ಕಲಬುರಗಿ: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ತತ್ತರಿಸಿದ ಜನತೆ ಅದರಲ್ಲೂ ಉತ್ತರ ಕರ್ನಾಟಕದ ಎಷ್ಟೋ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಅವರ ಸಹಾಯಕ್ಕಾಗಿ ಪರಿಹಾರ ನಿಧಿ ಸಂಗ್ರಹ ಮಾಡುತ್ತಿದ್ದೇವೆ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.
ಬುಧವಾರ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾವಿದ್ಯಾಲಯದ ಎಲ್ಲಾ ಶಿಕ್ಷಕ, ಶಿಕ್ಷಕೇತರರು ಒಂದು ದಿನ ಸಂಬಳ ಜತೆಗೆ ಜಾಥಾದ ಮೂಲಕ ವಿದ್ಯಾರ್ಥಿನಿಯರು ಸಂಗ್ರಹಿಸಿದ ಹಣವನ್ನು ರಾಜ್ಯದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು. ಪ್ರಕೃತಿ ವಿಕೋಪದಿಂದ ಎಷ್ಟೋ ಕುಟುಂಬಗಳು ಮನೆ ಮಠ ಕಳೆದುಕೊಂಡು ಕಷ್ಟದಲ್ಲಿದ್ದ ಅವರಿಗೆ ಸಹಾಯ ಒದಗಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ವರ್ಷ ಮಳೆಯಿಂದ ಹಾನಿಯಾದ ಕೊಡುಗು ಜಿಲ್ಲೆಯ ನೆರವಿಗೆ ಹಾಗೂ ಪುಲ್ವಾಮ ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರಿಗೂ ಸಹ ಹಣ ಸಂಗ್ರಹ ಮಾಡಿ ಕೊಡಲಾಗಿತ್ತು ಎಂದು ಹೇಳಿದರು.
ಜಾಥಾದಲ್ಲಿ ಮಹಾವಿದ್ಯಾಲಯದ ಡಾ. ಇಂದಿರಾ ಶೇಟಕಾರ, ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ.ಸಿದ್ದಮ್ಮ ಗುಡೇದ್, ಡಾ. ಪುಟ್ಟಮಣಿ ದೇವಿದಾಸ, ಪ್ರೊ. ಜಾನಕಿ ಹೊಸೂರ, ಡಾ.ಸೀಮಾ ಪಾಟೀಲ, ಪ್ರೊ. ರೇವಯ್ಯ ವಸ್ತ್ರದಮಠ, ಈರಣ್ಣ ಸ್ವಾದಿ, ಸಿದ್ದು ಪಾಟೀಲ, ಕೃಪಾಸಾಗರ ಗೊಬ್ಬುರ, ದೀಶಾ ಮೆಹತಾ, ಅನಿತಾ ಗೊಬ್ಬುರ, ಪದ್ಮಜ ಹೆಚ್. ವಿದ್ಯಾ ರೇಶ್ಮಿ, ಅನುಸೂಯ ಬಡಿಗೇರ, ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಪರುತಯ್ಯ ಹಿರೇಮಠ ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಗೋದುತಾಯಿ ಮಹಾವಿದ್ಯಾಲಯದಿಂದ ಶರಣಬಸವ ವಿಶ್ವವಿದ್ಯಾಲಯದವರೆಗೂ ಜಾಥಾ ನಡೆಸಲಾಯಿತು. ಅನೇಕರು ನಿಧಿಗೆ ಹಣ ಕೊಡುವುದರ ಮೂಲಕ ಮಾನವೀಯತೆ ಮೆರೆದರು.