಿ ಸೋಲಿಸಿದರೆ ಅವನು ಮತ್ತೆ ಚಿತ್ತಾಪುರ ಕಡೆ ಬರುವುದೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಜಮೀರ್ ಸಾಬ್ ಕೋಡ್ಲಾ ಹಾಗೂ ಪ್ರದೀಪ್ ರೆಡ್ಡಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.