ಕಲಬುರಗಿ: ಸಾಮಾಜಿಕ ಸುರಕ್ಷಾ ಮಸೂದೆ ೨೦೧೮ ಜಾರಿಗೊಳಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬುಧವಾರ ನಗರದಲ್ಲಿ ಕಟ್ಟಡ ಕಾರ್ಮಿಕರು ಅಂಚೆ ಪತ್ರ ಚಳುವಳಿ ಹಮ್ಮಿಕೊಂಡಿದ್ದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಯಶವಂತ್ ಮಾಲಿಪಾಟೀಲ್, ದೇವಿಂದ್ರ ಎಸ್. ಕಟ್ಟಿಮನಿ, ನಾಗಯ್ಯಸ್ವಾಮಿ, ಹಣಮಂತರಾಯ್ ಬಿ. ಪೂಜಾರಿ, ಬಾಬು ಹೂವಿನಹಳ್ಳಿ, ಪ್ರಶಾಂತ್ ಎ. ತಾಳಮಡಗಿ, ಶಾಮರಾಯ್ ಹಾಗರಗಿ, ಲಕ್ಷ್ಮಣ್ ನಂದೂರ್, ಶರಣಪ್ಪ ಉಪ್ಪಾರ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಪ್ರಧಾನ ಅಂಚೆ ಅಧೀಕ್ಷಕರ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಈಗಾಗಲೇ ನೋಟು ಅಮಾನ್ಯೀಕರಣದಿಂದ ಹಾಗೂ ಜಿಎಸ್‌ಟಿ ನೀತಿಗಳಿಂದಾಗಿ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಲಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಾಮಾಜಿಕ ಸುರಕ್ಷಾ ಮಸೂದೆ ೨೦೧೮ ಜಾರಿಗೊಳಿಸುವ ಮೂಲಕ ನಾಲ್ಕು ಕೋಟಿ ಕಟ್ಟಡ ಕಾರ್ಮಿಕರು ಈಗ ಪಡೆಯುತ್ತಿರುವ ಸೌಲಭ್ಯಗಳಿಂದ ವಂಚನೆಗೊಳಗಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಮಸೂದೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾನೂನು ೧೯೯೬ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಸೆಸ್ ಕಾನೂನು ಸೇರಿದೆ ಎಂಬುದು ಆತಂಕಕಾರಿಯಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಕರ್ನಾಟಕದ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿ ಆರು ಲಕ್ಷ ಜನರು ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಹಾಕಿದ್ದಾರೆ. ಅವರೆಲ್ಲರೂ ೧೪ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ, ಹೊಸ ಕಾನೂನು ಜಾರಿಯಾದರೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಸೌಲಭ್ಯಗಳು ಇಲ್ಲದಂತೆ ಆಗುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.