ಈಶಾನ್ಯ ಪದವೀಧರ ಕ್ಷೇತ್ರ ಮತದಾರರ ಕರಡು ಪಟ್ಟಿ ಪ್ರಕಟ: ಕಲಬುರಗಿಯಲ್ಲಿ 35,846 ಜನ ನೋಂದಣಿ

0
59

ಅಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರ ವರೆಗೆ ಅವಕಾಶ; ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಕರಡು ಪಟ್ಟಿ ಬುಧವಾರ ಪ್ರಕಟಗೊಂಡಿದ್ದು, ಕ್ಷೇತ್ರದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯಲ್ಲಿ ನವೆಂಬರ್ 6ರ ವರೆಗೆ 211,97 ಪುರುಷರು, 14,644 ಮಹಿಳೆಯರು ಹಾಗೂ ಇತರೆ 5 ಸೇರಿ ಒಟ್ಟಾರೆ 35,846 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಸಹಾಯಕ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 6ರ ವರೆಗೆ ನಮೂನೆ 18ರಲ್ಲಿ 36,780 ಅರ್ಜಿ ಸಲ್ಲಿಸಿದ್ದು, ಇದರಲ್ಲಿ 35,846 ಅರ್ಜಿ ಸ್ವೀಕೃತವಾದರೆ 934 ಅರ್ಜಿ ತಿರಸ್ಕೃತವಾಗಿವೆ ಎಂದು ವಿವರಿಸಿದರು.

Contact Your\'s Advertisement; 9902492681

ಕರಡು ಮತದಾರರ ಪಟ್ಟಿಯನ್ನು ಇಂದು ಸಾರ್ವಜನಿಕವಾಗಿ ಜಿಲ್ಲಾಧಿಕಾರಿಗಳ, ತಹಶೀಲ್ದಾರ, ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮತ್ತು www.ceo.karnataka.gov.in ರಲ್ಲಿ ಪ್ರಕಟಿಸಲಾಗಿದೆ. ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರ ವರೆಗೆ ಅವಕಾಶ ನೀಡಲಾಗಿದೆ. ಸ್ವೀಕೃತ ಅಕ್ಷೇಪಣೆಯನ್ನು ಡಿಸೆಂಬರ್ 25 ರೊಳಗೆ ವಿಲೇವಾರಿ ಮಾಡಿ ಮತದಾರರ ಅಂತಿಮ ಪಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಕುರಿತು ವಿವರಿಸಿದರು.

ಕರಡು ಪಟ್ಟಿ ಪ್ರಕಾರ ಅಫಜಲಪೂರನಲ್ಲಿ 1,477 ಪುರುಷ, 546 ಮಹಿಳೆ ಸೇರಿ 2,023, ಜೇವರ್ಗಿಯಲ್ಲಿ 1,300 ಪುರುಷ, 479 ಮಹಿಳೆ ಸೇರಿ 1,779, ಚಿತ್ತಾಪೂರದಲ್ಲಿ 1,244 ಪುರುಷ, 839 ಮಹಿಳೆ ಸೇರಿ 2,083, ಸೇಡಂನಲ್ಲಿ 2,376 ಪುರುಷ, 1,455 ಮಹಿಳೆ ಸೇರಿ 3,831, ಚಿಂಚೋಳಿಯಲ್ಲ್ಲಿ 1,383 ಪುರುಷ, 744 ಮಹಿಳೆ ಸೇರಿ 2,127, ಗುಲಬರ್ಗಾ ಗ್ರಾಮೀಣದಲ್ಲಿ 1,052 ಪುರುಷ, 623 ಮಹಿಳೆ ಸೇರಿ 1,675, ಗುಲಬರ್ಗಾ ನಗರದಲ್ಲಿ 7,051 ಪುರುಷ, 7,211 ಮಹಿಳೆ, ಇತರೆ 3 ಸೇರಿ 14,265, ಆಳಂದನಲ್ಲಿ 2,165 ಪುರುಷ, 1,025 ಮಹಿಳೆ ಸೇರಿ 3,190, ಕಮಲಾಪೂರದಲ್ಲಿ 1,110 ಪುರುಷ, 632 ಮಹಿಳೆ, ಇತರೆ 2 ಸೇರಿ 1,744, ಕಾಳಗಿಯಲ್ಲಿ 605 ಪುರುಷ, 287 ಮಹಿಳೆ ಸೇರಿ 892, ಶಹಾಬಾದನಲ್ಲಿ 529 ಪುರುಷ, 516 ಮಹಿಳೆ ಸೇರಿ 1,045 ಹಾಗೂ ಯಡ್ರಾಮಿಯಲ್ಲಿ 905 ಪುರುಷ, 287 ಮಹಿಳೆ ಸೇರಿ 1,192 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಮತ ಸಂವಿಧಾನಬದ್ಧ ಹಕ್ಕು: ಮತ ಸಂವಿಧಾನ ಬದ್ಧ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರಿಸಿ ಮತದಾನ ಮಾಡಬೇಕು. ಯುವ ಪದವೀಧರ ಮತದಾರರ ನೊಂದಣಿ ಹೆಚ್ಚಳಕ್ಕೆ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದೆ. ಪ್ರತಿ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ 41 ಮತಗಟ್ಟೆ ಗುರುತಿಸಿದೆ. ಈ ಹಿಂದಿನ 2017ರ ಚುನಾವಣೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ ಸಂದರ್ಭದಲ್ಲಿ 13,940 ಮತದಾರರಿದ್ದರು, ವ್ಯಾಪಕ ಪ್ರಚಾರದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ನೊಂದಣಿಯಾಗಿದೆ. ನೊಂದಣಿ ಪ್ರಕ್ರಿಯೆ ನಿರಂತರವಾಗಿದ್ದು, ಇನ್ನು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು.

ಹೆಸರು ನೊಂದಾಯಿಸುವಂತೆ ಮನವಿ: ದಿ.01.11.2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಪದವಿ ಉತ್ತೀರ್ಣದ ಅಂಕಪಟ್ಟಿ, ವಾಸ್ಥಳದ ಪುರಾವೆಗೆ ಆಧಾರ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಅಥವಾ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಮತದಾರರ ನೊಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕದ ವರೆಗೂ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here