ಕಲಬುರಗಿ: ಭಾರತದ ಪ್ರಗತಿ ಕೇವಲ ಸರ್ಕಾರದಿಂದ ಅಷ್ಟೇ ಸಾಧ್ಯವಿಲ್ಲ. ಪ್ರತಿ ಪ್ರಜೆಯು ದೇಶದ ಏಳಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವ್ಯಕ್ತಿಗತ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ನಾಂದಿ ಆಗಲಿದೆ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.
ನಗರದ ಖಾಜಾ ಬಂದಾನವಾಜ ವಿವಿಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದ ನಂತರ ಸಾಕಷ್ಟು ಪ್ರಗತಿ ಹೊಂದಿದೆ. ಅಲ್ಲದೇ ಭಾರತ ಈಗ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಜ್ಞಾನ ಪಡೆಯಲು ಅಂತರ್ಜಾಲದಂತಹ ಮಾರ್ಗಗಳಿವೆ. ಪ್ರತಿ ಪ್ರಜೆಯೂ ತಮ್ಮನ್ನು ಅಪಗ್ರೇಡ್ ಮಾಡಿಕೊಳ್ಳ ಬಹುದು ಎಂದರು.
ಈ ಭಾಗದಲ್ಲಿ ಮಹಿಳಾ ಶಿಕ್ಷಣದಲ್ಲಿ ನಿರತವಾದ ಖಾಜಾ ಶಿಕ್ಷಣ ಸಂಸ್ಥೆ ಕಳೆದ 6 ದಶಕಗಳಿಂದ ಶಿಕ್ಷಣ ನೀಡುತ್ತಿದೆ. ಅಲ್ಲದೇ ಖಾಜಾ ಬಂದನಾವಾಜ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಭಾರತದ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ನಿರತವಾಗಿದೆ ಎಂದರು.
ಭಾರತದಲ್ಲಿ ಕೆಬಿಎನ್ ಟಾಪ್ 50 ವಿವಿಗಳಲ್ಲಿ ಸ್ಥಾನ ಪಡೆದಿದ್ದು, ಮುಂಬರುವ ದಿನಗಳಲ್ಲಿ ನಂ 1 ಸ್ಥಾನಕ್ಕೆ ತರಲು ನಾವೆಲ್ಲ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲಾ ಉಪನ್ಯಾಸಕ ವರ್ಗ ಇನ್ನೂ ಕಠಿಣ ಶ್ರಮ ವಹಿಸಿ, ಸಂಶೋಧನೆಯಲ್ಲಿ ನಿರತರಾಗಬೇಕು ಎಂದ ಅವರು ಶೀಘ್ರದಲ್ಲಿಯೇ ಕೆಬಿಎನ್ ವಿವಿಯಲ್ಲಿ ಇನ್ನೂ ಹೆಚ್ಚು ಸೌಲಭ್ಯಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಸಯ್ಯದ್ ಅಕ್ಬರ ಹುಸೇನಿ ಶಾಲೆಯ ಎನ್ ಸಿಸಿ ಘಟಕದ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು. ಸ್ವಾತಂತ್ರ್ಯ ದಿನದ ನೆನಪಿನಾರ್ಥ ಪಾರಿವಾಳ ಹಾರಿ ಬಿಡುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಜೋಹರಾ ಮತ್ತು ಆಫಶಾನ ಕಾರ್ಯಕ್ರಮ ನಿರೂಪಿಸಿದರು. ರುಕಯ ರಫಾ ವಂದಿಸಿದರು.
ಕೆಬಿಎನ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿವಿಯ ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ, ಕುಲಸಚಿವೆ ಡಾ.ರುಕ್ಸಾರ ಫಾತಿಮಾ, ವೈದ್ಯಕೀಯ ನಿಕಾಯದ ಡೀನ ಡಾ ಸಿದ್ದೇಶ್ ಸಿರವಾರ್ , ಕಲಾ ನಿಕಾಯದ ಡೀನ್ ಡಾ. ನಿಶಾತ್ ಆರೀಫ್ ಹುಸೇನಿ, ಡಾ ರಾಜಶ್ರೀ ಪಾಲದಿ, ಡಾ ಬಷೀರ, ಕೆಬಿಎನ್ ಅಡಿ ಬರುವ ಎಲ್ಲ ವಿದ್ಯಾ ಸಂಸ್ಥೆಗಳ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.