ಶಹಾಬಾದ: ತಾಲೂಕಿನ ಮರತೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವನ ತೆಗನೂರ್ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಬೇಕು. ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಮರತೂರ ಗ್ರಾಮ ಪಂಚಾಯತಿ ಎದುರುಗಡೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡರಾದ ಶೇಖಮ್ಮ ಕುರಿ ಹಾಗೂ ಕಟ್ಟಡ ಕಾರ್ಮಿಕರ ಸಂಘದ ನಾಗಪ್ಪ ರಾಯಚೂರಕರ್, ದೇವನ ತೆಗನೂರ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಹಲವಾರು ಕೂಲಿಕಾರ್ಮಿಕರು ಇದ್ದರೂ ಕೂಡ ಕೆಲಸ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಕೂಲಿಕಾರ್ಮಿಕರಿಗೆ ಇಲ್ಲಿವರೆಗೆ ಉದ್ಯೋಗ ಚೀಟಿ ನೀಡಿರುವುದಿಲ್ಲ.
ಈ ಬಗ್ಗೆ ಹಲವಾರು ಬಾರಿ ಇಲ್ಲಿನ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿಗೆ ಭೇಟಿ ಮಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಲ್ಲದೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ. ಕೂಡಲೇ ಇಲ್ಲಿನ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕು. ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮಾಡಬೇಕು.ಇದರಿಂದ ಇಲ್ಲಿನ ಕೂಲಿ ಕಾರ್ಮಿಕರು ಬೆಂಗಳೂರು, ಹೈದ್ರಬಾದ, ಮುಂಬಯಿಗಳಂಥಹ ನಗರಗಳಿಗೆ ಗುಳೆ ಹೋಗುವುದು ತಪ್ಪುತ್ತದೆ.ಕೂಡಲೇ ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತೆ ಗ್ರಾಮ ಪಂಚಾಯತಿ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗದು ಒಂದು ಎಚ್ಚರಿಕೆ ನೀಡಿದರು.
ನಂತರ ತಾಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಕಾಶಿನಾಥ ಬಂಡಿ,ತಾಲೂಕಾ ಮುಖಂಡೆ ವಿಜಯಲತಾ ಸಂಕ, ಸಾವಿತ್ರಿಬಾಯಿ ಮಲ್ಲಿಕಾರ್ಜುನ,ಲಕ್ಷ್ಮಿಬಾಯಿ ಬಸವರಾಜ,ಲಲಿತಾಬಾಯಿ ಬಸವರಾಜ, ರುಕ್ಮಿಣಿ ರಾಣಪ್ಪ, ಮಹಾದೇವಿ ಯಶವಂತ,ಶಾಂತಾಬಾಯಿ ಪ್ರೇಮ ಮತ್ತು ಪಿಎಸ್‍ಐ ಚಂದ್ರಕಾಂತ ಸೇರಿದಂತೆ ಅನೇಕ ಮಹಿಳೆಯರು ಇದ್ದರು.