ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ ಸಂವಿಧಾನದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಸರ್ಕಾರದ ದ್ವಂದ ನೀತಿಗಳು ಮತ್ತು ಮಲತಾಯಿ ಧೋರಣೆಯಿಂದ ಕಲ್ಯಾಣದ ಅಭ್ಯರ್ಥಿಗಳಿಗೆ ನೇಮಕಾತಿಗೆ ಹೊರಡಿಸಿದ ಸುತ್ತೋಲೆಗೆ ಹಿನ್ನಡೆಯಾಗಿ ಅನ್ಯಾಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸಂವಿಧಾನದ 371ನೇ ಜೇ ಕಲಂ ವಿಶೇಷ ಸ್ಥಾನಮಾನ ಜಾರಿಯಾದ ನಂತರ ಸ್ಪಷ್ಟ ನಿಲುವು ಅನುರಿಸದೆ, ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಕಾಟಾಚಾರದ ಧೋರಣೆ ಅನುಸರಿಸುತ್ತಿದೆ.ಈ ಕಾರಣದಿಂದಲೇ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಗೆ ಅನುಸರಿಸಿದ ಸುತ್ತೋಲೆ ಕೆಎಟಿಯಲ್ಲಿ ರದ್ದಾಗಿದೆ.ಇಂತಹ ಘಟನೆಗಳು ನ್ಯಾಯಾಲಯದಲ್ಲಿ ಆಗಬಾರದೆಂಬ ಕಾರಣಕ್ಕೆ ಸಂವಿಧಾನದ 371ನೇ ಜೇ ಸ್ಥಾನಮಾನ ಹೋರಾಟ ಮಾಡಿ, ರಾಜಕೀಯ ಇಚ್ಛಾಶಕ್ತಿಯಿಂದ ಪಡೆದಿದ್ದೇವೆ.
ಕಳೆದ ಒಂದು ದಶಕದಿಂದ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲು ನಿರಂತರ ಒತ್ತಾಯ ಹೋರಾಟ ಮಾಡಿದರು ನಮ್ಮ ಸಚಿವರು, ಶಾಸಕರು ದಿಟ್ಟತನದ ಧೋರಣೆ ಅನುಸರಿಸದೆ ರಾಜಕೀಯ ಇಚ್ಛಾಶಕ್ತಿ ತೋರಿಸದೆ ನಿರ್ಲಕ್ಷ ಮಾಡುತ್ತಿದ್ದಾರೆ.
ಸರ್ಕಾರದ ಅಡ್ವೋಕೇಟ್ ಜನರಲ್ ಸೇರಿದಂತೆ ಕಾನೂನು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂದು ಕೆಎಟಿಯಲ್ಲಿ ಕಲ್ಯಾಣದ ಅಭ್ಯರ್ಥಿಗಳ ನೇಮಕಾತಿಗೆ ಸರ್ಕಾರ ಹೊರಡಿಸಿದ ಸುತ್ತೋಲೆಗೆ ಹಿನ್ನಡೆಯಾಗಿ ರದ್ದಾಗಿರುವದು ಖೇದಕರ್ ಸಂಗತಿಯಾಗಿದೆ.ಇದು ಸರ್ಕಾರದ ನಿರ್ಲಕ್ಷತನ ಮತ್ತು ಕಲ್ಯಾಣ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಸರ್ಕಾರ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಪೂರಕವಾಗಿ ತಕ್ಷಣ ಸ್ಪಂದಿಸಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾನದಂಡದ ನೀತಿ ಅನುಸರಿಸಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಗಳಲ್ಲಿ ಮತ್ತು ಮುಂಬಡ್ತಿಗಳಲ್ಲಿ ನ್ಯಾಯ ಒದಗಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಸರ್ಕಾರ ಈ ವಿಷಯಕ್ಕೆ ಗಂಭೀರವಾಗಿ ಪರಿಗಣಿಸದೆ ಮಲತಾಯಿ ಧೋರಣೆ ಅನುಸರಿಸಿದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.