ನಿಜಾಮ ಆಡಳಿತದಲ್ಲಿ ಶಹಾಬಾದನಲ್ಲಿ ತ್ರೀವರ್ಣ ಧ್ವಜ ಹಾರಿಸಿದ ಸಾಹಸಿಗರು

0
62
  • ಕರುಣೇಶ.ಜಿ.ಪಾಟೀಲ

ಶಹಾಬಾದ : 1947 ಆಗಸ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ. ಅಂದು ರೇಡಿಯೋದಲ್ಲಿ ಬಿತ್ತರವಾದ ವಾರ್ತೆಯನ್ನು ಕೇಳಿ ಜನರು ಆನಂದಪಟ್ಟರು. ಆದರೆ ಕರ್ನಾಟಕದ ಬೀದರ, ಗುಲಬರ್ಗಾ, ರಾಯಚೂರ, ಬಳ್ಳಾರಿ ಹಾಗೂ ಕೊಪ್ಪಳ ಹೀಗೆ ಒಟ್ಟು 5 ಜಿಲ್ಲೆಗಳನ್ನು ಹೈದ್ರಬಾದ ಸಂಸ್ಥಾನದ ಕಪಿಮುಷ್ಠಿಯಲ್ಲಿದ್ದವು.

ಭಾರತದ ಎಲ್ಲ ಪ್ರದೇಶಗಳು ಸ್ವತಂತ್ರ ಹೊಂದಿದರೂ ಈ ಜಿಲ್ಲೆಗಳಿಗೆ ಮಾತ್ರ ಸ್ವಾತಂತ್ರ್ಯ ಸಿಗಲಿಲ್ಲ. ಇದಕ್ಕೆ ನಿಜಾಮನ ಅಸಮ್ಮತಿಯೇ ಕಾರಣವಾಗಿತ್ತು. ಆದರೆ ಹೈದ್ರಬಾದ ನಿಜಾಮ ಅವರ ಸಂತೋಷಕ್ಕೆ ತಣ್ಣೀರೆರೆಚಿಸಿದ. ಇಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಬಾದ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆಯಲಿಲ್ಲ. ನಿಜಾಮನ ಕಪಿಮುಷ್ಠಿಯಿಂದ ಈ ಪ್ರದೇಶ ಹೊರಬರದೇ ಅತಂತ್ರ ಸ್ಥಿತಿಯು ಮುಂದುವರೆಯಿತು.

Contact Your\'s Advertisement; 9902492681

ಈ ಬಂಧ ವಿಮೋಚನೆಯ ಬಿಡುಗಡೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಿ ತಮ್ಮ ತ್ಯಾಗ, ಬಲಿದಾನಗಳ ಮೂಲಕ ಈ ಹೈದ್ರಬಾದ ಕರ್ನಾಟಕಕ್ಕೆ ನಿಜವಾದ ಸ್ವತಂತ್ರ ದೊರಕಿಸಿ ಕೊಟ್ಟಿದ್ದು 1948 ಸೆಪ್ಟೆಂಬರ್ 17 ರಂದು. ಬ್ರಿಟೀಷರು ಭಾರತ ಬಿಟ್ಟು ಹೋಗುವಾಗ ಆಗಿನ ಸುಮಾರು 556 ಸಂಸ್ಥಾನಿಕ ಮಹಾರಾಜರು ತಮ್ಮ ಮನಸ್ಸಿನ ಇಚ್ಛೆಯಂತೆ ಸ್ವತಂತ್ರ ಭಾರತದ ಗಣರಾಜ್ಯದಲ್ಲಿ ಸೇರ್ಪಡೆಯಾಗುವಂತೆ ಹೇಳಿಹೋದ ಸಂದರ್ಭದಲ್ಲಿ ಅನೇಕ ಸಂಸ್ಥಾನಿಕರು ಮೀನ ಮೇಷ ಎಣಿಸದೇ ಸೇರಿಕೊಂಡರು. ಉಳಿದವುಗಳನ್ನು ಆಗಿನ ಗೃಹಮಂತ್ರಿ ಉಕ್ಕಿನ ಮನುಷ್ಯ ಎನ್ನುವ ಖ್ಯಾತಿಯ ಸರದಾರ ವಲ್ಲಬಾಯಿ ಪಟೇಲರು ಕೆಲವರನ್ನು ಮನವೊಲಿಸಿ ಗಣರಾಜ್ಯಕ್ಕೆ ಸೇರಿಸಿದರು.

ಆದರೆ ದೇಶದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥಾನವೆಂದು ಹೆಸರು ಪಡೆದಿದ್ದ ಹೈದ್ರಬಾದ ಸಂಸ್ಥಾನದ ದೊರೆ ನಿಜಾಮ ಸ್ವತಂತ್ರ ಭಾರತಕ್ಕೆ ಸೇರಬಾರದೆನ್ನುವ ಇರಾದೆಯಾಗಿತ್ತು. ಹಲವಾರು ಸಲ ತಿಳುವಳಿಕೆ ನೀಡಿದರೂ ಸರಕಾರದ ಮನವಿಯನ್ನು ತಿಸ್ಕರಿಸಿದನು. ಇದರಿಂದ ಈ ಪ್ರದೇಶದ ಹಿಂದು ಜನರು ಅಸಮಧಾನಗೊಂಡು, ನಿಜಾಮನ ವಿರುದ್ಧ ದಂಗೆ ಏಳತೊಡಗಿದರು.ಇದನ್ನು ಹತ್ತಿಕ್ಕಲು ನಿಜಾಮನು ರಜಾಕರ ಪಡೆಯನ್ನು ರಚಿಸಿದನು. ಆಗ ರಜಾಕರು ಹಿಂಸೆ, ಶೋಷಣೆ, ಅಪಮಾನ ಅತ್ಯಾಚಾರ, ದಬ್ಬಾಳಿಕೆ ಮಾಡುತ್ತ ಬಂದರು. ಇವನ ದಬ್ಬಾಳಿಕೆಯನ್ನು ಸಹಿಸದ ಜನರು ರೊಚ್ಚಿಗೆದ್ದರು. ಇಲ್ಲಿಂದಲ್ಲೇ ದೇಶಭಕ್ತರು ತಮ್ಮ ಬಂಧ ವಿಮೋಚನೆಯ ಬಿಡುಗಡೆಗಾಗಿ ಹೋರಾಟ ನಡೆಸಿದರು. ರಾಮನಂದ ತೀರ್ಥರು, ವಿದ್ಯಾಧರ ಗುರೂಜಿ, ಶರಣಗೌಡ ಇನಾಂದಾರ ಹೀಗೆ ಅನೇಕ ಹೋರಾಟಗಾರರ ಕೊಡುಗೆ ಇದೆ. ಅಂಥಹ ಮಹನೀಯರಲ್ಲಿ ಶಹಾಬಾದನ ಸಿದ್ದಣ್ಣ ಧನಶೆಟ್ಟಿ, ವಾಸುದೇವ ಸರ್ವೋದಯ ಹಾಗೂ ಚಂದ್ರಶೇಖರ ಭರಮಶೆಟ್ಟಿ ಅವರ ಕೊಡುಗೆ ಅಪಾರ.

ಸಿದ್ದಣ್ಣ ಧನಶೆಟ್ಟಿ : ಅಂದು ಶಹಾಬಾದನಲ್ಲಿ ಭಾರತದ ತ್ರೀವರ್ಣ ಧ್ವಜಹಾರಿಸಲು ನಿಜಾಮ ಸರ್ಕಾರ ನೀಷೇಧ ಹೇರಿತ್ತು. ನಗರದ ಬಾಲಾಜಿ ಮಂದಿರದ ಆವರಣದಲ್ಲಿ ಆಲದ ಮರವೇರಿದ ಸಿದ್ದಣ್ಣ ಧನಶೆಟ್ಟಿ ಯಾವುದನ್ನು ಲೆಕ್ಕಿಸದೇ ಪೋಲಿಸರಿಗೆ, ಪಹರೆಗಾರರಿಗೆ ಸಂಶಯ ಬಾರದಂತೆ, ನಿಜಾಮ ಧ್ವಜವನ್ನು ಕೆಳಗಿಳಿಸಿ, ಭಾರತ ಮಾತೆಯ ತ್ರೀವರ್ಣ ಧ್ವಜವನ್ನು ಮುಗಿಲನ್ನೇತ್ತರಕ್ಕೆ ಹಾರಿಸಿ ಹಳದಿ ಬಣ್ಣದ ನಿಜಾಮ ಸರ್ಕಾರದ ಅಸರಜಂಹಾ ಧ್ವಜವನ್ನು ಸುಟ್ಟು ಹಾಕಿದ ಸಾಹಸಿಗರು. ಇವರಿಗೆ ತಾಮ್ರ ಪತ್ರ ಹಾಗೂ ಹಲವು ಪ್ರಶಸ್ತಿಗಳು ಸಂದಿದ್ದವು. ಸಿದ್ಧಣ್ಣ ಧನಶೆಟ್ಟಿ ಅವರು ಸರದಾರ ಶರಣಗೌಡರ ಜತೆ ಅನೇಕ ಚಳುವಳಿಯಲ್ಲಿ ಭಾಗವಹಿಸಿದ್ದರು.ಅವರ ಬಲಗೈ ಬಂಟರಾಗಿದ್ದರು ಎಂದರೂ ತಪ್ಪಾಗಲಾರದು.

ವಾಸುದೇವ ಸರ್ವೋದಯ : ವಾಸುದೇವ ಸರ್ವೋದಯರವರು ವಂದೇ ಮಾತರಂ ಚಳುವಳಿಯಲ್ಲಿ ಭಾಗವಹಿಸಿ 40 ಸಲ ಬಂಧನಕ್ಕೊಳಗಾದವರು. ಸಿಂದಗಿ ಹಾಗೂ ದುಧನಿ ಕ್ಯಾಂಪಗಳಲ್ಲಿ ಭಾಗಹಿಸಿದ್ದಾರೆ. ನಿಜಾಮ ಸರ್ಕಾರ ನೀಷೇಧದ ಮಧ್ಯೆ ಸ್ವತಂತ್ರ ಪಡೆದ ದಿವಸ, ನಿಜಾಮನ ಬಿಗಿ ಕಾವಲಿನಲ್ಲಿ ಕನ್ನಡ ಸಾಹಿತ್ಯ ಸಂಘದಲ್ಲಿ ಹಾರಾಡುತ್ತಿದ್ದ ನಿಜಾಮ ಸರ್ಕಾರದ ಧ್ವಜವನ್ನು ವಾಸುದೇವ ಅವರು ಕಿತ್ತೆಸೆದು ತ್ರೀವರ್ಣ ಧ್ವಜವನ್ನು ಹಾರಿ ಭಾರತ ಮಾತಾಕಿ ಜೈ ಎಂಬ ಜಯಘೋಷವನ್ನು ಕೂಗಿದರು. ನಿದ್ದೆಯಿಂದ ಎಚ್ಚೆತ್ತ ಪೋಲಿಸರು ಅವರನ್ನು ಬಂಧಿಸಿದರು. ಅಲ್ಲಿ ನಿಜಾಮ ಸರ್ಕಾರದ ಬಾವುಟವನ್ನು ಸುಟ್ಟ ಸುದ್ದಿ ತಿಳಿಯುತ್ತಲೇ ಸಿದ್ದಣ್ಣ ಧನಶೆಟ್ಟಿ ಅವರನ್ನು ಬಂಧಿಸಲಾಯಿತು.

ನಿಜಾಮ ಸರ್ಕಾರದ ಬಿಗಿ ಭದ್ರತೆಯಲ್ಲಿ ನಡೆದ ಈ ಸಾಹಸ ಕಾರ್ಯದಲ್ಲಿ ಪಾಲ್ಗೊಂಡ ಸಿದ್ದಣ್ಣ ಧನಶೆಟ್ಟಿ, ವಾಸುದೇವ ಸರ್ವೋದಯ ಅವರಿಗೆ ಸಿಕ್ಕ ಪ್ರತಿಫಲವೆಂದರೆ 50 ಛಡಿ ಏಟು,6 ತಿಂಗಳ ಜೈಲು ಶಿಕ್ಷೆ ಅನುಭವಿಸಿದರು.

ನಂತರ ಜೈಲಿನಿಂದ ಓಡಿ ಹೋಗಿ ಸಿಂದಗಿಯ ಗಡಿಯಲ್ಲಿ ನಡೆದ ಕ್ಯಾಂಪ್‍ನಲ್ಲಿ ಭಾಗವಹಿಸಿದರು. ನಿಜಾಮ ಸೈನ್ಯ ಅವರನ್ನು ಹುಡುಕಾಡಲು ಪ್ರಾರಂಭಿಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಹೋದಾಗ ಸಿದ್ದಣ್ಣ ಧನಶೆಟ್ಟಿ ಅವರ ಕಾಲುಗಳಿಗೆ ಎರಡು ಗುಂಡುಗಳು ತಾಗಿದವು.ಆದರೂ ಸ್ವಾತಂತ್ರ್ಯದ ಕಿಚ್ಚು ಅವರಲ್ಲಿ ಗಟ್ಟಿಯಾಗಿ ಮನಸಲ್ಲಿ ಬೇರೂರಿತ್ತು. ಸಿದ್ದಣ್ಣ ಧನಶೆಟ್ಟಿ ಹಾಗೂ ವಾಸುದೇವ ಸರ್ವೋದಯ ಅವರು ಎಷ್ಟು ಪ್ರಸಿದ್ಧಿಯಾಗಿದ್ದರು ಎಂದರೆ ನಿಜಾಮ ಸರ್ಕಾರದ ವಿರುದ್ಧ ದನಿ ಎತ್ತಿ ರಜಾಕÀರ ಯೋಜನೆಗಳನ್ನು ಬುಡಮೇಲು ಮಾಡುತ್ತಿದ್ದರು.ಇವರು ನಮ್ಮ ಶಹಾಬಾದನ ಯುವಕರಿಗೆ, ಹೋರಾಟದ ಮನೋಬಲದ ವ್ಯಕ್ತಿಗಳಿಗೆ ಇಂದಿಗೂ ಅಚ್ಚುಮೆಚ್ಚು ಹಾಗೂ ಸ್ಪೂರ್ತಿಯಾಗಿದ್ದಾರೆ.

ಅಬ್ದುಲ್ ರಶೀದ್ ಚಿಟ್, ಚಂದ್ರಶೇಖರ ಭರಮಶೆಟ್ಟಿ, ತೋಟಪ್ಪ ಭರಮಶೆಟ್ಟಿ, ಶಾಮಸುಂದರ ಠಾಕೂರ, ಲಾಲಸಿಂಗ ಠಾಕೂರ ಹೀಗೆ ಒಬ್ಬರಲ್ಲ, ಇಬ್ಬರಲ್ಲ ಅನೇಕ ಜನರು ತಮ್ಮ ವ್ಯಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು, ಹೈದ್ರಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಜೈಲು ಅನುಭವಿಸಿದ್ದಾರೆ, ಛಡಿ ಏಟು ತಿಂದಿದ್ದಾರೆ, ಪೋಲಿಸರಿಂದ ಒದೆಸಿಕೊಂಡಿದ್ದಾರೆ, ಬೂಟುಕಾಲಿನಿಂದ ತುಳಿಸಿಕೊಂಡಿದ್ದಾರೆ. ಇಂದು ಇವರು ನಮ್ಮೊಂದಿಗಿಲ್ಲ. ಆದರೆ ತಮ್ಮ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ತಂದು ಕೊಟ್ಟು, ಜನರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಿರುವುದು ಮಾತ್ರ ಚಾರಿತ್ರಿಕ ಸಂಗತಿ. ಇದನ್ನು ಇಂದಿನ ಮಕ್ಕಳಿಗೆ ಹಾಗೂ ಯುವಕರಿಗೆ ತಿಳಿಸಿ ಕೊಡುವ ಅಗತ್ಯ ಎಂದೆಂದಿಗಿಂತಲೂ ಇಂದು ಪ್ರಸ್ತುತವಾಗಿದೆ.

ನಿಜಾಮನ ಜೈಲು :ನಗರದ ಲಕ್ಷ್ಮಿ ಗಂಜ್‍ನಲ್ಲಿರುವ ಈಗಿನ ಪತ್ರಾಂಕಿತ ಉಪಖಜಾನೆ ಕಚೇರಿ ಈ ಹಿಂದೆ ನಿಜಾಮ ಕಟ್ಟಿಸಿದ ಜೈಲಾಗಿತ್ತು. ಹೈದ್ರಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದವರನ್ನು ಹಿಡಿದು ನಿಜಾಮ ಸೈನ್ಯ ಇದೇ ಜೈಲಿನಲ್ಲಿ ಹಾಕುತ್ತಿದ್ದರು.ಈಗ ನಿಜಾಮನಿಂದ ವಿಮೋಚನೆಯಾದ ಬಳಿಕ ಈ ಕಟ್ಟಡವನ್ನು ನವೀಕರಿಸಿ ಪತ್ರಾಂಕಿತ ಉಪಖಜಾನೆ ಕಚೇರಿ ಮಾಡಲಾಗಿದೆ.ಆದರೆ ನಿಜಾಮ ಕಾಲದ ಕೈಲಿನ ಕಂಬಿಗಳು ಮಾತ್ರ ಹಾಗೇ ಇವೆ. ಇದನ್ನು ಈಗಲೂ ಕಚೇರಿಗೆ ಬೇಟಿ ನೀಡಿದವರು ನೋಡಬಹುದು.

ಕನ್ನಡ ಸಾಹಿತ್ಯ ಸಂಘ : ಅಂದು ನಿಜಾಮ ಸರ್ಕಾರ ನೀಷೇಧದ ಮಧ್ಯೆ ಸ್ವತಂತ್ರ ಪಡೆದ ದಿವಸ, ನಿಜಾಮನ ಬಿಗಿ ಕಾವಲಿನಲ್ಲಿ ಕನ್ನಡ ಸಾಹಿತ್ಯ ಸಂಘದಲ್ಲಿ ಹಾರಾಡುತ್ತಿದ್ದ ನಿಜಾಮ ಸರ್ಕಾರದ ಧ್ವಜವನ್ನು ಕಿತ್ತೆಸೆದು ತ್ರೀವರ್ಣ ಧ್ವಜವನ್ನು ಹಾರಿ ಭಾರತ ಮಾತಾಕಿ ಜೈ ಎಂಬ ಜಯಘೋಷವನ್ನು ಕೂಗಿದರು.ಈಗ ಕನ್ನಡ ಸಾಹಿತ್ಯ ಸಂಘ ಕನ್ನಡ ಭವನವಾಗಿ ಬದಲಾಗಿದೆ.ಈಗಲೂ ಈ ಕಟ್ಟಡ ಅದೇ ರೀತಿ ಇದೆ.ಈಗ ಈ ಕಟ್ಟಡದಲ್ಲಿ ಗ್ರಂಥಾಲಯ ಕಚೇರಿ ತೆರೆಯಲಾಗಿದೆ.

ರಜಾಕರು ವಂದೇ ಮಾತರಂ ಗೀತೆ ಹಾಡಿದರೆ ಬಾಯಲ್ಲಿ ಮೂತ್ರ ಮಾಡಿಸುತ್ತಿದ್ದರಂತೆ, ಎರಡು ಕೈಗಳನ್ನು ಕಟ್ಟಿ, ಬೂಟುಗಾಲಿನಿಂದ ಒದೆಯುತ್ತಿದ್ದರಂತೆ, ನಿಜಾಮನ ವಿರುದ್ಧ ಜೈಕಾರ ಹಾಕಿದವರನ್ನು ಮೆಣಸಿನ ಕಾಯಿ ಪುಡಿಯನ್ನು ಮೂಗು,ಬಾಯಿ ಹಾಗೂ ಕಣ್ಣಿನಲ್ಲಿ ತುಂಬುತ್ತಿದ್ದರಂತೆ. ಇದಲ್ಲದೇ ರಜಾಕರು ಹೊಕ್ಕಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಸಾಕು ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದರಂತೆ. ಹೀಗೆ ತಾವು ಕಂಡ ಅನುಭವವನ್ನು ನಮ್ಮ ತಂದೆ ಸಿದ್ದಣ್ಣ ಧನಶೆಟ್ಟಿ ಅವರು ನಿಜಾಮನ ದೌರ್ಜನ್ಯದ ಕಹಿ ಅನುಭವಗಳನ್ನು ನಮಗೆ ಹೇಳುತ್ತಿದ್ದರು ಎಂದು ಅವರ ಮಗ ಸೋಮಶೇಖರ ಧನಶೆಟ್ಟಿ ಹೇಳುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here