ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೋಮವಾರ ಕಲಬುರಗಿ ತಾಲೂಕಿನ ಪಟ್ಟಣ ನಾಡ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿ.ಡಿ.ಓ ಅವರೊಂದಿಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಲು ಆಗಮಿಸಿದ ಸಾರ್ವಜನಿಕರನ್ನು ಮಾತಾಡಿಸಿ ಕಚೇರಿಯಲ್ಲಿ ಕಾಲಮಿತಿಯಲ್ಲಿ ಸೇವೆ ಲಭ್ಯವಾಗುತ್ತಿದಿಯೇ ಎಂದು ವಿಚಾರಿಸಿದರು. ಪೀರಮ್ಮ ಎಂಬ ವೃದ್ಧೆ ಆಧಾರ್ ನೊಂದಣಿಗೆ ಬಯೋಮೆಟ್ರಿಕ್ ನೀಡುತ್ತಿರುವ ಪ್ರಕ್ರಿಯೆ ಕುರಿತು ಖುದ್ದಾಗಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ ಕಚೇರಿಯಲ್ಲಿ ಪಟ್ಟಣ ಹೋಬಳಿ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಾಮಾಜಿಕ ಭದ್ರತೆ ಯೋಜನೆ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ವೇಗ ಹೆಚ್ಚಿಸಬೇಕು, ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಮತ್ತು ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಮತದಾರರ ನೊಂದಣಿ ಜಾಗೃತಿ: ಪಟ್ಟಣದ ಪದವಿ ಪೂರ್ವ ಕಾಲೇಜಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಲ್ಲಿ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಅರ್ಹರು ಹೆಸರು ಸೇರಿಸುವಂತೆ ಮನವಿ ಮಾಡಿದರು. ನಂತರ ಕೆಲವೊಂದು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ಸಹ ವೀಕ್ಷಿಸಿದರು.
ಕಲಬುರಗಿ ತಹಶೀಲ್ದಾರ ನಾಗಮ್ಮ ಕಟ್ಡಿಮನಿ, ಪಟ್ಟಣ ಉಪ ತಹಶೀಲ್ದಾರ ವೀರಯ್ಯ ಸ್ವಾಮಿ, ಕಂದಾಯ ನಿರೀಕ್ಣಕ ರೇವಣಸಿದ್ದಪ್ಪ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಸೇರಿದಂತೆ ಇನ್ನಿತರ ಕಂದಾಯ ಸಿಬ್ಬಂದಿಗಳು ಇದ್ದರು..