ಕಲಬುರಗಿ: ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳು ಬಿಕರಿಯಾಗುತ್ತಿವೆ. ಅನರ್ಹರಿಗೆ ಪ್ರಶಸ್ತಿ ನೀಡಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರಶಸ್ತಿಯ ಮರ್ಯಾದೆ ಹರಾಜಾಗಬಾರದು ಬದಲಿಗೆ ಪಡೆದ ವ್ಯೆಕ್ತಿಯಿಂದ ಪ್ರಶಸ್ತಿಯ ಗರಿಮೆ ಹೆಚ್ಚಾಗಬೇಕು ಎಂದು ಬೀದರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ತಿಳಿಸಿದರು.
ಡೊಂಗರಗಾಂವ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನಗರದ ಹೊಸ ಆರ್ ಟಿ ಓ ಕ್ರಾಸ್ ಬಳಿಯ ರಂಗಾಯಣದಲ್ಲಿ ಭಾನುವಾರ ಆಯೋಜಿಸಿದ್ದ 7ನೇ ವರ್ಷದ ಅವ್ವ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಿಂದ ಕಿತ್ತುಕೊಂಡು ಸಮಾಜ ಸೇವೆ ಮಾಡುವುದಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಪರರಿಗೆ ಸಹಾಯ ಸಹಕಾರ ನೀಡುವುದು ಸಮಾಜ ಸೇವೆ. ಯಾರಿಂದಲೂ 1 ರೂಪಾಯಿ ಹಣ ಪಡೆಯದೆ. ತಮ್ಮ ತಾಯಿ ಹೆಸರಿನಲ್ಲಿ 7 ವರ್ಷದಿಂದ ಸತತ ಅವ್ವ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಜೊತೆಗೆ ಅರ್ಹರನ್ನ ಮಾತ್ರ ಆಯ್ಕೆ ಮಾಡುತ್ತಿರುವ ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ ಅವರ ನಡೆ ಮಾದರಿಯಾಗಿದೆ.ನಮ್ಮ ಆಲೋಚನೆಗಳನ್ನು ಕೃತಿ ರೂಪದಲ್ಲಿ ಹೊರ ತರುವುದು ಅವಶ್ಯಕ ಇಂದು ಒಳ್ಳೊಳ್ಳೆ ಗ್ರಂಥಗಳು ಬಿಡುಗಡೆಯಾಗಿರುವ ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರಕಾಶಕರಾದ ಬಸವರಾಜ ಕೊನೆಕ್ ಅವರು ಮಾತನಾಡಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವ್ಯವಹಾರಿಕ ದೃಷ್ಟಿಕೋನ ಹೆಚ್ಚುತ್ತಿದೆ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿರುವ ಹೊತ್ತಿನಲ್ಲಿ ಮಾನವೀಯ ಸಂಬಂಧಗಳು ಬಲಪಡಿಸುವ ಅಗತ್ಯವಿದೆ. ಜಗತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ನಮ್ಮೊಳಗಿನ ಮಾನವೀಯ ಸಂಬಂಧಗಳು ದೂರವಾಗಬಾರದು, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಸಿಥಿಲವಾಗುತ್ತಿರುವುದು ಕಳವಳಕಾರಿ ಸಂಗತಿ ಆಗಿದೆ ಪರಿವಾರಿಕ ವಾತಾವರಣ ಸೃಷ್ಟಿಯಾಗಬೇಕಿದೆ ನಮ್ಮತನ ಅರಿತಾಗ ಮಾತ್ರ ನಮ್ಮ ಸಂಸ್ಕೃತಿಗಳು ಸಾಧ್ಯ.
ತಾಯಿ ಪರಿವಾರದ ಕೇಂದ್ರ ಬಿಂದು ಆಯ್ಕೆಯನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಮಕ್ಕಳಿಗಾಗಿ ತನ್ನ ಬದುಕೆಲ್ಲ ಸವೆಸುವ ತಾಯಿ ಋಣ ತೀರಿಸಲು ಯಾವತ್ತಿಗೂ ಸಾಧ್ಯವಿಲ್ಲ ಅಣ್ಣ -ತಮ್ಮ ಅಕ್ಕ -ತಂಗಿ ಚಿಕ್ಕಪ್ಪ- ದೊಡ್ಡಮ್ಮ ಅಜ್ಜ -ಅಜ್ಜಿ ಸೇರಿದಂತೆ ಇತರೆ ಸಂಬಂಧಗಳು ಮತ್ತೆ ಗಟ್ಟಿ ಗೊಳ್ಳಬೇಕಾಗಿದೆ ಇವತ್ತಿನ ಸ್ವಾರ್ಥ ಬದುಕಿನಲ್ಲಿ ಎಲ್ಲವೂ ಕಣ್ಮರೆಯಾಗುತ್ತಿರುವುದು ನಮ್ಮ ಅಧ:ಪತನದ ಸಂಕೇತವಾಗಿದ್ದು ಇನ್ನಾದರೂ ಎಲ್ಲರೂ ಜಾಗೃತೆಗೊಳ್ಳಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ, ಕಾಶಿನಾಥ್ ಪಾಟೀಲ, ಚಿದಾನಂದ ಚಿಕ್ಕಮಠ,ಮಧುರ ಕರಣಂ ಅವರು ರಚಿಸಿರುವ ಕೃತಿಗಳನ್ನು ಬಿಡುಗಡೆಗೊಳಿಸಿದರು. ಬೆಂಗಳೂರಿನ ಮಲ್ಲಿಕಾರ್ಜುನ ಕಡಕೋಳ ಅವರ ‘ಮುಟ್ಟು’ ಕೃತಿಗೆ ಶೃತಿ.ಬಿ.ಆರ್ ಅವರ ‘ಜೀರೋ ಬ್ಯಾಲೆನ್ಸ್’ ಕೃತಿಗೆ ಕಲಬುರಗಿಯ ಕಾವ್ಯಶ್ರೀ ಮಹಾಗಾಂವಕರ್ ಅವರ ‘ಒಳಕಲ್ಲು ಒಡಲು’ ಕೃತಿಗೆ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಎಸ್.ಎ.ಪಾಟೀಲ, ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಪ್ರೊ.ರಮೇಶ ಲಂಡನಕರ್, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಶೈಲ ನಾಗರಾಳ ಅವರಿಗೆ ‘ಅವ್ವ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು. ಬಬಲಾದಿನ ಪರಮಪೂಜ್ಯರಾದ ಗುರುಪಾದಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶ್ರೀಮತಿ ಕಾಶಿಬಾಯಿ ಹರಕಂಚಿ,ಅಪ್ಪಾರಾವ ಅಕ್ಕೋಣೆ,ಮಲ್ಲಿಕಾರ್ಜುನ ವಡ್ಡನಕೇರಿ,ಶರಣ ಗೌಡ ಪಾಟೀಲ ಪಾಳಾ, ಡಾ. ನಾಗಪ್ಪ ಗೋಗಿ ಡಾ.ಶರಣಬಸಪ್ಪ ವಡ್ಡನಕೇರಿ,ಡಾ. ಸೂರ್ಯಕಾಂತ ಪಾಟೀಲ, ಶಿವಾನಂದ ಕಶೆಟ್ಟಿ , ಅಂಬಾರಾಯ ಮಡ್ಡೆ, ಮತ್ತಿತರರು ಇದ್ದರು.
ಜೀವಿತ ಕಾಲದಲ್ಲಿ ಪೋಷಣೆ ಮಾಡದ ಇಂದಿನ ಕಾಲದಲ್ಲಿ, ತಮ್ಮ ತಾಯಿ ತೀರಿದ ಮೇಲೂ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಜನಮಾನಸದಲ್ಲಿ ಅವರ ಹೆಸರು ಅಚ್ಚಳಿಯದಂತೆ ಪಡಮೂಡಿಸಿದ ಶರಣಬಸಪ್ಪ ವಡ್ಡನಕೇರಿ ನಡೆ ಪ್ರಶಂಸನೀಯ. -ಕಾವ್ಯಶ್ರೀ ಮಹಾಗಾಂವಕರ.