ಚಿಂಚೋಳಿ: ಕಲಬುರಗಿ ನೀರಾವರಿ ವೃತ್ತದ ವ್ಯಾಪ್ತಿಯ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ನೀರಾವರಿ ಯೋಜನೆಗಳಿಂದ ರೈತರಿಗೆ ಆಗುತ್ತಿರುವ ಪ್ರಯೋಜನ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ನೀರಾವರಿ ಯೋಜನೆಗಳ ಹೋರಾಟಗಾರ, ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಒತ್ತಾಯಿಸಿದ್ದಾರೆ.
ಎರಡು ಜಿಲ್ಲೆಗಳಲ್ಲಿ ಸುಮಾರು 9 ನೀರಾವರಿ ಯೋಜನೆಗಳಿವೆ. ಇವುಗಳಿಂದ ಲಕ್ಷಾಂತರ ಎಕರೆ ಜಮೀನಿಗೆ ನೀರುಣಿಸಬೇಕು. ಆದರೆ ಇದು ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲದಲ್ಲೂ ಸಾಧ್ಯವಾಗದಿರುವುದು ದುರಂತವೇ ಸರಿ ಎಂದಿದ್ದಾರೆ. ಇಲ್ಲಿನ ಬೆಣ್ಣೆತೊರಾ, ನಾಗರಾಳ, ಚಂದ್ರಂಪಳ್ಳಿ, ಅಮರ್ಜಾ, ಕಾರಂಜಾ,ಚುಳಕಿ ನಾಲಾ, ಭೀಮಾ ಏತ ನೀರಾವರಿ, ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳಿಂದ ನೀರಾವರಿಗೆ ಪ್ರಯೋಜನವಾಗುತ್ತಿಲ್ಲ.
ಸರ್ಕಾರಗಳು ರೈತರ ಜಮೀನಿಗೆ ನೀರುಣಿಸುವ ನೆಪಮಾಡಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ನೀರು ಮಾತ್ರ ರೈತರ ಜಮೀನಿಗೆ ಹರಿಯುತ್ತಿಲ್ಲ. ಇದರಿಂದ ಈ ಭಾಗದ ರೈತರ ನೀರಾವರಿ ಕನಸು ಕನಸಾಗಿಯೇ ಉಳಿದಿದೆ. ಸಧ್ಯ ಈ ಯೋಜನೆಗಳು ಈ ಭಾಗದ ರಾಜಕಾರಣಿಗಳು, ಮತ್ತು ಎಂಜಿನಿಯರಗಳಿಗೆ, ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿವೆ. ಹೀಗಾಗಿ ಯಾವ ಯಾವ ಯೋಜನೆಗಳಿಂದ ಎಷ್ಟು ರೈತರ ಜಮೀನಿಗೆ ನೀರು ಹರಿಯುತ್ತಿದೆ. ಎಷ್ಟು ಪ್ರದೇಶ ನೀರಾವರಿಯಾಗುತ್ತಿದೆ.
ಯೋಜನೆಯ ಗುರಿಮತ್ತು ಸಾಧನೆಯ ವಿವರ ಹಾಗೂ ನಿರ್ವಹಣೆಗೆ ಪ್ರತಿವರ್ಷ ಸರ್ಕಾರ ನೀಡುವ ಅನುದಾನದ ವಿವರ ಒಳಗೊಂಡ ಶ್ವೇತಪತ್ರ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.