ಕಲಬುರಗಿ; ಇದೇ ಡಿ. 5 ರಂದು ನಡೆಯಲಿರುವ ತಮ್ಮ 67 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಅಲ್ಲಂಪ್ರಭು ಪಾಟೀಲ್ ನಿರ್ಧರಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಮೊದಲೇ ಬರಗಾಲ ಬಿದ್ದಿದೆ, ಜನ- ಜಾನುವಾರು ಸುತ್ತಮುತ್ತ ಸಂಕಷ್ಟದ ಹುತ್ತ ಬೆಳೆದು ನಿಂತಿದೆ. ಬೆಳೆಗಳು ಹಾಳಾಗಿವೆ. ಇಳುವರಿ ಬಾರದಾಗಿದೆ. ಹಸಿಬರಗಾಲದಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಹೊರಗೆ ಕಾಯಿ ಕಂಡರೂ ಒಳಗೆ ಟೊಳ್ಳಾಗಿದೆ. ಹೀಗಾಗಿ ಇಳುವರಿ ಬಿದ್ದು ಹೋಗುವ ಭಯ ಆರಿಸಿದೆ.
ಇಂತಹ ಕಷ್ಟಕಾಲದಲ್ಲಿ ರೈತರು, ಜನರ ಸಂಕಷ್ಟದಲ್ಲಿ ಭಾಗಿಯಾಗಲು, ಅವರ ನೋವು- ಯಾತನೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬಾರಿಯ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ತಾಳಿರೋದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಹುಟ್ಟುಹಬ್ಬದ ದಿನವಾದ ಡಿ. 5 ರಂದು ತಾವು ಕಲಬುರಗಿಯಲ್ಲಿರೋದಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಯಾರೂ ಸರಳ, ವಿಜೃಂಭಣೆ ಎಂದು ಯಾವುದೇ ರೀತಿಯಲ್ಲಿಯೂ ಹುಟ್ಟುಹಬ್ಬ ಆಚರಿಸುವುದು ಬೇಡ. ಜನರ ಸಂಕಷ್ಟದಲ್ಲಿ ನಾವು- ನಾವೆಲ್ಲರೂ ಭಾಗಿಯಾಗಿ ಅವರಿಗೆ ನೆರವಿನ ಹಸ್ತ ಚಾಚೋಣ. ಈ ದಿಶೆಯಲ್ಲಿ ಸದನದ ಒಳಗೂ- ಹೊರಗೂ ತಾವು ನಿರಂತರ ಹೋರಾಟ ನಡೆಸೋದಾಗಿಯೂ ಶಾಸಕ ಅಲ್ಲಂಪ್ರಭು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.