ಬೀದರ: ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ 28 ಗ್ರಾಮಗಳ ನೂರಾರು ರೈತ ಸಂತ್ರಸ್ತರು, ಮಹಿಳೆಯರ ಸಭೆಯು ಕಲ್ಯಾಣ ಕರ್ನಾಟಕ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜರುಗಿತು.
ಈ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹೊಚಕನಳ್ಳಿ ವಹಿಸಿದ್ದರು. ಸಭೆ ಉದ್ದೇಶಿಸಿ ಮಾತಾಡಿದ ಲಕ್ಷ್ಮಣ ದಸ್ತಿಯವರು ಸಿದ್ದರಾಮಯ್ಯ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಸದನದಲ್ಲಿ ಅಧಿಕೃತವಾಗಿ ಸಂತ್ರಸ್ತರ ಸಮಸ್ಯೆಯ ಪರಿಹಾರ ಬಗ್ಗೆ ಬೆಂಗಳೂರಿನಲ್ಲಿ ಅಧಿಕೃತ ಸಭೆ ನಡೆಸುವ ಬಗ್ಗೆ ಹೇಳಿದ್ದರು.
ಆದರೆ ಆ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವದು ಖೇದಕರ ವಿಷಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರ ಸಮಸ್ಯೆ ಪರಿಹರಿಸುವದು ಅವರ ಕರ್ತವ್ಯವಾಗಿದೆ. ಮುಂದುವರೆದು ಅವರು ಕಾರಂಜಾ ಸಂತ್ರಸ್ತರ ಬೇಡಿಕೆಯ ಹೋರಾಟ ಉಗ್ರ ಸ್ವರೂಪ ನೀಡಲು ಮತ್ತು ಇದಕ್ಕೆ ಪೂರಕವಾಗಿ 28 ಗ್ರಾಮಗಳ ಮತ್ತು ಬೀದರ ಜಿಲ್ಲೆಯಲ್ಲಿ ಸಂಘಟನೆ ಮಾಡಿ ಹೋರಾಟಗಳನ್ನು ಹಮ್ಮಿಕೊಳ್ಳಲು ಕರೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಮತ್ತು ಮಹಿಳೆಯರು ಮಾಡು ಇಲ್ಲವೇ ಮಡಿ ಎಂಬ ತತ್ವದಂತೆ ತಾವು ಹೋರಾಟಕ್ಕೆ ಪ್ರತಿಜ್ಞೆ ಮಾಡುತ್ತೇವೆಂದು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಭೆಯಲ್ಲಿ ಸರ್ವಾನುಮತದಿಂದ ಹೋರಾಟಕ್ಕೆ ತೀವ್ರ ಸ್ವರೂಪ ನೀಡಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಚಂದ್ರಶೇಖರ ಪಾಟೀಲ ರವರು ಮಾತನಾಡಿ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿಯವರು ಸಭೆಯಲ್ಲಿ ಮಂಡಿಸಿರುವಂತೆ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ವಿವರಿಸಿದರು.
ಈ ಮಹತ್ವದ ಸಭೆಯಲ್ಲಿ ಮಹೇಶಕುಮಾರ ಮುಲಗೆ,ಸಂಗಪ್ಪಾ ಪಾಟೀಲ, ಕೇದರನಾಥ ಪಾಟೀಲ, ಬಸವರಾಜ ನಾರಾ, ಚಂದ್ರಶೇಖರ ವಡ್ಡಿ, ನಾಗಶೆಟ್ಟಿ ಹಚ್ಚೆ, ರಾಜಪ್ಪಾ ಕೋಸಂ, ಸುಧಾಕರ ಸ್ವಾಮಿ, ವಿಶ್ವನಾಥ ಸ್ವಾಮಿ, ಬಸವರಾಜ ಹಿಂದಾ, ಸಂಗಾರೆಡ್ಡಿ ಔರಾದ್(S), ಭೀಮರೆಡ್ಡಿ ಔರಾದ್(S), ಮಹೇಶ ಕಮಲಪೂರ,ರೋಹನ್, ರಾಮಶೆಟ್ಟಿ, ಲಕ್ಷ್ಮಿಬಾಯಿ, ಪ್ರಭಾವತಿ, ನಾಗಮ್ಮಾ ಸೇರಿದಂತೆ ನೂರಾರು ಜನ ರೈತ ಸಂತ್ರಸ್ತರು ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.