ಕಲಬುರಗಿ: ನೂತನ ಸರಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ನಾಯಕರು ರಾಜ್ಯದ ಸಣ್ಣ ಕೈಗಾರಿಕಾ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರವರಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿ ಬರುವ ಜುಲೈ ಬಜೆಟ್‍ನಲ್ಲಿ ವಿಶೇಷ ಒತ್ತು ನೀಡಲು ಆಗ್ರಹಿಸಲಾಯಿತು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಸಮಿತಿಯ ನಿಯೋಗ ಹಿರಿಯ ಸಚಿವರಾದ ದರ್ಶನಾಪೂರವರ ಕಲಬುರಗಿ ನಿವಾಸಕ್ಕೆ ಭೇಟಿ ನೀಡಿ ಬರುವ ಜುಲೈ ಬಜೆಟ್ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಸಂಬಂಧಪಟ್ಟಂತಹ 38 ಪ್ರಮುಖ ಅಂಶಗಳ ವಿವರವಾದ ಪ್ರಸ್ತಾವನೆಯ ಅಂಶಗಳ ಬಗ್ಗೆ ಸಚಿವರೊಂದಿಗೆ ವಿವರವಾಗಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿರುವ ಯೋಜನೆಗಳ ಅನುಷ್ಠಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ, ಕೆ.ಕೆ.ಆರ್.ಡಿ.ಬಿ.ಗೆ ಆದಷ್ಟು ಶೀಘ್ರ ಸಂಪುಟ ದರ್ಜೆಯ ಸಚಿವರ ನೇಮಕ, ಕಲ್ಯಾಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಸೇರಿದಂತೆ 38 ಅಂಶಗಳ ಪ್ರಸ್ತಾವನೆ ಸಲ್ಲಿಸಲಾಯಿತು. ಸಮಿತಿ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ನಮ್ಮ ಪ್ರದೇಶದ ಎಲ್ಲಾ ಸಚಿವರು ಸಂಘಟಿತವಾಗಿ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಲಾಗುವದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ, ಡಾ. ಮಾಜಿದ್ ದಾಗಿ, ಕಲ್ಯಾಣರಾವ ಪಾಟೀಲ, ಸಂತೋಷ ಜವಳಿ, ಅಸ್ಲಂ ಚೌಂಗೆ, ಭೀಮರಾಯ ಕಂದಳ್ಳಿ, ಶಿವಾನಂದ ಬಿರಾದಾರ, ಬಾಬಾ ಫಕ್ರುದ್ದೀನ್, ಮಹಮ್ಮದ ಖದೀರ, ಮಲ್ಲಿನಾಥ್ ಸಂಗಶೆಟ್ಟಿ, ಶಿವಾನಂದ ಕಾಂದೆ, ಸಾಜಿದ್ ಅಲಿ ರಂಜೋಲಿ, ಭೀಮಶೆಟ್ಟಿ ಮಕ್ಕಾ, ಸಂಧ್ಯಾರಾಜ ಸ್ಯಾಮ್ಯೂವೆಲ್, ಶರಣಬಸಪ್ಪ ಕುರಿಕೋಟಾ, ಮಹಮ್ಮದ ಗೌಸ್ ಸೇರಿದಂತೆ, ಅನೇಕರು ಉಪಸ್ಥಿತರಿದ್ದರು.