ಆಳಂದ; ಪಟ್ಟಣದ ಶರಣ ನಗರದಲ್ಲಿ ಜನಗಳಿಗೆ ಸೇವೆ ನೀಡುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೇರೆ ಕಡೆ ಸ್ಥಳಾಂತರಿಸಲು ಮುಂದಾದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಜಿ. ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ಪುರಸಭೆಯ 8 ವಾರ್ಡಗಳ ಜನತೆಗೆ ಉಪಯೋಗವಾಗಲೆಂದು ಶರಣ ನಗರದಲ್ಲಿ ನಿರ್ಮಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ವಾರ್ಡಗಳ ವ್ಯಾಪ್ತಿಯಲ್ಲಿ ತಮಗೆ ನಿರೀಕ್ಷಿತ ಮತಗಳು ಬಂದಿಲ್ಲವೆಂದು ರಾಜಕೀಯ ದ್ವೇಷದಿಂದ ಅದನ್ನು ಬೇರೆ ಕಡೆ ಸ್ಥಳಾಂತರಿಸಲು ಶಾಸಕ ಬಿ ಆರ್ ಪಾಟೀಲ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಈಗಾಗಲೇ ಆ ವಾರ್ಡಗಳ ಜನ ಆಸ್ಪತ್ರೆಯನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ ಅಲ್ಲದೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಜನರ ಅಹವಾಲು ಆಲಿಸಿದ್ದಾರೆ ಒಂದು ವೇಳೆ ಜನರ ಮಾತಿಗೆ ಮನ್ನಣೆ ನೀಡದೇ ಹೋದರೆ ತಾವು ಜನಗಳೊಂದಿಗೆ ಬೀದಿಗೆ ಇಳಿಯುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಶಾಸಕ ಬಿ ಆರ್ ಪಾಟೀಲರಿಗೆ ಜನತೆಯ ಬಗ್ಗೆ ನೈಜ ಕಾಳಜಿಯಿದ್ದರೆ ಪಟ್ಟಣದ ಜನಸಂಖ್ಯೆಯನ್ನು ಮತ್ತು ಅವಶ್ಯಕತೆಯನ್ನು ಗಮನಿಸಿ ಪಟ್ಟಣದ ವ್ಯಾಪ್ತಿಯಲ್ಲಿ ಮತ್ತೊಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರಿ ಮಾಡಿಸಿ, ಲೋಕಾರ್ಪಣೆ ಮಾಡಲಿ ಎಂದು ಸವಾಲು ಹಾಕಿದರು.