ಸುರಪುರ: ನಗರಕ್ಕೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದ ಸುರಪುರ ವಕೀಲರ ಸಂಘ ಹರ್ಷ ವ್ಯಕ್ತಪಡಿಸಿದೆ. ನಗರದ ಜೆಎಂಎಫ್‍ಸಿ ಕೋರ್ಟ್ ಆವರಣದಲ್ಲಿ ವಕೀಲರ ಸಂಘದ ಸದಸ್ಯರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ನಂದಣ್ಣ ಜೆ.ಬಾಕ್ಲಿ ಮಾತನಾಡಿ, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಅವರುಗಳು ಕಕ್ಷಿದಾರರ ಹಿತ ದೃಷ್ಟಿಯಿಂದ ವಿಶೇಷ ಆಸಕ್ತಿ ವಹಿಸಿ ಮತ್ತು ಕಕ್ಷಿದಾರರ ಅನೂಕೂಲಕ್ಕಾಗಿ ಸುರಪುರಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿದ್ದಾರೆ. ನ್ಯಾಯಮೂರ್ತಿಗಳಾದ ದಿನೇಶಕುಮಾರ ಮತ್ತು ಅಶೋಕ ಕಿಣಿಗಿ ಅವರು ಕೂಡ ಮಂಜೂರಾತಿಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಮಂಜೂರಾದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರ್ಥಿಕ ಅನುಮೋದನೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸುರಪುರ, ಶಹಾಪುರ, ಹುಣಸಗಿ ತಾಲೂಕುಗಳು ಸದರಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಈ ನ್ಯಾಯಾಲಯ ಮಂಜೂರಾತಿಯಿಂದ ಕಕ್ಷಿದಾರರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಇದು ನಮ್ಮ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿಂದೆ 2-3 ಬಾರಿ ವಕೀಲರ ನಿಯೋಗ ಬೆಂಗಳೂರಿಗೆ ತೆರಳಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ನ್ಯಾಯಾಂಗ ಇಲಾಖೆ ಈಗ ನ್ಯಾಯಾಲಯ ಮಂಜೂರು ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಎನ್.ಎಸ್.ಪಾಟೀಲ್, ಜಿ.ತಮ್ಮಣ್ಣ, ಬಿ.ಹೆಚ್.ಕಿಲ್ಲೇದಾರ್, ಮಹ್ಮದ್ ಹುಸೇನ್, ನಿಂಗಣ್ಣ ಚಿಂಚೋಡಿ, ರಮಾನಂದ ಕವಲಿ, ಜಿ.ಎಸ್.ಪಾಟೀಲ್, ಉದಯಸಿಂಗ, ಮಾನಪ್ಪ ಕವಡಿಮಟ್ಟಿ, ಜಿ.ಆರ್.ಬನ್ನಾಳೆ, ವೆಂಕಟೇಶ ನಾಯಕ, ಯಲ್ಲಪ್ಪ ಹುಲಿಕಲ್, ಅಶೋಕ ಕವಲಿ, ಸಂಗಣ್ಣ ಬಾಕ್ಲಿ, ಸುರೇಂದ್ರ ದೊಡ್ಡಮನಿ, ಬಲಭೀಮ ನಾಯಕ, ಮಲ್ಲಯ್ಯ ನಾಯಕ, ನಾಗಪ್ಪ ಚಾವಲಕರ್, ವಿನಾಯಕ ನಾಯಕ, ಹೈಯಾಳಪ್ಪ ಕಿಲ್ಲೇದಾರ್, ವಿಶ್ವಮಿತ್ರ ಕಟ್ಟಿಮನಿ, ನಿಂಗಣ್ಣ ಸೇಡಂ, ಸಂತೋಷ ಗಾರಂಪಳ್ಳಿ, ಮಂಜುನಾಥ ಗುಡುಗುಂಟಿ ಸೇರಿ ಅನೇಕ ಹಿರಿಯ ಕಿರಿಯ ವಕೀಲರು ಇದ್ದರು.