ಬೆಂಗಳೂರು: ರಾಷ್ಟೀಯ ಶಿಕ್ಷಣ ನೀತಿ –2019 ರ ತಿದ್ದುಪಡಿಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಈ ಕರಡಿನ ಸಮಸ್ಯೆಗಳು ಹಾಗೂ ಸಲಹೆಗಳ ಕುರಿತು ಶಿಫಾರಸ್ಸು ಪ್ರತಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಪತ್ರಿಕಾಗೋಷ್ಟಿ ಮೂಲಕ ಬೆಂಗಳೂರು ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಾಕ್ಷರಾದ ಫಯಾಝ್ ದೊಡ್ಡಮನೆ, ಹೊಸ ಶಿಕ್ಷಣ ನೀತಿ ಕರಡಿನಲ್ಲಿ ಅನೇಕ ಸಲಹೆಗಳ ಬಗ್ಗೆ ತೀವ್ರವಾದ ಆಕ್ಷೇಪಗಳಿವೆ. ಅಲ್ಲದೆ ಪೂರ್ವ ನಿರ್ಧರಿತ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ಹಲವು ಸೂಚನೆಗಳನ್ನು ನೀಡುತ್ತದೆ. ಕ್ಯಾಂಪಸ್ ಫ್ರಂಟ್ ಇದನ್ನು ವಿದ್ಯಾರ್ಥಿ ವಿರೋಧಿ ಶಿಕ್ಷಣ ನೀತಿ ಎಂದು ಅಭಿಪ್ರಾಯ ಪಟ್ಟಿದೆ. ಸರ್ಕಾರವು ಶಿಕ್ಷಣ ಕ್ಷೇತ್ರದಿಂದ ಕ್ರಮೇಣ ಹಿಂದೆ ಸರಿಯಲು ಮತ್ತು ಖಾಸಗಿ ಉದ್ಯಮಗಳಿಗೆ ಹಸ್ತಾಂತರಿಸುವ ಲಕ್ಷಣಗಳು ಈ ಕರಡಲ್ಲಿ ಕಂಡು ಬರುತ್ತದೆ. ನಾವು ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸುತ್ತಿರುವಾಗ ಸರ್ಕಾರವು ಗ್ರಾಮೀಣ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಪಡುತ್ತಿದೆ.
ಅಲ್ಲದೆ ಪರೋಕ್ಷವಾಗಿ ಹಿಂದುತ್ವ ಸಿದ್ದಾಂತವನ್ನು ಪ್ರದಿಪಾದಿಸುವಂತಹವ ಪ್ರಯತ್ನವನ್ನು ಮಾಡಿದ್ದಾರೆ. ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಒತ್ತು ನೀಡದಿರುವುದು ಅನ್ಯಾಯ ಎಂದು ಹೇಳಿದರು. ಮತ್ತು ಈ ಶಿಫಾರಸ್ಸನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಪ್ರತಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಜನಪ್ರತಿನಿಧಿಗಳಿಗೆ ನೀಡಲಿದ್ದೇವೆ ಎಂದು ಪತ್ರಿಕಾಗೊಷ್ಠಿಯಲ್ಲಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸ್ವದಕತ್ ಶಾ, ಕಾರ್ಯದರ್ಶಿಗಳಾದ ಅಶ್ರಫ್ ಹಾಗೂ ಅಥಾವುಲ್ಲಾ ಮತ್ತು ಬೆಂಗಳೂರು ಜಿಲ್ಲಾಧ್ಯಕ್ಷರಾದ ಝುಬೈರ್ ಉಪಸ್ಥಿತರಿದ್ದರು.