ಸುರಪುರ: ಶಿಕ್ಷಣವು ಜ್ಞಾನ ಹೆಚ್ಚಿಸುತ್ತದೆ, ವ್ಯಕ್ತಿತ್ವ ರೂಪಿಸುತ್ತದೆ. ಪ್ರತಿಯೊಬ್ಬರ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಅತ್ಯಗತ್ಯ ಸಾಧನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಅಪಾರವಾಗಿದೆ ಎಂದು ಗೋವಿಂದರಾಂ ಝಂವ್ಹಾರ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ನಂದಕಿಶೋರ ಝಂವ್ಹಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಆನಂದ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋವಿಂದರಾಂ ಝಂವ್ಹಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಶನಲಾಲಜಿ ಜಶೋಧ ಧರಕ್ ಅವರ ಸ್ಮರಣಾರ್ಥವಾಗಿ ಗುರುವಾರ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಹೊರ ಹೊಮ್ಮಬೇಕಾದರೆ ಶಿಕ್ಷಣ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಮುಂದೆ ಬರಬೇಕು. ಜೀವನದಲ್ಲಿ ಗುರಿ, ಶ್ರದ್ದೆ ಮೈಗೂಡಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಫಾಸ್ಟರ್ ರೆವರೆಂಡ್ ಧನರಾಜ್ ಸಂದೇಶ ನೀಡಿದರು. ಶಾಲೆಯ ಮುಖ್ಯ ಗುರು ಮಹೇಶ್ ಜಹಗೀರದಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಗುರು ಪಾಲನಾಯಕ್, ಗೋವಿಂದರಾಂ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರಾದ ಜುಗಲ್ ಕಿಶೋರ ಧರಕ್, ನರೇಶಕುಮಾರ ಧರಕ್, ರಾಮಸ್ವರೂಪ, ಪ್ರಹ್ಲಾದ್, ದಿಲೀಪ್, ಮಹೇಶ್, ಕುಸುಮಾ, ಪ್ರೀಯಾ ಧರಕ, ಶಿಕ್ಷಕರಾದ ನಿಂಗಪ್ಪ ಮಾಳೆಗಾರ, ರಮೇಶ ಬಿರಾದಾರ್, ರಾಜಕುಮಾರ, ಭಾಗಣ್ಣ, ಸುಜಾತಾ, ಗೀತಾ, ಸುನೀತಾ, ರೇಣುಕಾ ಇದ್ದರು. ಟ್ರಸ್ಟ್ ವತಿಯಿಂದ 50 ಸ್ಕೂಲ್ ಬ್ಯಾಗ್ ಮತ್ತು 300 ನೋಟ್ ಬುಕ್ ವಿತರಿಸಲಾಯಿತು.