“ಕಲಬುರಗಿಯಲ್ಲಿ ಮತ್ತೆ ಕಲ್ಯಾಣ” 29ಕ್ಕೆ: ಶರಣು ಪಪ್ಪಾ

0
390

ಲಿಂಗವ ಪೂಜಿಸಿ ಫಲವೇನಯ್ಯ

ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ

ಲಿಂಗವ ಪೂಜಿಸಿ ಫಲವೇನಯ್ಯ

ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿಬೆರೆಸಿದಂತಾಗದನ್ನಕ್ಕ

ಬಸವಣ್ಣನವರು

ಕಲಬುರಗಿ: ೧೨ನೇ ಶತಮಾನದ ಶರಣರು ನಡೆದು ನುಡಿದ ಮಾತುಗಳು ಹೊಸ ಮಾತುಗಳಾಗಿದ್ದವು. ಏಕೆಂದರೆ ಆ ಮಾತುಗಳು ಕೇವಲ ಮಾತುಗಳಾಗಿರಲಿಲ್ಲ. ಪ್ರಮಾಣ ಮಾಡಿದಂತಹ ನುಡಿಮುತ್ತುಗಳು ಅವು. ಅವರ ಮಾತುಗಳಲ್ಲಿ ಜಾತಿ-ಧರ್ಮ, ಬಡವ-ಶ್ರೀಮಂತ, ಬ್ರಾಹ್ಮಣ-ದಲಿತ, ಪುರುಷ-ಮಹಿಳೆ ಎಂಬ ಬೇಧ ಭಾವ ಇರಲಿಲ್ಲ. ಇವುಗಳ ನಡುವೆ ಸಮಭಾವ ಮೂಡದೆ ಯಾವ ಪೂಜೆಯೂ ಫಲ ಕೊಡುವುದಿಲ್ಲ. ಮನಸ್ಸಿನೊಳಗೆ ಅರಿವಿನ ಜ್ಯೋತಿ ಬೆಳಗಿ ಅದು ಸಮಾಜವೆಂಬ ವಿಶಾಲ ಬೆಳಕಿನೊಳಗೆ ಲೀನವಾಗದಿದ್ದರೆ ಪೂಜೆ ಅರ್ಥಹೀನ. ಇಂತಹ ಜ್ಞಾನದ ಮಾರ್ಗ ತೋರಿದವರು ಬಸವಾದಿ ಶರಣರು ಎಂದು ಮತ್ತೆ ಕಲ್ಯಾಣ ಕಲಬುರಗಿ ಸಮಿತಿ ಅಧ್ಯಕ್ಷ ಶರಣು ಪಪ್ಪಾ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸದ ಅವರು ಕಾಯಕ-ದಾಸೋಹ ಎಂಬ ಹೊಸ ಪ್ರಜ್ಞೆ ಹುಟ್ಟು ಹಾಕಿದ ಅವರು ಮಾನವ ಕಲ್ಯಾಣದ ಮೂಲಕ ಇಡೀ ಮೇದಿನಿಗೆ ಹೊಸ ಬೆಳಕು ನೀಡಿದವರು. ಹಲವು ಜಾತಿ, ಸಮುದಾಯ, ಅನೇಕ ಪ್ರದೇಶ, ವಿವಿಧ ಕಾಯಕ ವೃತ್ತಿಗೆ ಸೇರಿದ್ದ ಶರಣರು ಅನುಭವ ಮಂಟಪದಲ್ಲಿ ಕೂಡಿ ಇಡೀ ಜಗತ್ತಿಗೆ ಹೊಸದನ್ನು ಕಲಿಸಿಕೊಟ್ಟರು.

Contact Your\'s Advertisement; 9902492681

ಬಸವಣ್ಣನವರ ನೇತೃತ್ವದಲ್ಲಿ ನಡೆದ ಆ ಸಾಮೂಹಿಕ ಶರಣ ಚಳವಳಿ ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೂಢನಂಬಿಕೆ, ಕಂದಾಚಾರಗಳನ್ನು ನಿವಾರಿಸುವ ಮೂಲಕ ಬದುಕಿನ ಸಾರ್ಥಕತೆಯ ಮಾರ್ಗ ತೋರಿದೆ. ಲಿಂಗ ಸಮಾನತೆಯ ಜೊತೆಗೆ ಜಾತ್ಯಾತೀತ ಸಮಾಜ ಕಟ್ಟಿದ, ವಿನೂತನ ವಿಶಿಷ್ಟ ಚಳವಳಿ ಅದು. ಹೊಸ ಚಿಂತನೆ, ತಂತ್ರಜ್ಞಾನ ಅಥವಾ ಪ್ರಯೋಗಗಳಿಗಾಗಿ ಭಾರತೀಯರು ಇಂದಿಗೂ ಪರ ರಾಷ್ಟ್ರಗಳತ್ತ ನೋಡಬೇಕಾದ ಪರಿಸ್ಥಿತಿಯಿದೆ. ನಮ್ಮೊಳಗಿನ ಸತ್ವ, ಶಕ್ತಿ, ಮಹತ್ವವನ್ನು ಅರಿಯದೆ ಪರಾವಲಂಬಿಗಳಾಗಿದ್ದೇವೆ. ಹಾಗೆ ನೋಡಿದರೆ ಭಾರತ ಅನೇಕ ವೈಜ್ಞಾನಿಕ ಅನ್ವೇಷಣೆಗಳ ಜೊತೆಗೆ ವಾಸ್ತವವಾದಿ ವೈಚಾರಿಕತೆಗೆ ಬುನಾದಿ ಹಾಕಿದ ಪ್ರಪಂಚದ ಮೊದಲ ರಾಷ್ಟ್ರ. ವಿಚಾರವಾದಿ ಚಾರ್ವಾಕ ಪಂಥ, ಶಾಂತಿ,ಕರುಣೆ, ಪ್ರೀತಿ-ಸಮತೆ ಸಾರುವ ಬುದ್ಧನನ್ನು, ಕಾಯಕವೇ ಕೈಲಾಸವೆಂದು ಹೇಳಿ ಕಾಯಕದ ಘನತೆಯನ್ನು ಎತ್ತಿ ಹಿಡಿದು ಸರ್ವ ಸಮಾನತೆ ಸಾರಿದ ವಚನ ಚಳವಳಿಯನ್ನು ಜಗತ್ತಿಗೆ ಕರುಣಿಸಿದ ದೇಶ ನಮ್ಮದು. ಹಾಗೆಂದ ಮಾತ್ರಕ್ಕೆ ನಾವು ಪರಂಪರೆಗೆ ಮರಳಿ ಅದರಲ್ಲೇ ಮುಳುಬೇಕೆಂಬುದೇನಿಲ್ಲ. ೧೨ನೇ ಶತಮಾನದ ಆಂದೋಲನದ ತಿರುಳು ಮತ್ತು ೨೧ನೇ ಶತಮಾನದ ಅಗತ್ಯಗಳನ್ನು ಬೆಸೆಯುವ ಹೊಸ ಆಂದೋಲನವನ್ನು ನಾವೆಲ್ಲರೂ ಸೇರಿ ಕಟ್ಟಬೇಕು ಎಂದು ಕರೆ ನೀಡಿದರು.

ಪರಿಸರಕ್ಕೆ ಬಂದೊದಗಿರುವ ಗಂಡಾಂತರ, ಕಾಯಕ ಜೀವಿಗಳಾದ ರೈತರು ಮತ್ತು ಕಾರ್ಮಿಕರಿಗಿರುವ ಅಭದ್ರತೆ, ಶೋಷಿತ ಜಾತಿ ಜನಾಂಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಮಹಿಳಾ ಶೋಷಣೆ, ಯುವ ಜನರನ್ನು ಕಾಡುತ್ತಿರುವ ನಿರುದ್ಯೋಗ, ಅಸಮಾನತೆ ಮತ್ತು ಎಲ್ಲರನ್ನು ಕಾಡುತ್ತಿರುವ ಬದುಕಿನ ಸಾರ್ಥಕತೆಯ ಚಿಂತೆ ಇವೆಲ್ಲಕ್ಕೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಕಲ್ಯಾಣವೆಂಬುದು ವಿಶಿಷ್ಟ ಅರಿವಿನ ನಡಿಗೆಯಾಗಿತ್ತು. ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಶರಣರ ಅರಿವು, ಅನ್ನದಾಸೋಹ ಮತ್ತು ಕಾಯಕ ಇವು ಪರಿಹಾರವಾಗಬಲ್ಲವು. ಇವುಗಳನ್ನು ಬಸವಾದಿ ಶರಣರು ನಡೆ-ನುಡಿಯಲ್ಲಿ ತಂದರು. ಹಾಗಿದ್ದ ಮೇಲೆ ನಾವೇಕೆ ಇಂತಹ ಅರಿವಿನ ಪರಂಪರೆಯಡೆಗೆ ಹೊರಳಿ ನೋಡಬಾರದು ಎಂಬ ಚಿಂತನೆಯಿಂದ ಹುಟ್ಟಿದ್ದೆ ಸಹಮತ ವೇದಿಕೆ. ಎಲ್ಲರೊಡಗೂಡಿದ ನಡಿಗೆಯೇ “ಮತ್ತೆ ಕಲ್ಯಾಣ.” ಇದೊಂದು ಸಾಮೂಹಿಕ ಪ್ರಯತ್ನ ಎಂದರು.

ಮತ್ತೆ ಕಲ್ಯಾಣ ಹಾಗೆಂದರೇನು?

ಕಲ್ಯಾಣ ಎಂದರೆ ಮಂಗಳ, ಒಳಿತು, ಲೇಸು, ಶುಭಕರ ಇತ್ಯಾದಿ ಅರ್ಥಗಳಿವೆ. ನಮ್ಮೆದುರು ಇಂದು ಮಂಗಳಕರ ವಾತಾವರಣ ಇಲ್ಲ. ಸಾಮಾಜಿಕ ಅನಿಷ್ಟಗಳಿಂದಾಗಿ ಬದುಕು ನರಕವಾಗುತ್ತಿದೆ. ಈ ನರಕದಿಂದ ಹೊರ ಬರುವ ಪ್ರಯತ್ನವೇ ಮತ್ತೆ ಕಲ್ಯಾಣ ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂದಿನ ನಮ್ಮ ಸಮಾಜದಲ್ಲಿ ಅಂದಿನ ಶರಣರ ವಿಚಾರಕ್ರಾಂತಿಯ ಬೀಜಗಳನ್ನು ಬಿತ್ತುವುದು ಇದರ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

ಇದು ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ. ಇಂದಿನ ತಲ್ಲಣದ ಬದುಕಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗೆ ಪರಿಹಾರ ಹುಡುಕುವ ಅನ್ವೇಷಣೆ. ಜಾತಿ, ಧರ್ಮ, ಕುಲ, ಭಾಷೆ ಹೆಸರಿನಲ್ಲಿ ಮನುಷ್ಯ ಕುಲ ತನ್ನದೆ ಸಹಜೀವಿಗಳಿಂದ ದೂರ ಸರಿದು ಪರಸ್ಪರ ಹರಿದು ಹಂಚಿ ಹೋಗುತ್ತಿರುವ ಎಲ್ಲ ಮನಸ್ಸುಗಳು ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ. ಇದು ವೀರಶೈವ ಸಮಾವೇಶ ಇಲ್ಲವೇ ಲಿಂಗಾಯತ ರ‍್ಯಾಲಿ ಅಲ್ಲ. ಶುದ್ಧ ಬಸವತತ್ವ, ಶರಣತತ್ವ ಹೇಳುವ ಸಾಮಾವೇಶ ಇದಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕರ್ಣಧಾರತ್ವದಲ್ಲಿ ಆ.೧ರಿಂದ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿಯಿಂದ ಆರಂಭವಾದ ಈ ನಡಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸಿ ಆ. ೩೦ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಮಾರೋಪಗೊಳ್ಳಲಿದೆ. ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊರಟಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಈ ಅಭಿಯಾನ ತುಂಬಾ ಯಶಸ್ವಿ ಕಂಡಿದೆ.

ಕಲಬುರಗಿಯಲ್ಲಿ ೨೯ರಂದು ಮತ್ತೆ ಕಲ್ಯಾಣ

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ ೧೧ ಗಂಟೆಯಿಂದ ೨ ಗಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಜೇವರ್ಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮನೋವಿಜ್ಞಾನ ಪ್ರಾಧ್ಯಾಪಕ ಡಾ. ಆರ್. ವೆಂಕಟರೆಡ್ಡಿ, ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ, ಬಸವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

 ಸಂಜೆ ೪ ಗಂಟೆಗೆ ಸಾಮರಸ್ಯ ನಡಿಗೆ

ಸಂಜೆ ೪ ಗಂಟೆಗೆ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಸಕಲ ಸಹಧರ್ಮಿಯರೊಂದಿಗೆ ಸಾಮರಸ್ಯದ ನಡಿಗೆ ನಡೆಯಲಿದ್ದು, ನಗರ ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಚಾಲನೆ ನೀಡಲಿದ್ದಾರೆ. ಅಣದೂರಿನ ಪೂಜ್ಯ ಭಂತೇಜಿ ವರಜ್ಯೋತಿ, ಐವಾನ್-ಇ ಶಾಹಿ ಮೌಲಾನಾ ಇಮಾಮ್, ದಲಿತ ಸಂಘರ್ಷ ಸಮಿತಿಯ ಅರ್ಜುನ ಭದ್ರೆ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಆರ್ಯವೈಶ್ಯ ಸಮಾಜದ ರವೀಂದ್ರ ಮುಕ್ಕಾ, ಜೈನ್ ಸಮುದಾಯದ ನಾಗನಾಥ ಚಿಂದೆ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಭುಲಿಂಗ ಮಹಾಗಾಂವಕರ್, ಭಾಮ್‌ಸೆಫ್‌ನ ಸುಭಾಷ ಶೀಲವಂತ, ಶಿಖ್ ಸಮುದಾಯದ ಗುರುಮಿತ್ ಸಿಂಗ್, ಕ್ರೈಸ್ತ ಸಮುದಾಯದ ಡಾ. ರಾಬರ್ಟ್ ಮೈಖೆಲ್ ಮಿರಾಂಡಾ, ಇಸ್ಲಾಂ ಸಮುದಾಯದ ಮಹ್ಮದ್ ಯುಸೂಫ್ ಪಟೇಲ್, ಮಡಿವಾಳ ಸಮುದಾಯದ ರುಕ್ಮಣ್ಣ ಮಡಿವಾಳ, ಮಾದಾರ ಚನ್ನಯ್ಯ ಸಮುದಾಯದ ಸಂಬಣ್ಣ ಹೊಳಕುಂದಿ, ವಡ್ಡರ ಸಮುದಾಯದ ಅನಿಲ್ ಜಾಧವ್ ಹಾಗೂ ವಿವಿಧ ಕಾಯಕ ಸಮುದಾಯದ ಗಣ್ಯರು ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 ಸಂಜೆ ೬ ಗಂಟೆಗೆ ಸಾರ್ವಜನಿಕ ಸಮಾವೇಶ

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಂಜೆ ೬ ಗಂಟೆಗೆ ನಡೆಯಲಿರುವ ಸಾರ್ವಜನಿಕ ಸಮಾವೇಶದ ಸಾನ್ನಿಧ್ಯವನ್ನು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಸುಲಫಲ ಹಾಗೂ ಶ್ರೀಶೈಲಂ ಸಾರಂಗಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣರ ಪ್ರತಿಭಟನೆಯ ಮಾರ್ಗ ವಿಷಯ ಕುರಿತು ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ, ಶರಣ ಚಿಂತಕ ಡಾ. ಬಸವರಾಜ ಸಾದರ ಅವರು ಶರಣರ ಪ್ರಶ್ನೆ-ಪ್ರತಿಭಟನೆಯ ದಾರಿ ಪರ್ಯಾಯದ ಗುರಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸೊನ್ನದ ಡಾ. ಶಿವಾನಂದ ಮಹಾಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಹಾಗರಗುಂಡಗಿಯ ಶಿವಾನಂದ ಸ್ವಾಮೀಜಿ, ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಧುತ್ತರಗಾಂವನ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಸೊನ್ನಲಗಿಯ ಪರ್ವತಲಿಂಗ ಮಹಾಸ್ವಾಮೀಜಿ, ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಕವಲಗಾ(ಕೆ) ಅಬಿನವ ಷಣ್ಮುಖ ಶಿವಯೋಗಿ ಸ್ವಾಮೀಜಿ, ಮುಗಳನಾಗಾಂವ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಭರತನೂರಿನ ಗುರುನಂಜೇಶ್ವರ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಮಹಾಸ್ವಾಮೀಜಿ, ಭೂಸನೂರಿನ ನಿಜಗುಣ ದೇವರು, ರೋಜಾದ ಕೆಂಚ ಬಸವ ಮಹಾಸ್ವಾಮೀಜಿ, ಪ್ರಭುಶ್ರೀತಾಯಿ, ಸುಲೇಪೇಟ ಗುರುಲಿಂಗ ಸ್ವಾಮೀಜಿ, ರಟಕಲ್‌ನ ಮುರುಘೇಶ್ವರ ಮಹಾಸ್ವಾಮಿಗಳು, ರೇವಣಸಿದ್ಧ ಸ್ವಾಮೀಜಿ, ನರೋಣಾದ ಮಹಾಂತ ಸ್ವಾಮೀಜಿ, ಮುಗಳಿಯ ಮಹಾನಂದ ತಾಯಿ ಇತರ ಪೂಜ್ಯರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ರಾತ್ರಿ ೮.೩೦ಕ್ಕೆ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ

ಸಾಣೆಹಳ್ಳಿಯ ಶಿವಸಂಚಾರ ರಂಗ ತಂಡದವರು ಅಭಿನಯಿಸುವ ಮೋಳಿಗೆ ಮಾರಯ್ಯ ಎಂಬ ನಾಟಕ ಪ್ರದರ್ಶನವಿದ್ದು, ಅಧಿಕಾರ, ಸ್ವಾರ್ಥ, ಸಂಪತ್ತು, ಭೋಗವಿಲಾಸದ ಬೆನ್ನು ಹತ್ತಿದವರಿಗೆ ವಾಸ್ತವ ಸತ್ಯದ ಮನವರಿಕೆ ಮಾಡಿಕೊಡುವ ಸದಾಶಯ ಹೊಂದಿದಿರುವ ಈ ನಾಟಕವು ಮತ್ತೆ ಕಲ್ಯಾಣಕ್ಕೆ ಪೂರಕವಾದ ಕಾಯಕ, ದಾಸೋಹ, ಸರಳತೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ.

ಈ ಸಂದರ್ಭದಲ್ಲಿ ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ರವೀಂದ್ರ ಶಾಬಾದಿ, ಆರ್.ಜಿ. ಶೆಟಗಾರ, ಸುನಿಲ್ ಹುಡಗಿ, ಮಾರುತಿ ಗೋಖಲೆ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಹಾಂತೇಶ ಕಲ್ಬುರ್ಗಿ, ಅಯ್ಯನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here