ಕಲಬುರಗಿ: ಕರ್ನಾಟಕದಲ್ಲಿ ಸಮಗ್ರ ಶಿಕ್ಷಣದ ಅಭಿವೃದ್ಧಿಗಾಗಿ ಮತ್ತು ವೈಜ್ಞಾನಿಕ ಶಿಕ್ಷಣಕ್ಕಾಗಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಬೇಕೆನ್ನುವುದು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಬಹುದಿನದ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಪ್ರೊ. ಸುಖದೇವ ಥೋರಟ್ ಅಧ್ಯಕ್ಷತೆಯ ಎಸ್‍ಇಪಿ ಆಯೋಗ ರಚಿಸಿರುವುದಕ್ಕೆ ಎಐಎಸ್‍ಎಫ್ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿರಾಜ್ ದೇವಾಂಗ ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಯಿಂದಾಗಿ ಬಡವರಿಗೆ ಶಿಕ್ಷಣದ ಹಕ್ಕಿನಿಂದ ವಂಚಿತರನ್ನಾಗಿ ಮಾಡಿದಂತಾಗುತ್ತಿದ್ದು, ಜಾಗತಿಕ ಮಟ್ಟದ ಈ ಹುನ್ನಾರಕ್ಕೆ ರಾಜ್ಯ ಸರ್ಕಾರ ಒಪ್ಪದಿರುವುದು ಸಂತೋಷದ ಸಂಗತಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ರಾಜ್ಯದಲ್ಲಿನ 190ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರ ಕೂಡ ರೈತರಿಗೆ ಪರಿಹಾರ ನೀಡಬೇಕು. ಮೇಲಾಗಿ ಬರಪೀಡಿತ ತಾಲ್ಲೂಕುಗಳಲ್ಲಿನ ವಿದ್ಯಾರ್ಥಿಗಳ ಕಲಿಕೆಗಾಗಿ ವಿಶೇಷ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯಗಳು ಕೋಮವಾದ ಉತ್ಪಾದಿಸುವ ಶಿಕ್ಷಣ ಸಂಸ್ಥೆಗಳಾಗುತ್ತಿವೆ. ಮಹಾರಾಷ್ಟ್ರದ ಮಹಾತ್ಮಗಾಂಧಿ ಕೇಂದ್ರೀಯ ವಿವಿ ಕುಲಪತಿ ಇದೇ ಕಾರಣಕ್ಕೆ ತಮ್ಮ ಸ್ಥಾನ ತೆರವು ಮಾಡಿದ್ದಾರೆ. ಅದೇರೀತಿಯಾಗಿ ಕಲಬುರಗಿಯ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಕೂಡ ಇದೇ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಬುಧವಾರ ನಡೆಸಿರುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಅವರು ತಿಳಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ಬಹುತೇಕ ಅಧ್ಯಾಪಕರ ಹುದ್ದೆಗಳು ಸೇರಿದಂತೆ ಶೇ. 80ಕ್ಕಿಂತ ಹೆಚ್ಚು ಹುದ್ದೆಗಳ ಖಾಲಿ ಇವೆ. ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಅರ್ಹತೆ ಆಧರದ ಮೇಲೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಭೀಮಾಶಂಕರ ಮಾಡ್ಯಾಳ, ಮಲಕಪ್ಪ ಯಾಳವಾ, ಗುಂಡಪ್ಪ ಹೊಸಮನಿ, ಅನಿಲಕುಮಾರ ಕಾಂಬಳೆ, ಮಲ್ಲಪ್ಪ ದೊಡ್ಡಮನಿ ಇದ್ದರು.
ದೇಶದ ನಿಜವಾದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಆರೋಗ್ಯ ಅತಿ ಅಗತ್ಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಎನ್‍ಡಿಆರ್‍ಎಫ್‍ನಲ್ಲಿ ಸೇರಿಸುವ ಮೂಲಕ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ. -ವಿರಾಜ್ ದೇವಾಂಗ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ, ಎಐಎಸ್‍ಎಫ್.