ಆಳಂದ: ಪಟ್ಟಣದಲ್ಲಿ ಕಳೆದ 5 ದಿನಗಳಿಂದ ಧರಣಿ ಕುಳಿತಿರುವ ಸರಾಫ್ ವ್ಯಾಪಾರಿಗಳ ಧರಣಿಗೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು.
ಶನಿವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಾಫ್ ವ್ಯಾಪಾರಿಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ತಮ್ಮ ಗಮನಕ್ಕೆ ಬಂದಿದೆ. ವಿನಾಕಾರಣ ವ್ಯಾಪಾರಸ್ಥರನ್ನು ಗುರಿಯಾಗಿಸುವುದು, ಸುಳ್ಳು ಆಪಾದನೆ ಮೇರೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಸರಾಫ್ ವ್ಯಾಪಾರುಗಳು ಕಳೆದ 15 ದಿನಗಳಿಂದ ಅಂಗಡಿಗಳನ್ನು ಬಂದ್ ಮಾಡಿದ್ದಾರೆ ಇದರಿಂದ ಅಂಗಡಿ ಮಾಲೀಕರಿಗೆ, ಕರ್ಮಚಾರಿಗಳಿಗೆ ಹಾಗೂ ಖರೀದಿದಾರರಿಗೆ ತೊಂದರೆಯಾಗುತ್ತಿದೆ ಈ ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಸರಾಫ್ ವ್ಯಾಪಾರಿಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಸುಗಮ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ವಿಚಾರಣೆಯ ನೆಪದಲ್ಲಿ ವ್ಯಾಪಾರಿಗಳ ಮೇಲೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಬಲ ಕಾಯಿದೆ ಜಾರಿಗೆ ತರಬೇಕು ಇದರಿಂದ ವ್ಯಾಪಾರಸ್ಥರಿಗೂ, ಗ್ರಾಹಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ವ್ಯಾಪಾರಸ್ಥರು, ಗ್ರಾಹಕರು ಮತ್ತು ಪೊಲೀಸರಿಗೆ ಈ ಪ್ರಕರಣದಲ್ಲಿ ದಾರಿ ತಪ್ಪಿಸುತ್ತಿರುವ ಹೀರಾಚಂದ ಎಂಬ ವ್ಯಕ್ತಿಯ ಮೇಲೆ ಪೊಲೀಸರು ಸೂಕ್ತ ಕ್ರಮಗೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಈ ವಿಷಯದಲ್ಲಿ ವ್ಯಾಪಾರಿಗಳ, ಗ್ರಾಹಕರ ಜೊತೆ ತಾವು ಮತ್ತು ಭಾರತೀಯ ಜನತಾ ಪಕ್ಷ ಜೊತೆಯಾಗಿ ನಿಲ್ಲಲಿದೆ ಎಂದು ತಿಳಿಸಿ ಬೆಂಬಲ ಸೂಚಿಸಿದರು.