ಕಲಬುರಗಿ: ಮನುಷ್ಯನಿಗೆ ಅಸಾಧ್ಯವಾದ್ದದು ಯಾವುದೂ ಇಲ್ಲ, ನಿರ್ದಿಷ್ಟ ಗುರಿ ಇಟ್ಟುಕೊಂಡು ಸತತ ಪರಿಶ್ರಮ ಪಟ್ಟಾಗ ಮಾತ್ರ ಗುರಿ ತಲುಪಲು ಸಾಧ್ಯವಿದೆ ಎಂದು ವಿಜಯನಗರದ ಶ್ರೀ ಕೃಷ್ಣದೇವರಾಯ ವಿವಿ ಪ್ರಭಾರಿ ಕುಲಪತಿ ಡಾ. ಸಾಹೇಬ್ ಅಲಿ ನಿರಗುಡಿ ಹೇಳಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಅನನ್ಯ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಅನನ್ಯ ಎಂಎಸ್‍ಡಬ್ಲ್ಯೂ ಕಾಲೇಜಿನ ಆವರಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಮುಖ್ಯ, ಆದರೆ ಜೀವನಪೂರ್ತಿ ಮನೋರಂಜನೆ, ಆಟೋಟಕ್ಕೆ ಕಾಲಹರಣ ಮಾಡದೆ, ಓದು, ಅಧ್ಯಯನದತ್ತ ಹೆಚ್ಚು ಗಮನ ಹರಿಸಬೇಕು. ನಿತ್ಯ ಪತ್ರಿಕೆಗಳು, ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಶಾಲಾ ಕಾಲೇಜುಗಳಿಗೆ ಕೊರತೆ ಇಲ್ಲ, ಆದರೆ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಜ್ಞಾನಾರ್ಜನೆ ಪಡೆದುಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದಿಲೀಪ್ ಆರ್.ಪಾಟೀಲ್, ರಾಜ್ಯ ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕ ಡಾ. ಸಂಗಮೇಶ ಹಿರೇಮಠ, ಪಿ.ಎಸ್. ಕೋಕಟನೂರ ವೇದಿಕೆ ಮೇಲಿದ್ದರು. ಟ್ರಸ್ಟ್ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜಿ ಅಧ್ಯಕ್ಷತೆವಹಿಸಿದ್ದರು.
ಹಾಸ್ಯ ಕಲಾವಿದರಾದ ಮುಕಳೇಪ್ಪಾ ಧಾರವಾಡ, ಕಿರುತೆರೆ ನಟ ಸಿದ್ದು ಎನ್.ಆರ್, ಮಂಗಳೂರಿನ ಸಾಯಿಶೃತಿ ಪಿಲಿಕಜೆ, ಪ್ರಶಾಂತ ಗಜ ಅವರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಭೀಮಾಶಂಕರ ಫಿರೋಜಾಬಾದ್, ಮಲ್ಲಿಕಾರ್ಜುನ ಪಗಡೆ, ರಾಜೇಂದ್ರ ರಾಜವಾಳ, ಮಂಜುನಾಥ ಜಮಾದಾರ್ ಮತ್ತು ದೇವಿಂದ್ರ ಚಿಗರಳ್ಳಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಶರಣು ಬಿ. ಹೊನಗೆಜ್ಜಿ , ಆಶಾರಾಣಿ ವಿ. ಕಲಕೋರೆ ಕಾರ್ಯಕ್ರಮ ನಿರ್ವಹಿಸಿದರು.