ಕಲಬುರಗಿ; ಕಲಬುರಗಿ ಮಹಾನಗರಕ್ಕೆ 24×7 ಕುಡಿಯುವ ನೀರು ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಗುರುವಾರ ನಡೆದ ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಕ್ಷೇಪ ವ್ಯಕ್ತಪಡಿಸುತ್ತಾ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಕಾಮಗಾರಿ ಜವಾಬ್ದಾರಿ ಹೊತ್ತಿಕೊಂಡಿರುವ ಎಲ್ & ಟಿ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧರ್ಗಿ ಅವರ ಅಧ್ಯಕ್ಷತೆಯಲ್ಲಿ ಟೌನ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ 830 ಕೋಟಿ ರೂ. ಬೃಹತ್ ಮೊತ್ತದ ಯೋಜನೆ ಆರಂಭವಾಗಿ 3-4 ವರ್ಷ ಕಳೆದರೂ ಇದೂವರೆಗೆ ಶೇ.27ರಷ್ಟು ಮಾತ್ರ ಭೌತಿಕ ಪ್ರಗತಿ ಸಾಧಿಸಿದ್ದಕ್ಕೆ ಸರ್ವ ಸದಸ್ಯರು ಒಕ್ಕೂರಿಲಿನಿಂದ ಅಸಮಾಧಾನ ವ್ಯಕ್ತಪಡಿಸಿ, ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.
ಸಭೆಯ ಚರ್ಚೆ ಸಂದರ್ಭದಲ್ಲಿ ಕೆ.ಯು.ಐ.ಎಫ್.ಡಿ.ಸಿ. ಅಧೀಕ್ಷಕ ಅಭಿಯಂತ ಕಾಂತರಾಜು ಮಾತನಾಡಿ, ಎಲ್ & ಟಿ ಕಂಪನಿ ಇದೂವರೆಗೆ ಶೇ.65ರಷ್ಟು ಭೌತಿಕ ಪ್ರಗತಿ ಸಾಧಿಸಬೇಕಿತ್ತು, ಆದರೆ ಶೇ.26ರಷ್ಟೆ ಸಾಧಿಸಿದೆ. ವಿಳಂಬ ನೀತಿ ಕಾರಣ ಸಂಸ್ಥೆಗೆ 40 ಕೋಟಿ ರೂ. ದಂಡ, ಕಪ್ಪು ಪಟ್ಟಿಗೆ ಸೇರಿಸಲು ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲ್ ವಲ್ಲ್ಯಾಪುರ ಮಾತನಾಡಿ, ನಗರದ ಸಾರ್ವಜನಿಕರಿಗೆ ಕುಡಿಯುವ ನೀರು ಯೋಜನೆ ಇಷ್ಟೊಂದು ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ, ಎಲ್ & ಟಿ ಅಧಿಕಾರಿ ಸಂಜಯ್ ಅವರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನ ಪರಿಷತ್ ಶಾಸಕ ತಿಪ್ಪಣಪ್ಪ ಕಮಕನೂರ ಮಾತನಾಡಿ, ಕಲಬುರಗಿ ನಗರದಲ್ಲಿ 5-6 ದಿನಕ್ಕೆ ನೀರು ಬರುತ್ತವೆ. ಇಲ್ಲಿನ ಜನ ಬಡವರು. ಪ್ರತಿ ಮನೆಗೆ ಬೋರವೆಲ್ ಇಲ್ಲ. ನಲ್ಲಿ ನೀರೆ ನೆಚ್ಚಿಕೊಂಡವರು ಹೆಚ್ಚು. ಆದರೆ ನಿಮ್ಮ (ಸಂಸ್ಥೆ) ನಿಧಾನಗತಿ ಕಾರ್ಯ ಮತ್ತು ಯೋಜನೆಯಿಂದ ಜನ ಹೈರಾಣಾಗುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ನಗರದಲ್ಲಿ ಪೈಪ್‍ಲೈನ್ ಅಳವಡಿಸಲು ಕನಿಷ್ಟ ಒಂದು ಮೀಟರ್ ಅಗೆಯುವ ಬದಲು ಕೇವಲ ಒಂದೆರಡು ಅಡಿ ಮಾತ್ರ ಅಗೆದು ಪೈಪ್ ಹಾಕಲಾಗುತ್ತಿದೆ. ಪೈಕ್ ಸೇರಿದಂತೆ ಸಂಪೂರ್ಣ ಕಳಪೆ ಮಟ್ಟದಿಂದ ಕಾಮಗಾರಿ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಶಾಂತಿ ನಗರದ ಬಡಾವಣೆಯಲ್ಲಿ ಈ ಯೋಜನೆ ಕೈಗೆತ್ತಿಕೊಂಡ ಪರಿಣಾಮ ನಲ್ಲಿ ನೀರಲ್ಲಿ ಚರಂಡಿ ನೀರು ಸೇರುತ್ತಿದೆ. ಆನ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಪೂರೈಸುವುದು ಯಾವಾಗ ಎಂದು ಎಲ್ & ಟಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಶೇಖ್ ಅಜ್ಮಲ ಅಹ್ಮದ ಅಫ್ಜಲ್ ಗೋಲಾ ಮಾತನಾಡಿ, ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿ ಸ್ಥಗಿತಗೊಳಿಸಿದರೆ ಯೋಜನೆ ವಿಳಂಬಕ್ಕೆ ದಾರಿ ಮಾಡಿಕೊಡುತ್ತದೆ. ಇದರ ಬದಲಾಗಿ ಇದೇ ಸಂಸ್ಥೆಗೆ ವಿಳಂಬಕ್ಕೆ ದಂಡ ವಿಧಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಾಕೀತು ಮಾಡಬೇಕು ಮತ್ತು ಈ ಸಂಬಂಧ ವಿಶೇಷ ಸಭೆ ಕರೆಯಬೇಕೆಂದಾಗ ಮಹಾಪೌರ ವಿಶಾಲ ಧರ್ಗಿ ಇದಕ್ಕೆ ಒಪ್ಪಿಗೆ ಸೂಚಿಸಿ ಪ್ರತ್ಯೇಕ ಸಭೆ ಕರೆಯುವುದಾಗಿ ತಿಳಿಸಿ ಚರ್ಚೆಗೆ ವಿರಾಮ ಹಾಡಿದರು.
ಹೊಸ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಒಪ್ಪಿಗೆ: ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಪಾಲಿಕೆಯ ವಾಣಿಜ್ಯ ಮಳಿಗೆ ಕಟ್ಟಡ ಹಳೆಯದಾಗಿದ್ದು, ಅದನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸಲು ಮತ್ತು ಇದಕ್ಕೆ ಬೇಕಾದ ಅನುದಾನ ಕೆ.ಕೆ.ಅರ್.ಡಿ.ಬಿ.ಯಿಂದ ಪಡೆಯಲು ನಿಯೋಗ ತೆರಳಲು ಪಾಲಿಕೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತ್ತು.
ಪಾಲಿಕೆ ಸದಸ್ಯ ಮತ್ತು ಮಾಜಿ ಮಹಾಪೌರ ಸಾಜಿದ್ ಅಹ್ಮದ ಮಾತನಾಡಿ, ಪಾಲಿಕೆಯ ವಾಣಿಜ್ಯ ಮಳಿಗೆಗಳ ಸಂಖ್ಯೆ 70 ಇದ್ದು, ಪಾಲಿಕೆ ಆರ್ಥಿಕ ಆದಾಯ ವೃದ್ಧಿಸುವ ದೃಷ್ಠಿಯಿಂದ ಇದನ್ನು 100ಕ್ಕೆ ಹೆಚ್ಚಿಸಲು ಹೊಸದಾಗಿ ಕಟ್ಟಡ ನಿರ್ಮಿಸಬೇಕು ಮತ್ತು ಇದಕ್ಕಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆಯಲು ಪ್ರಸ್ತಾಪ ಮುಂದಿಟ್ಟರು. ಆಗ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ ಕೆ.ಕೆ.ಅರ್.ಡಿ.ಬಿ. ಮಂಡಳಿಯಿಂದ ಅನುದಾನ ಪಡೆದರೆ ಒಳ್ಳೆಯದು ಎಂದು ಸಲಹೆ ನೀಡಿದಾಗ ಅದಕ್ಕೆ ಸಭೆ ಸಮ್ಮತಿಸಿತು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ, ಎಸ್.ಎಫ್.ಸಿ. ಕ್ರಿಯಾ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಮೇಯರ್ ಚುನಾವಣೆ 3 ದಿನ ಮುನ್ನ ಪಾಲಿಕೆ ಆಡಳಿತಾಧಿಕಾರಿಗಳು ಸಭೆ ನಡೆಸಿ ಕೆಲವೊಂದು ತೀರ್ಮಾನ ತೆಗೆದುಕೊಂಡಿದ್ದು, ಅವುಗಳನ್ನು ಪಾಲಿಕೆ ಸಲಹಾ ಸಮಿತಿ ಮುಂದೆ ಮಂಡಿಸಬೇಕು ಎಂದು ಹಿರಿಯ ಸದಸ್ಯ ಯಲ್ಲಪ್ಪ ನಾಯ್ಕೋಡಿ ತಿಳಿಸಿದಾಗ ಸಭೆ ಅದಕ್ಕೆ ಒಪ್ಪಿಗೆ ಸೂಚಿಸಿತ್ತು.
ಸಭೆ ಆರಂಭಕ್ಕು ಮುನ್ನ ಇತ್ತೀಚೆಗೆ ಇಸ್ರೋ ಸಂಸ್ಥೆಯಿಂದ ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ದೇಶದ ವಿಜ್ಞಾನಿಗಳನ್ನು ಧನ್ಯವಾದ ಅರ್ಪಿಸುವ ಪ್ರಸ್ತಾವ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಮತು ಸಾಸಕರು ಮುಕ್ತ ಕಂಠದಿಂದ ವಿಜ್ಞಾನಿಗಳನ್ನು ಹೊಗಳಿದರು. ಎರಡೂವರೆ ವರ್ಷದ ನಂತರ ಸಾಮಾನ್ಯ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಅಗಲಿದ ಪುನೀತ್ ರಾಜಕುಮಾರ, ಲತಾ ಮಂಗೇಶ್ಕರ್ ಸೇರಿದಂತೆ ಕಲಬುರಗಿ ನಗರ ಮತ್ತು ನಾಡಿನ ಅನೇಕ ಗಣ್ಯರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಗಮ್ಮ ಎಸ್. ಇನಾಂದಾರ, ಸಾರ್ವಜನಿಕ ಅರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಶಾಲ ನವರಂಗ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹ್ಮದ್ ಸಿದ್ಧಿ ಶಾರಿಫೂರ್ ಹಾಗೂ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಿದ್ ಕಲ್ಯಾಣಿ, ಪಾಲಿಕೆಯ ಅನೇಕ ಸದಸ್ಯರು, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ (ಆಡಳಿತ) ಮಾಧವ, ಉಪ ಆಯುಕ್ತ (ಅಭಿವೃದ್ದಿ) ಆರ್.ಪಿ.ಜಾಧವ, ಉಪ ಆಯುಕ್ತ (ಕಂದಾಯ) ಪ್ರಹ್ಲಾದ ಕುಲಕರ್ಣಿ, ಪರಿಷತ್ ಕಾರ್ಯದರ್ಶಿ ಸಾವಿತ್ರಿ ಸಲಗರ್, ಕಾರ್ಯನಿರ್ವಾಹಕ ಅಭಿಯಂತರರಾದ ಶಿವಣ್ಣಗೌಡ ಪಾಟೀಲ, ಎ.ಎಸ್.ಪಾಟೀಲ ಸೇರಿದಂತೆ ಪಾಲಿಕೆಯ ವಲಯ ಆಯುಕ್ತರು, ಇತರೆ ಅಧಿಕಾರಿ-ಸಿಬ್ಬಂದಿಗಳು ಇದ್ದರು.