ಕಲಬುರಗಿ; ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಜನಪರ ಕೆಲಸಗಳನ್ನು ಮಾಡುವಲ್ಲಿ ಗಟ್ಟಿ ಹಾಗೂ ದಿಟ್ಟವಾದಂತಹ ಹೆಜ್ಜೆ ಇಡುತ್ತ ಹೊರಟಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವುದೇ ನಮ್ಮ ಗುರಿ. ಹೀಗಿರುವಾಗ ಯಾವುದೇ ತರಹದ ಅಸಮಾಧಾನ ಇಲ್ಲ. ಸಂಪುಟದಲ್ಲಿರುವ ಎಲ್ಲಾ ಸಚಿವರೊಂದಿಗೆ ಉತ್ತಮ ಸಂಬಂಧವಿದೆ. ಕ್ಷೇತ್ರದ ಪ್ರಗತಿಗೆ ಅದನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವುದಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕೆಲವು ಶಾಸಕರು ಸೇರಿ ಬಿಆರ್ ಪಾಟೀಲರ ಲೆಟರ್ ಹೆಡ್‍ನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಗಿರುವ ಪತ್ರದಲ್ಲಿ ತಮ್ಮದು ಸಹಿ ಇರುವ ವಿಚಾರವಾಗಿ ಮಾಧ್ಯಮಗಳಲ್ಲಿ ಸಾಗಿರುವ ಚರ್ಚೆಗಳ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅಲ್ಲಂಪ್ರಭು ಪಾಟೀಲರು ತಾವು ಪ್ರತಿನಿಧಿಸುತ್ತಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ಅಪಾರ ಅನುದಾನ ಬಂದಿದೆ. ಹೀಗಾಗಿ ಯಾವ ವಿಚಾರಗಳಲ್ಲಿಯೂ ಯಾರೊಂದಿಗೂ ತಮ್ಮ ಅಸಮಾಧಾನವಿಲ್ಲವೆಂದು ಹೇಳಿದ್ದಾರೆ.
ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಜೆಟ್‍ನಲ್ಲಿ ದೊರಕಿದೆ. ಅದರಲ್ಲೂ ಅನೇಕ ಆಸ್ಪತ್ರೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳು ಮಂಜೂರಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ಸಾಗಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರು ಮುಂದಾಗಿ ಅನುದಾನ ತಂದಿದ್ದಾರೆ. ಹೀಗಿರುವಾಗ ಅಸಮಾಧ್ಯಾನ ಯಾಕೆ, ಯಾವ ಕಾರಣಕ್ಕಾಗಿ ಮಾಡಿಕೊಳ್ಳಬೇಕು? ಎಂದು ಅಲ್ಲಂಪ್ರಭು ಪಾಟೀಲ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿರುವ ಎಲ್ಲಾ ಸಚಿವರೊಂದಿಗೆ ತಾವು ಉತ್ತಮ ಬಾಂಧವ್ಯ ಹೊಂದಿರುವೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರೊಂದಿಗೂ, ಸೇಡಂ ಸಾಸಕರು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲರೂ ಸೇರಿದಂತೆ ಸಚಿವರೊಂದಿಗೆ ಉತ್ತಮ ಸಂಬಂಧ ಇದೆ. ಎಲ್ಲರೂ ಅಭಿವೃದ್ಧಿಪರವಾದಂತಹ ಚಿಂತನೆ ಇರುವಂತಹವರಾಗಿದ್ದಾರೆ. ನಾವೆಲ್ಲರೂ ಒಂದಾಗಿದವೆ, ಮುಂದೆಯೂ ಒಂದಾಗಿರುತ್ತೇವೆ. ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ. ಜನತೆಗೆ ನೀಡಿರುವ ಪಂಚ ಗ್ಯಾರಂಟಿ ಜಾರಿಗೆ ತಂದು ನಾಡಿನ ಪ್ರಗತಿಗೆ ದುಡಿಯುತ್ತೇವೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.