ಸುರಪುರ: ನಗರದಲ್ಲಿ ಬೈಕ್ ಮತ್ತು ಇತರೆ ವಾಹನಗಳ ಪಾರ್ಕಿಂಗ್‍ಗೆ ಒಂದು ಸರಿಯಾದ ಜಾಗ ಇಲ್ಲದ್ದರಿಂದ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ,ಇದರಿಂದ ಟ್ರಾಫಿಕ್ ತೊಂದರೆಯು ಆಗಲಿದೆ,ಆದ್ದರಿಂದ ಪೊಲೀಸ್ ಇಲಾಖೆ ಕೇವಲ ಬೈಕ್ ಸವಾರರಿಗೆ ದಂಡ ಹಾಕುವ,ಬೈಕ್‍ಗಳ ಪ್ಲಗ್ ಕಿತ್ತುವ ಮೂಲಕ ವಾಹನ ಸವಾರರಿಗೆ ವಿನಾಕಾರಣ ತೊಂದರೆ ಮಾಡಲಾಗುತ್ತಿದೆ,ಮೊದಲು ಬೈಕ್‍ಗಳ ನಿಲುಗಡೆಗೆ ಒಂದು ಸ್ಥಳವನ್ನು ಮಾಡಿಕೊಟ್ಟು ನಂತರ ದಂಡ ಹಾಕಲು ಮುಂದಾಗಲಿ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಒಕ್ಕೂಟ ದಿಂದ ರಸ್ತೆ ತಡೆ ನಡೆಸಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದಿಂದ ಬಂದವರಿಗೆ ಬೈಕ್‍ಗಳನ್ನು ನಿಲ್ಲಿಸಲು ಗೊತ್ತಾಗದೆ ರಸ್ತೆ ಬದಿಗಳಲ್ಲಿ ನಿಲ್ಲಿಸುತ್ತಾರೆ,ಪೊಲೀಸರು ಬಂದು ದಂಡ ಹಾಕಲು ಬೈಕ್‍ಗಳ ಪ್ಲಗ್ ಕಿತ್ತಲು ಮುಂದಾಗುತ್ತಾರೆ,ಬರಗಾಲದಲ್ಲಿ ಹಣವಿಲ್ಲದೆ ಬರುವ ಹಳ್ಳಿ ಜನ ಪ್ಲಗ್ ಹಾಕಿಸಲು ನೂರಾರು ರೂಪಾಯಿಗೆ ಕಣ್ಣಿರು ಸುರಿಸುವಂತಾಗುತ್ತದೆ,ಮೊದಲು ಪೊಲೀಸ್ ಇಲಾಕೆ ಬೈಕ್‍ಗಳ ನಿಲ್ಲಿಸಲು ಒಂದು ಜಾಗ ತೋರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ವಾಗಣಗೇರ ಗ್ರಾಮ ಪಂಚಾಯತಿ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳ ಹೆಸರಲ್ಲಿ ನಕಲಿ ಜಾಬ್ ಕಾರ್ಡ್ ಮಾಡಿಸಿ ಹಣ ಲೂಟಿ ಮಾಡಲಾಗಿದೆ ತನಿಖೆ ನಡೆಸಬೇಕು,ಕೆಬಿಜೆಎನ್‍ಎಲ್ ಭೀಮರಾಯನಗುಡಿ,ನಾರಾಯಣಪುರ ಜೋನ್ ಅಧಿಕಾರಿಗಳು ಗುತ್ತಿಗೆದಾರರಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ,ಇದರ ಕುರಿತು ಲೋಕಾಯುಕ್ತರು ತನಿಖೆ ನಡೆಸಬೇಕು,ತಾಲೂಕಿನಾದ್ಯಂತ ಅರ್ಧಂಬರ್ಧ ಆಗಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸಬೇಕು,ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಇಡೇರಿಸುವಂತೆ ಒತ್ತಾಯಿಸಿದರು.
ನಂತರ ಲೋಕಾಯುಕ್ತರಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೌನೇಶ,ತಾಲೂಕು ಅಧ್ಯಕ್ಷ ಕೇಶವ ನಾಯಕ,ಹಣಮಂತ್ರಾಯ,ದಾವಲಸಾಬ್,ರಮೇಶಗೌಡ,ವೆಂಕಟೇಶ ಬಿಚಗತ್ತಿಕೇರ,ಹಣಮಂತ್ರಾಯ ಬಿಚಗತ್ತಿಕೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.